ವಿಜಯಪುರ: ನಮ್ಮ ಬಗ್ಗೆ ನಮಗೆ ಹೆಮ್ಮೆ ಇರಬೇಕೇ ಹೊರತು ಸೊಕ್ಕಿರಬಾರದು. ಸೊಕ್ಕಿಗೂ ಒಂದು ಮಿತಿ ಇರಬೇಕು ಎಂದು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಅವರು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಲ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಇನ್ನೂ 20 ವರ್ಷಗಳ ಕಾಲ ರಾಜಕೀಯದಲ್ಲಿರುತ್ತೇನೆ. 2040 ರವರೆಗೂ ರಾಜಕೀಯದಲ್ಲಿಯೇ ಇರುತ್ತೇನೆ. ಈಗ ಕೆಲವರನ್ನು ಮಾಜಿ ಮಾಡಿದ್ದೇನೆ. ಇನ್ನೂ ಕೆಲವರನ್ನು ಮಾಜಿ ಮಾಡುತ್ತೇನೆ ಎಂದು ಯತ್ನಾಳ ಹೇಳಿದ್ದಾರೆ. ಆದರೆ, ಯಾರನ್ನು ಯಾರು ಮಾಜಿ ಮಾಡಬೇಕು ಎಂಬುದು ಜನರ ಕೈಯ್ಯಲ್ಲಿದೆ. ಯಾರನ್ನು ಮಾಜಿ ಮತ್ತು ಹಾಲಿ ಮಾಡುವುದು ಎಂಬುದನ್ನು ಜನರು ನಿರ್ಧಾರ ಮಾಡುತ್ತಾರೆ. 20 ವರ್ಷ, 40 ವರ್ಷ ಇರ್ತೇನೆ ಎನ್ನಲು ಇರವೇನು ಆದಿಲ್ ಶಾಹಿ ಅಥವಾ ತುಘಲಕ್ ವಂಶಜರಲ್ಲ ಎಂದು ವಾಗ್ದಾಳಿ ನಡೆಸಿದರು.
ಮನುಷ್ಯನಿಗೆ ಅಹಂಕಾರ ಇರಬಾರದು. ಜನಪರ ಕೆಲಸ ಮಾಡುತ್ತಿದ್ದೇನೆ ಎಂಬ ಹೆಮ್ಮೆ ಇರಬೇಕು. ಕೇಂದ್ರದ ಮಾಜಿ ಸಚಿವನಾಗಿ ಈ ಹಿಂದೆ 2008ರಲ್ಲಿ ನಡೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಶಿವಮೊಗ್ಗದ ನಂತರ ಇಡೀ ದೇಶದ ಜನ ದೇವರ ಹಿಪ್ಪರಗಿ ಕಡೆ ನೋಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು. ದೇವರ ಹಿಪ್ಪರಗಿಯಲ್ಲಿ 20 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದು ಹೇಳಿಕೊಂಡಿದ್ದರು. ಆದರೆ, ಕೇವಲ 20 ಸಾವಿರ ಮತಗಳನ್ನು ಮಾತ್ರ ಪಡೆದರು. ಅಷ್ಟೇ ಅಲ್ಲ, 30 ಸಾವಿರ ಮತಗಳ ಅಂತರದಿಂದ ಸೋಲುಂಡಿದ್ದಾರೆ. ಇವರು ಅಂದು ಕೇಂದ್ರ ಸಚಿವರಾಗಿದ್ದರಿಂದ ಅಂದಿನ ಬಿಜೆಪಿ ರಾಷ್ಟ್ರೀಯ ನಾಯಕ ಎಲ್. ಕೆ. ಅಡ್ವಾಣಿ ಯತ್ನಾಳ ಅವರ ಪರ ಪ್ರಚಾರ ನಡೆಸಿದ್ದರು. ಆ ಚುನಾವಣೆಯಲ್ಲಿ ನಾನು ವಿಜಯಪುರ ಮತಕ್ಷೇತ್ರದಿಂದ ಸ್ಪರ್ಧಿಸಿದ್ದೆ. ಆಗ ಅಂದಿನ ಗುಜರಾತ ಮುಖ್ಯಮಂತ್ರಿ ನರೇಂದ್ರ ಮೋದಿ ನನ್ನ ಪರವಾಗಿ ಬಂದು ಪ್ರಚಾರ ನಡೆಸಿದ್ದರು. ಆಗ ನಾನು ಎರಡನೇ ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೆ ಎಂದು ಅಪ್ಪು ಪಟ್ಟಣಶೆಟ್ಟಿ ತಿಳಿಸಿದರು.
ಯತ್ನಾಳ ಅವರಿಗೆ ಅಹಂಕಾರ ಜಾಸ್ತಿಯಾಗಿದೆ. ಸ್ವಾಮೀಜಿಗಳಿಗೆ, ಸಾಹಿತಿಗಳಿಗೆ, ಬುದ್ದಿ ಜೀವಿಗಳಿಗೆ ಬೈಯ್ಯುತ್ತಾರೆ. ಎಲ್ಲರಿಗಿಂತ ಶ್ರೇಷ್ಟ, ಮೇಧಾವಿ, ಸತ್ಯ ಹರಿಶ್ಚಂದ್ರದನ ಕುಡಿ ಎಂಬಂತೆ ವರ್ತಿಸುತ್ತಿದ್ದಾರೆ. ಏಳು ಸಲ ಜನ ನಿಮಗೆ ಮತ ಹಾಕಿದ್ದಾರೆ. ಎರಡು ಬಾರಿ ಸಂಸದರನ್ನಾಗಿ ಮಾಡಿದ್ದಾರೆ. ಎರಡು ಬಾರಿ ಶಾಸಕರನ್ನಾಗಿ ಮಾಡಿದ್ದಾರೆ. ಒಂದು ಬಾರಿ ವಿಧಾನ ಪರಿಷತ ಸದಸ್ಯರನ್ನಾಗಿ ಮಾಡಿದ್ದಾರೆ. ಹೀಗಾಗಿ ಜನ ಇವರಿಗೆ ವೋಟ್ ಹಾಕಿರುವುದನ್ನು ನೋಡಿದರೆ, ಇವರು ಇನ್ನೂ 20 ವರ್ಷ ಕೆಲಸ ಮಾಡಿದರೂ ಜನರ ಉಪಕಾರ ತೀರಿಸಲು ಆಗುವುದಿಲ್ಲ ಎಂದು ತಿಳಿಸಿದರು.
ಇದೇ ವೇಳೆ, ಸಾರ್ವಜನಿಕ ಗಣೇಶ ಉತ್ಸವ ಆಚರಣೆಗೆ ಅವಕಾಶ ನೀಡುವಂತೆ ತಾವು ಈ ಹಿಂದೆಯೇ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇನೆ. ಮಾಧ್ಯಮಗಳ ಮೂಲಕವೂ ಆಗ್ರಹಿಸಿದ್ದಾಗಿ ಅಪ್ಪು ಪಟ್ಟಣಶೆಟ್ಟಿ ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಶಿವಾನಂದ ಮಾನಕರ, ಪ್ರಭಾಕರ ಭೋಸಲೆ, ವಿಜಯಕುಮಾರ ಕೋವಳ್ಳಿ ಮುಂತಾದವರು ಉಪಸ್ಥಿತರಿದ್ದರು.