ಬೆಂಗಳೂರು: ಉದ್ಯೋಗ ಸೃಷ್ಠಿಸುವ ಆಭರಣ ಉದ್ದಿಮೆ ಕೌಶಲ್ಯವಿರುವ ಕ್ಷೇತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹೀಗಾಗಿ ಆಧುನಿಕ ತಂತ್ರಜ್ಞಾನದಿಂದ ಆಭರಣ ಉತ್ಪಾದನೆಗೆ ಅನುಕೂಲವಾಗುವಂಥ ಅತ್ಯಾಧುನಿಕ ಜುವೆಲರಿ
ಪಾರ್ಕ್ ನಿರ್ಮಾಣಕ್ಕೆ ಅಗತ್ಯವಿರುವ ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜುವೆಲ್ಲರಿ ಸಂಸ್ಥೆಗೆ ಸಲಹೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿರುವ ಸೌತ್ ಜ್ಯುವೆಲ್ಲರಿ ಷೋ ಉದ್ಘಾಟಿಸಿ ಅವರು ಮಾತನಾಡಿದರು.
ಬ್ಯುಲಿಯನ್ ವಿನಿಮಯ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಭಾರತದ ಆಭರಣ ವ್ಯಾಪಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪೈಪೋಟಿ ಮಾಡಬೇಕಾದ ಪರಿಸ್ಥಿತಿ ಇದೆ. ಗೋಲ್ಡ್ ಕಂಟ್ರೋಲ್ ಕಾಯ್ದೆ ತೆಗೆದು ಹಾಕಿದ ನಂತರ ಮುಕ್ತ ವಾತಾವರಣ ಉಂಟಾಗಿದೆ. ಚಿನ್ನದ ವ್ಯಾಪಾರ ಉದ್ದಿಮೆಯಾಗಿ ಬೆಳೆದಿದೆ. ಭಾರತೀಯ ಆರ್ಥಿಕತೆಯಲ್ಲಿ ಉಳಿತಾಯ ಸಂಸ್ಕೃತಿ ಇದೆ. ನಮ್ಮ ಜನರ ಉಳಿತಾಯ ಮನೋಭಾವ ಆಭರಣ ಉದ್ದಿಮೆಗೆ ಸಹಕಾರಿಯಾಗಿದೆ. ಬ್ಯಾಂಕ್ ದಿವಾಳಿಯಾದರೂ ಚಿನ್ನ ನಮ್ಮ ಆಪತ್ಭಾಂಧವ ಎಂದು ಅವರು ಹೇಳಿದರು.
ಒಡವೆ ಎಂದರೆ ಒಂದು ಆತ್ಮೀಯತೆ ಇರುತ್ತದೆ. ಆಭರಣದ ವಹಿವಾಟು ಅಂತಃಕರಣವುಳ್ಳ ವ್ಯಾಪಾರ, ಇದು ಬಹಳ ಪುರಾತನ ವೃತ್ತಿಯಾಗಿದ್ದು ಭಾವನಾತ್ಮಕ ಸಂಬಂಧ ಬೆಸೆಯುವಂಥದ್ದು. ಆಭರಣ ಮಾಡುವ ಕಲೆ ಸೂಕ್ಷ್ಮವಾದುದು. ಆಭರಣ ತಯಾರಿ ಕರ್ನಾಟಕದ ಪಾರಂಪರಿಕ ಕಲೆಯಾಗಿದ್ದು, ಇದನ್ನು ಉಳಿಸಿ ಬೆಳೆಸಬೇಕು ಎಂದು ಸಿಎಂ ಹೇಳಿದರು.
ಚಿನ್ನದ ವ್ಯಾಪಾರಿಗಳು ಸಮಾಜದ ಗೌರವ ಮತ್ತು ಬಾಂಧವ್ಯ ಕಾಪಾಡುವ ಬಂಧುಗಳು. ದೇಶಕ್ಕೆ ಆದಾಯ ತರುವ ನಿಟ್ಟಿನಲ್ಲಿ ಕೆಲಸ ಮಾಡಬೇಕಲ್ಲದೆ, 2ನೇ ಮತ್ತು 3ನೇ ಸ್ತರದ ನಗರಗಳಲ್ಲಿ ವ್ಯಾಪಾರ ವೃದ್ಧಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ ಮಾಜಿ ಸದಸ್ಯ ಟಿ. ಎ. ಸವರಣ, ಗ್ಲೋಬಲ್ ಎಕ್ಸಿಬಿಷನ್ ಅಂಡ್ ಸರ್ವಿಸಸ್ ನ ಶ್ರೀಕಾಂತ್ ಮುಂತಾದವರು ಉಪಸ್ಥಿತರಿದ್ದರು.