ಜಿ ಎಸ್ ಟಿ ಪರಿಹಾರ ವಿಸ್ತರಣೆ, 15ನೇ ಹಣಕಾಸು ಆಯೋಗದ ಅನುದಾನ ಹಂಚಿಕೆ ಹೆಚ್ಚಿಸಲು ಕೇಂದ್ರ ಹಣಕಾಸು ಸಚಿವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಮನವಿ

ನವದೆಹಲಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನವದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಕೇಂದ್ರ ಸರಕಾರದಿಂದ ಜಿ ಎಸ್ ಟಿ ಪರಿಹಾರವನ್ನು ಇನ್ನೂ ಮೂರು ವರ್ಷಗಳಿಗೆ ಮುಂದುವರೆಸುವಂತೆ ಮತ್ತು 15ನೇ ಹಣಕಾಸು ಆಯೋಗದ ಅನುದಾನ ಹಂಚಿಕೆ ಹೆಚ್ಚಿಸುವಂತೆ ಮನವಿ ಮಾಡಿದರು.

ಕೋವಿಡ್ ಸಾಂಕ್ರಾಮಿಕದಿಂದಾಗಿ ರಾಜ್ಯಗಳ ತೆರಿಗೆ ಸಂಗ್ರಹ ಕಡಿಮೆಯಾಗಿದ್ದು, ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳಲು ಕೆಲವು ವರ್ಷಗಳೇ ಬೇಕಾಗಬಹುದು. ಕಳೆದ ವರ್ಷ ಜಿ ಎಸ್ ಟಿ ಪರಿಹಾರ ಸಾಲ ಒದಗಿಸಲಾಗಿತ್ತು. ಈ ವರ್ಷವೂ ಈ ಸೌಲಭ್ಯ ವಿಸ್ತರಿಸಲಾಗಿದೆ. ಆದರೆ ರಾಜ್ಯಗಳ ಹಣಕಾಸು ಸ್ಥಿತಿ ಸುಧಾರಿಸುವವರೆಗೆ ಕೇಂದ್ರದ ನೆರವು ಅತೀ ಅಗತ್ಯವಾಗಿದ್ದು ಮೂರು ವರ್ಷಗಳ ಅವಧಿಗೆ ಜಿ ಎಸ್ ಟಿ ಪರಿಹಾರ ವಿಸ್ತರಿಸುವಂತೆ ಮನವಿ ಮಾಡಿದರು.

ನವದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ಮಾಡಿದ ಸಿಎಂ, ಸಚಿವ, ಸಂಸದರು.

15ನೇ ಹಣಕಾಸು ಆಯೋಗವು 2021 ರಿಂದ 2026ರ ಅವಧಿಗೆ ರಾಜ್ಯಗಳಿಗೆ ತೆರಿಗೆ ಹಂಚಿಕೆಗೆ ಮಾಡಿದ ಶಿಫಾರಸಿನ ಅನ್ವಯ ರಾಜ್ಯದ ಹಂಚಿಕೆ 14ನೇ ಹಣಕಾಸು ಆಯೋಗ ಶಿಫಾರಸು ಮಾಡಿದ ಶೇ. 4.71 ರಿಂದ ಶೇ. 3.647ಕ್ಕೆ ಇಳಿಕೆಯಾಗಿದೆ. ಇದರಿಂದ ಅನುದಾನ ಹಂಚಿಕೆಯಲ್ಲಿ ತೀವ್ರ ಇಳಿಕೆಯಾಗಿದೆ. ಅನುದಾನ ಹಂಚಿಕೆ ಕುರಿತ ಮಾನದಂಡಗಳನ್ನು ಬದಲಿಸುವಂತೆ ರಾಜ್ಯ ಸರಕಾರವು 15ನೇ ಹಣಕಾಸು ಆಯೋಗಕ್ಕೆ ಈಗಾಗಲೇ ಮನವಿ ಸಲ್ಲಿಸಿದ್ದು, ರಾಜ್ಯದ ಮನವಿಯನ್ನು ಆಯೋಗವು ಪರಿಗಣಿಸಿಲ್ಲ. ಇದರಿಂದಾಗಿ ದಕ್ಷಿಣದ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.

15ನೇ ಹಣಕಾಸು ಆಯೋಗವು ತನ್ನ ಶಿಫಾರಸಿನಲ್ಲಿ ರಾಜ್ಯ ನಿರ್ದಿಷ್ಟ ಅನುದಾನದಡಿ ರಾಜ್ಯಕ್ಕೆ ಬೆಂಗಳೂರಿನ ಜಲಮೂಲಗಳು ಹಾಗೂ ಪೇರಿಫೆರಲ್ ರಿಂಗ್ ರಸ್ತೆಗೆ ರೂ. 6000 ಕೋ. ನಿಗದಿ ಪಡಿಸಿದೆ. ಆದರೆ ಕೇಂದ್ರ ಸರಕಾರದ ಎಕ್ಸಪ್ಲೆನೇಟರಿ ಮೆಮೊರಂಡಂ ನಲ್ಲಿ ಹಣಕಾಸು ಆಯೋಗ ಈ ಶಿಫಾರಸನ್ನು ಪ್ರಸ್ತಾಪಿಸಿಲ್ಲ. ಇದರಿಂದ ಮೊದಲೇ ತೆರಿಗೆ ಹಂಚಿಕೆಯಲ್ಲಿ ಇಳಿಕೆಯಾಗಿರುವ ರಾಜ್ಯಕ್ಕೆ ಇನ್ನಷ್ಟು ಹಿನ್ನಡೆಯಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವರಿಗೆ ಸಿಎಂ ಮನವರಿಕೆ ಮಾಡಿಕೊಟ್ಟರು. ಮಾಹಿತಿ ತಂತ್ರಜ್ಞಾನ ಹಾಗೂ ಸ್ಟಾರ್ಟ್ ಅಪ್ ರಾಜಧಾನಿ ಎನಿಸಿಕೊಂಡಿರುವ ಬೆಂಗಳೂರು ದೇಶದ ಆರ್ಥಿಕತೆಗೆ ಗಣನೀಯ ಕೊಡುಗೆ ನೀಡುತ್ತಿದೆ. ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಯಿಂದ ಹೆಚ್ಚಿನ ಹೂಡಿಕೆ ಆಕರ್ಷಿಸಲು ಸಾಧ್ಯವಾಗಲಿದೆ. ಆದ್ದರಿಂದ 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ಬೆಂಗಳೂರು ಅಭಿವೃದ್ಧಿಗೆ ಅನುದಾನ ಒದಗಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಹಾವೇರಿ ಸಂಸದ ಶಿವಕುಮಾರ ಉದಾಸಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌