ಚಿಕ್ಕಬಳ್ಳಾಪುರ: ಸತ್ಯಸಾಯಿ ಅವರ ಪ್ರಭಾವದಿಂದಾಗಿ ತಾವು ಜೀವನದಲ್ಲಿ ಸಾಕಷ್ಟು ಕಲಿತಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಪ್ರಶಾಂತಿ ಬಾಲಮಂದಿರ ಟ್ರಸ್ಟ್ ವತಿಯಿಂದ ನಿರ್ಮಿಸಿರುವ 300 ಹಾಸಿಗೆಗಳ ಶ್ರೀ ಸತ್ಯಸಾಯಿ ಸರಳಾ ಸ್ಮಾರಕ ಆಸ್ಪತ್ರೆ ಮತ್ತು ಮಕ್ಕಳ ತೀವ್ರ ನಿಗಾ ಘಟಕವನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಸತ್ಯಸಾಯಿ ಅವರ ಪ್ರಭಾವ ತಮ್ಮ ಮೇಲೆ ಸಾಕಷ್ಠಿದೆ. ನಾನು 1998ರಲ್ಲಿ ಸತ್ಯಸಾಯಿ ಬಾಬಾ ಅವರ ದರ್ಶನ ಪಡೆದಿದ್ದೆ. ಆ ಸಂದರ್ಭದಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರದ ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ತುಲನೆಯ ಕುರಿತ ಪುಸ್ತಕವನ್ನು ಒಬ್ಬರು ಓದುತ್ತಿದ್ದರು. ಅದನ್ನು ನೋಡಿ ಇದರಲ್ಲಿ ಸತ್ಯಸಾಯಿ ಅವರ ಸಂದೇಶವಿದೆ ಎಂದು ಅರಿತುಕೊಂಡು ಅಂದೇ ಮಾಂಸಾಹಾರ ತ್ಯಜಿಸಿದ್ದೇನೆ. ನನ್ನ ತಾಯಿ ಅತ್ಯಂತ ಕಷ್ಟದಲ್ಲಿದ್ದಾಗ ಅವರನ್ನು ನೆನೆಸಿಕೊಂಡು ಪೂಜೆ ಮಾಡಿದಾಗ ಹೋಟೆಲ್ ನಿಂದ ಆಸ್ಪತ್ರೆಗೆ ಹೋಗುವಷ್ಟರಲ್ಲಿ ತಾಯಿ ಎದ್ದು ಕುಳಿತಿದ್ದರು. ಹೀಗೆ ನಂಬಿಕೆ ಮತ್ತು ಭಕ್ತಿಯಲ್ಲಿ ದೈವತ್ವ ಇರುತ್ತದೆ. ಭಕ್ತಿ ಅಂದರೆ ಉತ್ಕೃಷ್ಟವಾದ ಪ್ರೀತಿ. ಗುರುವಿನಲ್ಲಿ ಕರಗಿ ನೀರಾಗಿ ಒಂದಾಗಬೇಕು. ನಂಬಿಕೆಯಲ್ಲಿ ಮತ್ತು ಭಕ್ತಿಯಲ್ಲಿ ದೈವತ್ವವಿದೆ. ಭಕ್ತಿ ಎಂದರೆ ಉತ್ಕೃಷ್ಟವಾದ ಕರಾರು ರಹಿತ ಪ್ರೀತಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇದನ್ನು ಅರ್ಥ ಮಾಡಿಕೊಂಡವರಿಗೆ ಗುರುವಿನ ಸಂಪೂರ್ಣ ಆಶೀರ್ವಾದ ಹಾಗೂ ದೈವತ್ವದ ರಕ್ಷಣೆ ದೊರೆಯುತ್ತದೆ. ಯಾವುದೇ ಕೆಲಸವಾಗಲೀ ದೈವತ್ವ ಹಾಗೂ ಗುರುವಿನ ಆಶೀರ್ವಾದ ಅಗತ್ಯ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.
ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸ್ವಲ್ಪವಾದರೂ ಸಹಾಯ ಮಾಡುವ ಹೃದಯ ಇಟ್ಟುಕೊಳ್ಳಬೇಕು ಎಂದು ಕರೆ ನೀಡಿದ ಅವರು, ಸತ್ಯಸಾಯಿ ಗ್ರಾಮದಲ್ಲಿ ಸೇವಾ ಭಾವ ಎದ್ದು ಕಾಣುತ್ತದೆ. ರಾಜ್ಯದ ಸೇವೆಯಲ್ಲಿ ಇಲ್ಲಿ ಕಲಿತದ್ದನ್ನು ಗಮನದಲ್ಲಿ ಇಟ್ಟುಕೊಂಡು ಕೆಲಸ ನಿರ್ವಹಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
ಕಣ್ಣಿಗೆ ಕಾಣದ ಭಗವಂತನನ್ನು ಕಾಣುವ ಹಾಗೂ ಅನುಭವಿಸುವ ವಾತಾವರಣ ಸತ್ಯಸಾಯಿ ಗ್ರಾಮದಲ್ಲಿದೆ. ಕಲಿಯುಗದಲ್ಲಿ ಗುರುವಿನ ಮೂಲಕ ಪರಮಾತ್ಮನನ್ನು ಕಾಣಬಹುದು. ದೈವೀಕ ಪ್ರೇರಣೆಯಿಂದ ಅಮೇರಿಕಾ, ಆಫ್ರಿಕಾ, ಯೂರೋಪ್ ಸೇರಿದಂತೆ ಹಲವಾರು ವಿದೇಶಗಳಿಂದ ಸತ್ಯಸಾಯಿ ಭಕ್ತರು ತಮ್ಮ ವೃತ್ತಿಯನ್ನು ಬಿಟ್ಟು ಇಲ್ಲಿ ಸೇವೆ ಮಾಡಲು ಬಂದಿದ್ದಾರೆ. ಈ ಸೇವಾ ಮನೋಭಾವ ಶಕ್ತಿ ಸರ್ವವ್ಯಾಪಿಯಾಗಬೇಕು. ಆಧ್ಯಾತ್ಮಿಕವಾದ ಶಕ್ತಿ, ಸದಾ ಸತ್ಯ, ಸರ್ವವ್ಯಾಪಿ, ಸರಳವಾಗಿರುತ್ತದೆ. ಸರಳತೆಯಲ್ಲಿ ದೈವತ್ವವನ್ನು ಕೂಡಿರುವುದೇ ಸೇವೆ ಎಂದು ಸಿಎಂ ಹೇಳಿದರು.
ಮಧುಸೂದನ ಸ್ವಾಮೀಜಿಯವರ ಇಚ್ಛೆಯಂತೆ ಸಂಸ್ಥೆಯ ವತಿಯಿಂದ ಅಂತಾರಾಷ್ಟ್ರೀಯ ಮಟ್ಟದ ಮೆಡಿಕಲ್ ಕಾಲೇಜು ಸ್ಥಾಪಿಸುವ ನಿಟ್ಟಿನಲ್ಲಿ ಸರಕಾರದಿಂದ ಎಲ್ಲ ಸಹಕಾರ ನೀಡಲಾಗುವುದು. ಇಲ್ಲಿ ಆಸ್ಪತ್ರೆ ನಿರ್ಮಾಣವಾದರೆ ಬಡವರಿಗೆ, ಕಷ್ಟದಲ್ಲಿರುವವರಿಗೆ ಸಹಾಯವಾಗುತ್ತದೆ. ಅಲ್ಲದೆ ಇಲ್ಲಿ ಕಲಿತ ವಿದ್ಯಾರ್ಥಿಗಳು ಮತ್ತು ಬೇರೆ ಸಂಸ್ಥೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ವ್ಯತ್ಯಾಸವಿದೆ. ಈ ವಿದ್ಯಾರ್ಥಿಗಳು ವೈದ್ಯ ವೃತ್ತಿಯನ್ನು ಸೇವೆಯೆಂದು ಸ್ವೀಕರಿಸುತ್ತಾರೆ ಮುಖ್ಯಮಂತ್ರಿಗಳು ತಿಳಿಸಿದರು.
ಶ್ರೀ ಸತ್ಯ ಸಾಯಿ ಸ್ಮಾರಕ ಆಸ್ಪತ್ರೆಯ ಶ್ರೀಸತ್ಯಸಾಯಿ ರಾಜೇಶ್ವರಿ ಸ್ಮಾರಕ ಕಟ್ಟಡಕ್ಕೆ ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಸದ್ಗುರು ಶ್ರೀ ಮಧುಸೂದನ ಸಾಯಿ ಸ್ವಾಮೀಜಿ, ಆರೋಗ್ಯ ಸಚಿವ ಡಾ. ಕೆ. ಸುಧಾಕರ, ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಬಿ. ಎನ್. ಬಚ್ಚೇಗೌಡ ಮುಂತಾದವರು ಉಪಸ್ಥಿತರಿದ್ದರು.