ಆ. 30ರ ನಂತರ ರಸ್ತೆಗಳ ಮೇಲೆ ಬೀಡಾಡಿ ದನಗಳು ಕಂಡರೆ ಮಹಾನಗರ ಪಾಲಿಕೆ ವಶಕ್ಕೆ ಪಡೆಯಲಾಗುವುದು- ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ ಖಡಕ್ ಎಚ್ಚರಿಕೆ

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಅದರಲ್ಲಿಯೂ ವಿಜಯಪುರ ನಗರದಲ್ಲಿ ಹೆಚ್ಚಾಗಿರುವ ಬಿಡಾಡಿ ದನಗಳ ನಿಯಂತ್ರಣಕ್ಕಾಗಿ ಕೇವಲ ಎಚ್ಚರಿಕೆ ನೀಡದೇ ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಮಹಾನಗರ ಪಾಲಿಕೆ ಆಯುಕ್ತರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಾಣಿ ದಯಾ ಸಂಘದ ಸಭೆಯಲ್ಲಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆ ಮತ್ತು ನಗರ ಪ್ರದೇಶದ ವ್ಯಾಪ್ತಿಯಲ್ಲಿ ಬೀಡಾಡಿ ದನಗಳ ಹಾವಳಿ ಹೆಚ್ಚಾಗಿದೆ. ಇದನ್ನು ತಡೆಯಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ವಿಜಯಪುರ ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಹಾನಗರಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ, ಸಾರ್ವಜನಿಕರು ಮತ್ತು ಪೊಲೀಸರಿಂದ ಈಗಾಗಲೇ ದೂರುಗಳು ದಾಖಲಾಗಿವೆ. ಈ ಬೀಡಾಡಿ ದನಗಳನ್ನು ನಿಯಂತ್ರಣದಲ್ಲಿಡುವ ಕುರಿತು ಜಾನುವಾರುಗಳ ಮಾಲೀಕರುಗಳಿಗೆ ಈಗಾಗಲೇ ಮಹಾನಗರ ಪಾಲಿಕೆಯಿಂದ ಅನೇಕ ಬಾರಿ ನೋಟಿಸ್ ಜಾರಿ ಮಾಡಲಾಗಿದೆ. ಆದರೆ, ಪ್ರಯೋಜನವಾಗಿಲ್ಲ. ಈ ಬೀಡಾಡಿ ದನಗಳಿಂದ ಸಾರ್ವಜನಿಕ ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ವಿಜಯಪುರದಲ್ಲಿ ಪ್ರಾಣಿ ದಯಾ ಸಂಘದ ಸಭೆ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಅಧ್ಯಕ್ಷತೆಯಲ್ಲಿ ನಡೆಯಿತು.

ಆ. 30ರ ನಂತರ ಯಾರಾದರೂ ಬಿಡಾಡಿ ದನಗಳನ್ನು ರಸ್ತೆಯ ಮೇಲೆ ಬಿಟ್ಟಲ್ಲಿ ಅಂತಹ ದನಗಳನ್ನು ವಾರಸುದಾರರಿಲ್ಲದ ಜಾನುವಾರುಗಳೆಂದು ಪರಿಗಣಿಸಿ ಮಹಾನಗರ ಪಾಲಿಕೆಯ ಸುಪರ್ದಿಗೆ ತೆಗೆದುಕೊಂಡು ಬೀಡಾಡಿ ದನಗಳನ್ನು ಗೋಶಾಲೆಗೆ ಕಳುಹಿಸಲಾಗುವುದು. ಅಲ್ಲದೇ, ಗೋಶಾಲೆಯಿಂದ ಬಿಡಾಡಿ ದನಗಳನ್ನು ಬಿಡಿಸಿಕೊಳ್ಳಲು ಮಾಲೀಕರು ಕೂಡಾ ಮುಂದೆ ಬಂದಲ್ಲಿ ಮೊದಲ ಬಾರಿಗೆ ರೂ.10000 ದಂಡ ವಿಧಿಸಲಾಗುವುದು. 2ನೇ ಬಾರಿ ರಸ್ತೆಯ ಈ ಜಾನುವಾರುಗಳ ಮತ್ತೆ ರಸ್ತೆಯ ಮೇಲೆ ಬಿಟ್ಟರೆ ಅವುಗಳನ್ನು ನೇರವಾಗಿ ಗೋಶಾಲೆಯ ಸುಪರ್ದಿಗೆ ನೀಡಿ ಯಾವುದೇ ಕಾರಣಕ್ಕೂ ಬಿಡಾಡಿ ದನಗಳನ್ನು ಮರಳಿ ಮಾಲೀಕರಿಗೆ ನೀಡದಂತೆ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ವಿಜಯಪುರ ಜಿಲ್ಲೆಯಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದ ನಂತರ ಸರಕಾರದ ವತಿಯಿಂದ ಗೋಶಾಲೆ ಸ್ಥಾಪಿಸಲು ಅಥವಾ ಜಿಲ್ಲೆಯಲ್ಲಿ ಪ್ರತಿಷ್ಠಿತ ಟ್ರಸ್ಟ್‌ಗಳ ಮುಖಾಂತರ ನಿರ್ವಹಣೆಗೊಳ್ಳುತ್ತಿರುವ ಗೋಶಾಲೆಗಳ ಸಹಯೋಗದೊಂದಿಗೆ ಖಾಸಗಿ ಹಾಗೂ ಸಾರ್ವಜನಿಕ ಸಹಭಾಗಿತ್ವದಲ್ಲಿ ಸಹಕಾರ ಕೊಡುವ ಅನುದಾನವನ್ನು ಉಪಯೋಗಿಸುವ ಕುರಿತು ಸಭೆಯಲ್ಲಿ ಧೀರ್ಘವಾಗಿ ಚರ್ಚೆ ನಡೆಯಿತು.

ಜಿಲ್ಲೆಯಲ್ಲಿರುವ ಶ್ರೀ ಸಿದ್ದೇಶ್ವರ ಸಂಸ್ಥೆಯ ಶ್ರೀ ರಾಮನಗೌಡ ಬ. ಪಾಟೀಲ ಗೋರಕ್ಷಕ ಕೇಂದ್ರ, ಕಗ್ಗೋಡ ಗೋಶಾಲೆ, ಮುದ್ದೇಬಿಹಾಳ ತಾಲೂಕಿನ ಯಲಗೂರಿನಲ್ಲಿರುವ ಶ್ರೀ ಪ್ರಮೋದಾತ್ಮಕ ಗೋ ಸಂರಕ್ಷಣಾ ಕೇಂದ್ರಗಳಿಗೆ ಸರಕಾರ ನೀಡುವ ಅನುದಾನವನ್ನು ಎರಡು ಹಂತಗಳಲ್ಲಿ ಹಂಚಿಕೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಭೆಯಲ್ಲಿ ಹಾಜರಿದ್ದ ಗೋಶಾಲೆಗಳ ಪದಾಧಿಕಾರಿಗಳು ಸಹಭಾಗಿತ್ವ ತತ್ವದಡಿ ಸರಕಾರಕ್ಕೆ ಎಲ್ಲ ರೀತಿಯ ಸಹಯೋಗ ನೀಡುವುದರೊಂದಿಗೆ ಸರಕಾರ ಪರಿಸ್ಥಿತಿಗೆ ಅನುಗುಣವಾಗಿ ವಹಿಸುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವದಾಗಿ ತಿಳಿಸಿದರು. ಅಲ್ಲದೇ, ಅದರಂತೆ ಜಿಲ್ಲೆಯಲ್ಲಿ ಗೋಸಂರಕ್ಷಣೆಗೆ ಕಾರ್ಯ ನಿರ್ವಹಿಸುತ್ತಿರುವ ಮೂರು ಗೋಶಾಲೆಗಳಿಗೆ ತಲಾ ರೂ. 216200 ಹಣವನ್ನು ನಿರ್ವಹಣೆ ಅನುದಾನವಾಗಿ ಉಪಯೋಗಿಸಲು ಮಂಜೂರಾತಿ ನೀಡಲು ಕ್ರಮಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರು.

ವಿಜಯಪುರ ಜಿಲ್ಲೆಯಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಅನುಷ್ಠಾನಕ್ಕಾಗಿ ಕೈಕೊಂಡ ಕಾರ್ಯಕ್ರಮಗಳ ಕುರಿತು ಜಿಲ್ಲಾ ಪ್ರಾಣಿ ದಯಾ ಸಂಘದ ಕಾರ್ಯದರ್ಶಿ ಮತ್ತು ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪನಿರ್ದೇಶಕ ಡಾ. ಪ್ರಾಣೇಶ ಜಹಗೀರದಾರ ಸಭೆಯಲ್ಲಿ ಮಾಹಿತಿ ನೀಡಿದರು.

ಈ ಸಭೆಯಲ್ಲಿ ಗೋಶಾಲೆ ಪ್ರತಿನಿಧಿಗಳು, ಎಸ್ಪಿ ಎಚ್. ಡಿ. ಆನಂದ ಕುಮಾರ ಇತರ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

One Response

  1. Nice sir and sai park ring road is problem hal agide mattu mattomme road construction maadi si sir

Leave a Reply

ಹೊಸ ಪೋಸ್ಟ್‌