ಕಾರ್ಯ ನಿರ್ವಹಣೆಗೆ ಅಭಿನಂದನಾ ಪತ್ರ- ವಾರದೊಳಗೆ ಜಾಗ ತೋರಿಸದೇ ವಿಜಯಪುರ ಕೆ ಕೆ ಆರ್ ಟಿ ಸಿ ಡಿಸಿ ನಾರಾಯಣಪ್ಪ ಕುರುಬರ ಎತ್ತಂಗಡಿ

ವಿಜಯಪುರ: ಒಂದೆಡೆ ಕೊರೊನಾ ಸಂದರ್ಭದಲ್ಲಿ ಕಾರ್ಯವೈಖರಿಗೆ ಅಭಿನಂದನಾ ಪತ್ರ.  ಮತ್ತೋಂದೆಡೆ ವಾರದೊಳಗೆ ಯಾವುದೇ ಜಾಗ ತೋರಿಸದೇ ಅಧಿಕಾರಿಯ ಎತ್ತಂಗಡಿ. ಇದು ವಿಜಯಪುರ ಕೆ ಕೆ ಆರ್ ಟಿ ಸಿ ಡಿಸಿ ನಾರಾಯಣಪ್ಪ ಕುರಬರ ಅವರ ಪರಿಸ್ಥಿತಿ.

ಹೌದು. ಕೊರೊನಾ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ವಿಜಯಪುರ ವಿಭಾಗ ತೋರಿದ ಕಾರ್ಯ ನಿರ್ವಹಣೆಗೆ ನಿಗಮದ ಎಂ. ಡಿ. ಕೂರ್ಮರಾವ ಅಭಿನಂದನಾ ಪತ್ರವನ್ನು ಕಳುಹಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ವಿಜಯಪುರ ವಿಭಾಗದ ಕಾರ್ಯ ವೈಖರಿಗೆ ಕೆ ಕೆ ಆರ್ ಟಿ ಸಿ ಎಂಡಿ ಪ್ರಶಂಸೆ ವ್ಯಕ್ತಪಡಿಸಿರುವ ಅಭಿನಂದನಾ ಪತ್ರ.

ಕೊರೊನಾ ಲಾಕಡೌನ್ ಸಂದರ್ಭದಲ್ಲಿ ವಿಜಯಪುರ ವಿಭಾಗೀಯ ನಿಯಂತ್ರಣಾಧಿಕಾರಿಗಳು, ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಎಲ್ಲ ನೌಕರರ ಆರೋಗ್ಯದ ಹಿತದೃಷ್ಠಿಯಿಂದ ಕೈಗೊಳ್ಳಲಾದ ಕೊರೊನಾ ಲಸೀಕೆ ಕಾರ್ಯಕ್ರಮದಲ್ಲಿ ಶೇ. 99 ರಷ್ಟು ಸಿಬ್ಬಂದಿಗೆ ವ್ಯಾಕ್ಸಿನ್ ಹಾಕಿಸಿದ್ದರು.

ಅಲ್ಲದೇ, ಲಾಕಡೌನ್ ಸಂದರ್ಭದಲ್ಲಿ ಬಸ್ಸುಗಳ ಸಂಚಾರ ಇಲ್ಲದಿದ್ದರೂ, ಸಿಬ್ಬಂದಿಯ ಸೇವೆಯನ್ನು ಬಳಸಿಕೊಂಡು ವಿಭಾಗದ ಗೋಡೆಗಳ ಮೇಲೆ ಕೊರೊನಾ ಬಗ್ಗೆ ಎಚ್ಚರಿಕೆ ಸಾರುವ ಚಿತ್ರೀಕರಣ ಮಾಡಿಸಿದ್ದರು. ಅಲ್ಲದೇ, ಗಿಡಮರಗಳನ್ನು ನೆಡುವ ಕಾರ್ಯದಲ್ಲಿಯೂ ತೊಡಗಿಸಿಕೊಂಡಿದ್ದರು. ಅಲ್ಲದೇ, ಕಚೇರಿಯ ಆವರಣವನ್ನು ಶುಚಿಗೊಳಿಸಿದ್ದರು. ಇದರಿಂದ ನಿಗಮದ ಘನತೆಯನ್ನು ಹೆಚ್ಚಿಸುವ ಕಾರ್ಯ ಮಾಡಲಾಗಿದೆ ಎಂದು ಪ್ರಶಂಶಿಸಿ ಕೆ ಕೆ ಆರ್ ಟಿ ಸಿ ಎಂಡಿ ಕೂರ್ಮರಾವ ಆ. 15 ರಂದು ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಅಭಿನಂದನಾ ಪತ್ರ ನೀಡಿದ್ದಾರೆ.

ಒಂದು ವಾರದೊಳಗೆ ನಾರಾಯಣಪ್ಪ ಕುರುಬರ ವರ್ಗಾವಣೆ

ಈ ಮಧ್ಯೆ ಆ. 15 ರಂದು ಪ್ರಶಂಸಾ ಪತ್ರ ನೀಡಿದ ವಾರದೊಳಗೆ ಅಂದರೆ ಆ. 21 ರಂದು ನಾರಾಯಣಪ್ಪ ಕುರುಬರ ಅವರನ್ನು ಬೆಂಗಳೂರಿಗೆ ಕಾಯ್ದಿರಿಸಿದ ಜಾಗಕ್ಕೆ ವರ್ಗವಾಣೆ ಮಾಡಲಾಗಿದೆ. ಅದೂ ಕೂಡ ಆ. 21 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಲಮಟ್ಟಿ ಲಾಲ್ ಬಹಾದ್ದೂರ ಶಾಸ್ತ್ರಿ ಸಾಗರಕ್ಕೆ ಗಂಗಾಪೂಜೆ ಸಲ್ಲಿಸಿ ಬಾಗೀನ ಅರ್ಪಿಸುವ ದಿನ ಎಂಬುದು ಗಮನಾರ್ಹ.  ಈ ದಿನ ನಾರಾಯಣಪ್ಪ ಕುರುಬರ ಆಲಮಟ್ಟಿಯಲ್ಲಿಯೇ ಇದ್ದರು.  ವಿಜಯಪುರಕ್ಕೆ ಅವರು ಬರುವಷ್ಟರಲ್ಲಿ ಅವರನ್ನು ಯಾವುದೇ ಜಾಗ ತೋರಿಸದೇ ವರ್ಗಾವಣೆ ಮಾಡಲಾಗಿದ್ದು, ವಿಜಯಪುರ ಕೆ ಕೆ ಆರ್ ಟಿ ಸಿ ನೂತನ ಡಿಸಿ ಯಾಗಿ ಬೀದರ ಕೆ ಕೆ ಆರ್ ಟಿ ಸಿ ಡಿಸಿ ಯಾಗಿದ್ದ ಚಂದ್ರಕಾಂತ ಪುಳೆ ಅವರನ್ನು ವರ್ಗವಾಣೆ ಮಾಡಲಾಗಿದೆ.

ವರ್ಗವಾಣೆಯಾಗಿರುವ ವಿಜಯಪುರ ಕೆ ಕೆ ಆರ್ ಟಿ ಸಿ ನಿಕಟಪೂರ್ವ ಡಿಸಿ ನಾರಾಯಣಪ್ಪ ಕುರುಬರ.

ಈ ಕುರಿತು ನಾರಾಯಣಪ್ಪ ಕುರುಬರ ಅವರನ್ನು ಬಸವ ನಾಡು ಸಂಪರ್ಕಿಸಿದಾಗ ವರ್ಗಾವಣೆ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

Leave a Reply

ಹೊಸ ಪೋಸ್ಟ್‌