ಬೇಲಿಯೆ ಎದ್ದು ಹೊಲ ಮೇಯ್ದಂತಾಗಿದೆ ಭೀಮಾ ತೀರದ ರೈತರ ಗೋಳು- ಮೋಸದಿಂದ ರೈತರ ಹೆಸರಲ್ಲಿ ಸಾಲ ಮಾಡಿದ ಮಹಾ ಮೂಲದ ಸಕ್ಕರೆ ಕಾರ್ಖಾನೆ

ವಿಜಯಪುರ: ಈಗಾಗಲೇ ರೈತರು ಕೊರೊನಾ ಮತ್ತು ಲಾಕಡೌನ್ ನಿಂದಾಗಿ ಸಾಕಷ್ಟು ಸಂಕಷ್ಟದಲ್ಲಿದ್ದಾರೆ. ಇಂಥ ಸುಮಾರು 2800ಕ್ಕೂ ಹೆಚ್ಚು ರೈತರಿಗೆ ಗಾಯದ ಮೇಲೆ ಬರೆ ಎಳೆಯುವ ಕೆಲವನ್ನು ಮಹಾರಾಷ್ಟ್ರ ಮೂಲಕ ಸಕ್ಕರೆ ಕಾರ್ಖಾನೆ ಮಾಡಿದೆ.

ವಿಜಯಪುರ ಜಿಲ್ಲೆಯ ಭೀಮಾ ತೀರದ ಚಡಚಣ ತಾಲೂಕಿನ ಹಾವಿನಾಳ ಶುಗರ್ಸ್ ಕಾರ್ಖಾನೆ ಕಳೆದ ಹಲವಾರು ವರ್ಷಗಳಿಂದ ರೈತರಿಂದ ಕಬ್ಬು ಖರೀದಿಸಿ ಬಾಕಿ ಹಣವನ್ನು ಸರಿಯಾದ ಸಮಯಕ್ಕೆ ನೀಡದೇ ಸತಾಯಿಸುತ್ತಲೇ ಬಂದಿತ್ತು. ಇದೀಗ ತೀರ ಅತೀರೇಕ ಎಂಬಂತೆ ಎರಡನೇ ಬಾರಿ ರೈತರಿಗೆ ಗೊತ್ತಾಗದೆ ಅವರ ಹೆಸರಿನಲ್ಲಿಯೇ ರಾಷ್ಟ್ರೀಕೃತ ಬ್ಯಾಂಕುಗಳಿಂದ ಸಾಲ ಪಡೆದು ರೈತರಿಗೆ ಮೋಸ ಮಾಡಿರುವ ಆರೋಪ ಕೇಳಿ ಬಂದಿದೆ.

ಹಾವಿನಾಳ ಸಕ್ಕರೆ ಕಾರ್ಖಾನೆ.

ಎರಡು ವರ್ಷಗಳ ಹಿಂದೆಯೂ ಇದೇ ರೀತಿ ಮೋಸ ಮಾಡಿದ್ದ ಈ ಕಾರ್ಖಾನೆ ಈ ವರ್ಷ ಮತ್ತೆ ಅದೇ ಚಾಳಿ ಮುಂದುವರೆಸಿದೆ. ಕೊರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ರೈತರು ಸಾಲ ಪಡೆಯಲು ಬ್ಯಾಂಕುಗಳಿಗೆ ಹೋದಾಗ ಸಕ್ಕರೆ ಕಾರ್ಖಾನೆ ರೈತರಿಗೆ ಗೊತ್ತಾಗದೇ ಅವರ ಹೆಸರಿನಲ್ಲಿಯೇ ಸಾಲ ಪಡೆದಿರುವ ಅಂಶ ಬೆಳಕಿಗೆ ಬಂದಿದೆ. ನಿಮ್ಮ ಉತಾರಿಯ ಮೇಲೆ ಸಾಲ ಪಡೆಯಲಾಗಿದೆ ಎಂದು ಬ್ಯಾಂಕಿನ ಸಿಬ್ಬಂದಿ ನೀಡಿದ ಮಾಹಿತಿ ರೈತರ ಜಂಘಾಬವನ್ನೇ ಉಡುಗಿಸುವಂತೆ ಮಾಡಿದೆ.

ಹಾವಿನಾಳ ಸಕ್ಕರೆ ಕಾರ್ಖಾನೆ ಎದುರು ಧರಣಿ ಸತ್ಯಾಗ್ರಹ ನಡೆಸುತ್ತಿರುವ ರೈತರು.

 

ಇದರಿಂದ ಸಿಟ್ಟಾದ ರೈತರು ಈಗ ಕಿಸಾನ್ ಸಂಘದ ನೇತೃತ್ವದಲ್ಲಿ ಹಾವಿನಾಳ ಸಕ್ಕರೆ ಕಾರ್ಖಾನೆ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ಮಾಡುತ್ತಿದ್ದಾರೆ. ಅಲ್ಲದೇ, ಸಕ್ಕರೆ ಕಾರ್ಖಾನೆಯ ಒಳಗೆ ಸಿಬ್ಬಂದಿಯನ್ನೂ ಬಿಡದೇ ಸತ್ಯಾಗ್ರಹ ಮುಂದುವರೆಸಿದ್ದಾರೆ. ಅಲ್ಲಿಯೇ ಅಡುಗೆ ಮಾಡಿ ಊಟ ಮಾಡುವ ಮೂಲಕ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ರೈತ ಮುಖಂಡರಾದ ಗುರುನಾಥ ಬಗಲಿ, ಮಲ್ಲನಗೌಡ ಪಾಟೀಲ, ಭೀಮಾಶಂಕರ ಬಿರಾದಾರ, ಮಹಾದೇವ ಹಿರೆಕುರುಬರ, ಸುರೇಶ ಬಿರಾದಾರ, ಸಂತೋಷ ಭೈರಗೊಂಡ ಮುಂತಾದವರು ಕೂಡಲೇ ಸರಕಾರ ಮಧ್ಯೆ ಪ್ರವೇಶಿಸಿ ತಮಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಹೋರಾಟದಲ್ಲಿ ಪಾಲ್ಗೋಂಡ ಸ್ವಾಮೀಜಿಗಳು

ಇನ್ನು ರೈತರ ಈ ಹೋರಾಟಕ್ಕೆ ನಾನಾ ಸ್ವಾಮೀಜಿಗಳೂ ಬೆಂಬಲ ವ್ಯಕ್ತಪಡಿಸಿದ್ದು, ಹತ್ತಳ್ಳಿ ಹಿರೇಮಠದ ಸ್ವಾಮೀಜಿ ಕೂಡ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೋಂಡು ರೈತರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಹಾವಿನಾಳ ಸಕ್ಕರೆ ಕಾರ್ಖಾನೆ ಎದುರು ರೈತರ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೋಂಡ ಹತ್ತಳ್ಳಿ ಹಿರೇಮಠದ ಸ್ವಾಮೀಜಿ.

ಕಾರ್ಖಾನೆ ಆಡಳಿತ ಮಂಡಳಿಗೆ ನೊಟೀಸ್ ನೀಡಿದ ಜಿಲ್ಲಾಧಿಕಾರಿ

ಈ ಮಧ್ಯೆ, ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ರೈತರಿಗೆ ಆಗಿರುವ ಅನ್ಯಾದ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಕುರಿತು ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಗೆ ನೊಟೀಸ್ ಕೂಡ ಜಾರಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಸಕ್ಕರೆ ಆಯುಕ್ತರನ್ನು ಭೇಟಿ ಮಾಡಿದ ನಾಗಠಾಣ ಜೆಡಿಎಸ್ ಶಾಸಕ ಡಾ. ದೇವಾನಂದ ಚವ್ಹಾಣ.

ಸಕ್ಕರೆ ಆಯುಕ್ತರನ್ನು ಭೇಟಿ ಮಾಡಿದ ಸ್ಥಳೀಯ ಜೆಡಿಎಸ್ ಶಾಸಕ

ಮತ್ತೋಂದೆಡೆ, ಸ್ಥಳೀಯ ನಾಗಠಾಣ ಜೆಡಿಎಸ್ ಶಾಸಕ ಡಾ. ದೇವಾನಂದ ಚವ್ಹಾಣ, ಬೆಂಗಳೂರಿಗೆ ತೆರಳಿ ಸಕ್ಕರೆ ಆಯುಕ್ತರನ್ನೂ ಭೇಟಿ ಮಾಡಿ ರೈತರಿಗೆ ನ್ಯಾ ಒದಗಿಸುವಂತೆ ಮನವಿ ಪತ್ರ ಸಲ್ಲಿಸಿದ್ದಾರೆ.ಸಕ್ಕರೆ ಕಾರ್ಖಾನೆಯೊಂದು ರೈತರಿಗೆ ಹಣ ಬಾಕಿ ಉಳಿಸಿಕೊಂಡಿದ್ದಷ್ಟೇ ಅಲ್ಲ, ರೈತರ ಹೆಸರಿನಲ್ಲಿಯೇ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ಮಾಡಿರುವ ಅಘಾತಕಾರಿ ಅಂಶ ಬೆಳಕಿಗೆ ಬಂದಿದೆ.

 

 

Leave a Reply

ಹೊಸ ಪೋಸ್ಟ್‌