ಮೊಹರಂ ಅಂಗವಾಗಿ ಸಾಂಗವಾಗಿ ಸಾಗಿದ ಮೂರು ದಿನಗಳ ಜಾರತ್ ಕಾರ್ಯಕ್ರಮ- ಗಮನ ಸೆಳೆದ ಹುಲಿವೇಷಿಗಳ ನಾಟ್ಯ

ವಿಜಯಪುರ: ಪವಿತ್ರ ಮೊಹರಂ ಹಬ್ಬದ ಅಂಗವಾಗಿ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ದೇವಾಪೂರ ಗ್ರಾಮದಲ್ಲಿ ಮೂರು ದಿನದ ಜಾರತ್ ಕಾರ್ಯಕ್ರಮದ ಅಂಗವಾಗಿ ಹೆಜ್ಜೆ ಮೇಳ ನಡೆಯಿತು.

ಗ್ರಾಮೀಣ ಪ್ರದೇಶಗಳಲ್ಲಿ ಮೋಹರಂ ಹಬ್ಬ ಬಂತೆಂದರೆ ಸಾಕು ವಿಶಿಷ್ಟವಾದ ಆಚರಣೆ ನಡೆಸುವ ಮೂಲಕ ಗ್ರಾಮಸ್ಥರು ಗಮನ ಸೆಳೆಯುತ್ತಾರೆ. ಅನೇಕತೆಯಲ್ಲಿ ಏಕತೆ ಎಂಬಂತೆ ಈ ಗ್ರಾಮೀಣ ಪ್ರದೇಶಗಳಲ್ಲಿ ಹಿಂದು ಮತ್ತು ಮುಸ್ಲಿಂ ಭಾುವೈಕ್ಯದ ಸಂಕೇತವಾಗಿ ಮೊಹರಂ ಹಬ್ಬವನ್ನು ಆಚರಿಸಲಾಗುತ್ತದೆ. ಈ ಮೋಹರಂ ಹಬ್ಬವ ಆಗಮನಕ್ಕೂ ಒಂದು ತಿಂಗಳು ಮುಂಚಿತವಾಗಿ ಹೆಜ್ಜೆ ಮೇಳಗಳಲ್ಲಿ ಪಾಲ್ಗೋಳ್ಳಲು ಯುವಕರು ತಯಾರಿ ಮಾಡಿಕೊಂಡಿರುತ್ತಾರೆ.

ರಿಯಾತ್ ಪದಗಳನ್ನು ಹೇಳುತ್ತ ತಮ್ಮಲ್ಲಿರುವ ಹೆಜ್ಜೆ ಮೇಳದ ಕಲೆಯನ್ನು ಪವಿತ್ರ ಮೊಹರಂ ಹಬ್ಬದ ಸಂದರ್ಭದಲ್ಲಿ ಪ್ರದರ್ಶಿಸುತ್ತಾರೆ. ಈ ಹಬ್ಬದ ಅಂಗವಾಗಿ ಅಡಿಹುಡಿ ಗ್ರಾಮದ ಹೆಜ್ಜೆ ತಂಡ, ಕೋಡಬಾಗಿ ತಂಡ ಮತ್ತು ದೇವಾಪೂರ ತಂಡ ಹೆಜ್ಜೆಮೇಳ ತಂಡಗಳು ದೇವಾಪುರ ಗ್ರಾಮದಲ್ಲಿ ಹೆಜ್ಜೆ ಸೇವೆ ನೆರವೇರಿಸಿದವು.

 

ಈ ಸಂದರ್ಭದಲ್ಲಿ ನಾನಾ ಗ್ರಾಮಗಳಿಂದ ಬಂದಿದ್ದ ಗ್ರಾಮಸ್ಥರು ಈ ಹೆಜ್ಜೆ ಮೇಳ ಪ್ರದರ್ಶನವನ್ನು ನೋಡಿ ಕಣ್ತುಂಬಿಕೊಂಡರು. ಒಂದೊಂದು ತಂಡದವರು ಒಂದೊಂದು ಬಣ್ಣದ ಟಿ-ಶರ್ಟ್ ಧರಿಸಿ ಒಂದೆ ಬಣ್ಣದ ಚಡ್ಡಿಯನ್ನು ಹಾಕಿ ತಲೆಗೆ ರಿಬ್ಬನ್ ಕಟ್ಟಿಕೊಂಡು ಗ್ರಾಮೀಣ ಸೊಬಗಿನ ಹಾಡುಗಳಿಗೆ ಹೆಜ್ಜೆ ಹಾಕಿದರು.

ಗ್ರಾಮೀಣ ಕಲೆಗಳು ಹೀಗೆ ಉಳಿಸಿ ಬೆಳೆಸಿಕೊಂಡು ಬರುತ್ತಿರುವುದು ಈ ಭಾಗದಲ್ಲಿ ಮುಂದುವರೆದಿದ್ದು, ಸರಕಾರಗಳೂ ಕೂಡ ಇಂಥ ಕಲೆಗಳನ್ನು ಪ್ರೋತ್ಸಾಹಿಸಬೇಕಿರುವುದು ಅಗತ್ಯವಾಗಿದೆ ಎಂದು ಗ್ರಾಮಸ್ಥರಾದ ಗೌಡಪ್ಪಗೌಡ ಪಾಟೀಲ, ಪ್ರಕಾಶ ಬಿರಾದಾರ, ಬಸನಗೌಡ ಪಾಟೀಲ, ಮಹಾದೇವ ಕಂತಿ, ಮಲ್ಲಪ್ಪ ಲಡಂಗಿ, ಗೋವಿಂದ ಕಿಲಬನೂರ, ಚನ್ನಪ್ಪ ಬಿರಾದಾರ ಶಿವನಗೌಡ ಪಾಟೀಲ ಮುಂತಾದವರು ಅಭಿಪ್ರಾಯಪಟ್ಟರು.

Leave a Reply

ಹೊಸ ಪೋಸ್ಟ್‌