ವಿಜಯಪುರ: ಆಸ್ತಿ ತೆರಿಗೆ ಬಗ್ಗೆ ಕೈಗಾರಿಕೋದ್ಯಮಿಗಳ ಜೊತೆ ಚರ್ಚಿಸಿ ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಪಿ. ಸುನಿಲ ಕುಮಾರ ಅವರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಮಹಾಲ ಬಗಾಯತನಲ್ಲಿರುವ ಕೈಗಾರಿಕೆ ಘಟಕಗಳಿಗೆ ವಿಧಿಸಿರುವ ಆಸ್ತಿ ತೆರಿಗೆ ಬಗ್ಗೆ ಕೈಗಾರಿಕೋದ್ಯಮಿಗಳ ಜೊತೆ ಮಹಾನಗರಪಾಲಿಕೆಯ ಆಯುಕ್ತರು, ಮಹಾನಗರಪಾಲಿಕೆಯ ಕಂದಾಯ ಅಧಿಕಾರಿಗಳು, ಬೆಳಗಾವಿ ಸಹಾಯಕ ಪ್ರಧಾನ ವ್ಯವಸ್ಥಾಪಕರು ಜಂಟಿಯಾಗಿ ಚರ್ಚಿಸಿ ಈ ಕುರಿತು ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮುಳವಾಡ ಕೈಗಾರಿಕಾ ಪ್ರದೇಶದಲ್ಲಿ ಒಟ್ಟು 147 ನಿವೇಶನಗಳನ್ನು ಅಭಿವೃದ್ಧಿ ಪಡಿಸಲಾಗಿದ್ದು, ಇಬ್ಬರು ಪರಿಶಿಷ್ಟ ಜಾತಿ ಫಲಾನುಭವಿಗಳಿಗೆ ತಲಾ ಒಂದು ಎಕರೆ ನಿವೇಶನ ಹಂಚಿಕೆಗೆ ಮತ್ತು 9 ಪರಿಶಿಷ್ಟ ಜಾತಿ ಫಲಾನುಭವಿಗಳಿಗೆ ಮತ್ತು ಓರ್ವ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಒಟ್ಟು 10 ಫಲಾನುಭವಿಗಳಿಗೆ 2 ಎಕರೆ ನಿವೇಶನಗಳನ್ನು ಹಂಚಿಕೆ ಮಾಡಲು ಕ್ರಮ ಕೈಗೊಳ್ಳುವಂತೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ವಿಜಯಪುರ ಉಪವಿಭಾಗಾಧಿಕಾರಿ ಬಲರಾಮ ಲಮಾಣಿ, ಸಂಜಯ್ ಪಾಟೀಲ, ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಎಸ್. ವಿ. ಪಾಟೀಲ, ಚೇಂಬರ್ ಆಫ್ ಕಾಮರ್ಸ ಇಂಡಸ್ಟ್ರಿಯಲ್ ಆ್ಯಂಡ್ ಅಗ್ರಿಕಲ್ಚರ್ ಅಧ್ಯಕ್ಷ ಡಿ. ಎಸ್. ಗುಡ್ಡೊಡಗಿ, ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ ಬಸವರಾಜ ಬಿರಾದಾರ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.