ವಿಜಯಪುರ: ಕೊರೊನಾ 3ನೇ ಅಲೆ ತಡೆಗಟ್ಟಲು ಗಡಿ ಭಾಗದಲ್ಲಿ ಕೈಗೊಳ್ಳಲಾಗಿರುವ ತಪಾಸಣೆ ಕ್ರಮಗಳನ್ನು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಪರಿಶೀಲನೆ ನಡೆಸಿದ್ದಾರೆ.
ರಾತ್ರಿ ವೇಳೆ ಇಂಡಿ ತಾಲೂಕಿ ಧೂಳಖೇಡ ಚೆಕ್ ಪೋಸ್ಟ್ ಗೆ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಹಾಗೂ ನಾನಾ ಇಲಾಖೆಗಳ ಹಿರಿಯ ಅಧಿಕಾರಿಗಳು, ಅಲ್ಲಿನ ಸಿಬ್ಬಂದಿಯ ಕಾರ್ಯವೈಖರಿ ಪರಿಶೀಲೆ ನಡೆಸಿದರು.
ಚೆಕ್ ಪೋಸ್ಟ್ ನಲ್ಲಿ ಹೆಚ್ಚಿನ ಕಟ್ಟೆಚ್ಚರ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸೂಚನೆ ನೀಡಿದ ಜಿಲ್ಲಾಧಿಕಾರಿಗಳು, ಕೊವೀಡ್ 3ನೇ ಅಲೆ ಅಪಾಯದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಿಂದ ಆಗಮಿಸುವ ನಾಗರಿಕರ ಬಗ್ಗೆ ತೀವ್ರ ನಿಗಾ ಇಡಬೇಕು. ಯಾವುದೇ ಲೋಪಕ್ಕೆ ಅವಕಾಶ ನೀಡದೆ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಇಂಡಿ ಉಪವಿಭಾಗಾಧಿಕಾರಿ ರಾಹುಲ್ ಶಿಂಧೆ ಸೇರಿದಂತೆ ನಾನಾ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.