ಸಮಾಜ ಸೇವಕ ಸಂಗಮೇಶ ಬಬಲೇಶ್ವರ ಅವರಿಂದ ಜ್ಞಾನ ಜೋಳಿಗೆ ಅಭಿಯಾನ- ಶ್ರೀ ಸಿದ್ದೇಶ್ವರ ಸ್ವಾಮೀಜಿಗಳಿಂದ ಚಾಲನೆ

ಬಾಗಲಕೋಟೆ: ಸಮಾಜ ಸೇವಕ ಮತ್ತು ಕಾಂಗ್ರೆಸ್ ಮುಖಂಡ ಸಂಗಮೇಶ ಬಬಲೇಶ್ವರ ಜ್ಞಾನ ಜೋಳಿಗೆ ಅಭಿಯಾನ ಆರಂಭಿಸಿದ್ದಾರೆ.

ಈ ಕಾರ್ಯಕ್ರಮಕ್ಕೆ ವಿಜಯಪುರದ ಜ್ಞಾನಯೋಗಾಶ್ರಮದ ನಡೆದಾಡುವ ದೇವರು ಎಂದೇ ಹೆಸರಾಗಿರುವ ಶ್ರೀ ಸಿದ್ದೇಶ್ವರ ಸ್ವಾಮೀಜಿ ಗ್ರಂಥ ದಾಸೋಹ ಮಾಡುವ ಮೂಲಕ ಬಾಗಲಕೋಟೆ ಜಿಲ್ಲೆಯ ರಬಕವಿಯಲ್ಲಿ ಚಾಲನೆ ನೀಡಿದರು.

ಈ ಕಾರ್ಯಕ್ಕಾಗಿ ಸಂಗಮೇಶ ಬಬಲೇಶ್ವರ ಅವರು ಜ್ಞಾನ ಜೋಳಿಗೆ ಫೌಂಡೇಶನ್ ಆರಂಭಿಸಿದ್ದು, ವಿನೂತನ ಮತ್ತು ವಿಭಿನ್ನ ಅಭಿಯಾನ ಇದಾಗಿದೆ. ಈ ಸಂದರ್ಭದಲ್ಲಿ ಈ ವಿಶಿಷ್ಟ ಯೋಜನೆ ಕುರಿತು ಜ್ಞಾನ ಜೋಳಿಗೆ ಫೌಂಡೇಶನ್ನಿನ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅವರಿ೦ದ ಶ್ರೀಗಳು ಕಾರ್ಯಕ್ರಮದ ರೂಪರೇಷೆ ತಿಳಿದುಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ದೇಶದಲ್ಲಿಯೇ ಇದು ಒಂದು ವಿನೂತನ ಕಾರ್ಯಕ್ರಮವಾಗಿದೆ. ಇದು ಯಶಸ್ವಿಯಾಗಲಿ. ಈ ಜೋಳಿಗೆಯ ಮೂಲಕ ಸಂಗ್ರಹವಾಗುವ ಪುಸ್ತಕಗಳು ಗ್ರಾಮೀಣ ಭಾಗದ ಸರಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಬಾಳಿಗೆ ಬೆಳಕಾಗಲಿ ಎಂದು ಶುಭ ಹಾರೈಸಿ ಈ ಅಭಿಯಾನಕ್ಕೆ ತಯಾರಿಸಿದ ವಿಶಿಷ್ಟ ಜೋಳಿಗೆಗೆ ಮೊದಲ ಪುಸ್ತಕ ಹಾಕುವ ಮೂಲಕ ಚಾಲನೆ ನೀಡಿದರು.

ಜ್ಞಾನ ಜೋಳಿಗೆ ಫೌಂಡೇಶನ್ನಿನ ಸಂಸ್ಥಾಪಕ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯರ್ಥಿಗಳ ಜ್ಞಾನದಾಹ ತಣಿಸಲು ನೆರವಾಗಬೇಕೆಂಬ ಸದಾಶಯದಿಂದ ಈ ಜ್ಞಾನ ಜೋಳಿಗೆ ಅಭಿಯಾನವನ್ನು ಪ್ರಾರಂಭಿಸಿರುವುದಾಗಿ ತಿಳಿಸಿದರು.

ತಾವು ಓದಿ ಎತ್ತಿಟ್ಟ ಉಪಯೋಗಿಸದೆ ಇರುವ ಬಹಳಷ್ಟು ಪುಸ್ತಕಗಳು ಓದುಗರಿಲ್ಲದೆ ಉಳಿದು ಬಿಟ್ಟಿರುತ್ತವೆ. ಅಂಥ ಪುಸ್ತಕಗಳನ್ನು ನಮ್ಮ ಜ್ಞಾನ ಜೋಳಿಗೆ ಅಭಿಯಾನಕ್ಕೆ ನೀಡಿದರೆ ಅವುಗಳನ್ನು ನಾವು ನಾಡಿನ ಸರಕಾರಿ ಶಾಲೆಗಳ ಗ್ರಂಥಾಲಯಗಳಿಗೆ ಕೊಡುವುದರ ಮೂಲಕ ಗ್ರಾಮೀಣ ಶಾಲೆಗಳ ಬದಲಾವಣೆಗೆ ಹಾಗೂ ಮಕ್ಕಳ ಶ್ರೇಯೋಭಿವೃದ್ಧಿಗೆ ನಮ್ಮೆಲ್ಲರ ಅಳಿಲು ಸೇವೆ ಸಲ್ಲಿಸಿದಂತಾಗುತ್ತದೆ ಎಂದು ಅವರು ತಿಳಿಸಿದರು.

ತಾವು ಈಗಾಗಲೇ ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ಮೂಲಕ ತಂದೆ, ತಾಯಿ ಇಲ್ಲದ ಮಕ್ಕಳಿಗಾಗಿ ಅನೇಕ ವಿಧಾಯಕ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ ಮತ್ತು ಅನುಷ್ಠಾನಗೊಳಿಸಿದ್ದೇವೆ ಆದರೆ ಈ ಜ್ಞಾನ ಜೋಳಿಗೆ ಫೌಂಡೇಶನ್ನಿನ ಮೂಲಕ ನಾಡಿನ ಎಲ್ಲ ಮಕ್ಕಳನ್ನು ತಲುಪುವ ಅಪರೂಪದ ಕಾರ್ಯಕ್ರಮ ನಡೆಸಲಾಗುತ್ತಿದೆ. ಈ ಮೂಲಕ ಪ್ರತಿಯೊಂದು ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಈಗಾಗಲೇ ಜ್ಞಾನ ಜೋಳಿಗೆ ಫೌಂಡೇಶನ್ನಿನ ಸ್ವಯಂ ಸೇವಕರ ತಂಡವನ್ನು ರಚಿಸಲಾಗುತ್ತಿದೆ. ಈ ಫೌಂಡೇಶನ್ನಿನ ಸದಸ್ಯರು ಪ್ರತಿ ಗ್ರಾಮದಲ್ಲಿ ಸಂಚರಿಸಿ ಪುಸ್ತಕಗಳನು ಸಂಗ್ರಹಿಸಲಿದ್ದಾರೆ. ಇದಕ್ಕೆ ಸಮಾನ ಮನಸ್ಕರು ಕೈಜೊಡಿಸಬೇಕು ಎಂದು ಸಂಗಮೇಶ ಬಬಲೇಶ್ವರ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪರಮಪೂಜ್ಯ ಹರ್ಷಾನಂದ ಮಹಾಸ್ವಾಮಿಗಳು ಹಾಗೂ ಫೌಂಡೇಶನ್ನಿನ ಸದಸ್ಯರು ಉಪಸ್ಥಿತರಿದ್ದರು.

 

Leave a Reply

ಹೊಸ ಪೋಸ್ಟ್‌