ಪಾರಂಪರಿಕ ಕಸುಬುದಾರರ ನೆರವಿಗೆ ಸರಕಾರ ಆದ್ಯತೆ ನೀಡಲಿದೆ- ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ದೈವಜ್ಞ ಬ್ರಾಹ್ಮಣ ಸಮಾಜ ಹಾಗೂ ಇತರ ಸಮುದಾಯದವರು ತಮ್ಮ ಪಾರಂಪರಿಕ ಕಸುಬನ್ನು ಉಳಿಸಿ ಬೆಳೆಸಲು ಸರಕಾರ ಎಲ್ಲ ರೀತಿಯ ನೆರವು ನೀಡಲು ಸಿದ್ಧವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಅಖಿಲ ಕರ್ನಾಟಕ ದೈವಜ್ಞ ಬ್ರಾಹ್ಮಣ ಸಂಘದ ಸಮುದಾಯ ಭವನ ನಿರ್ಮಾಣಕ್ಕೆ ವರ್ಚುವಲ್ ಕಾರ್ಯಕ್ರಮದಲಲ್ಲಿ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ, ಬದಲಾಗುತ್ತಿರುವ ಆರ್ಥಿಕ ವ್ಯವಸ್ಥೆಯಲ್ಲಿ ಕುಲಕಸುಬುಗಳನ್ನು ಉಳಿಸಿ ಬೆಳೆಸಿಕೊಳ್ಳುವ ನಾನಾ ಸಮುದಾಯಗಳ ಪ್ರಯತ್ನ ಅತ್ಯಂತ ಅಭಿಮಾನ ಪಡುವ ವಿಷಯ ಎಂದು ತಿಳಿಸಿದರು.

ಅಖಿಲ ಕರ್ನಾಟಕ ದೈವಜ್ಞ ಬ್ರಾಹ್ಮಣ ಸಂಘದ ಪದಾಧಿಕಾರಿಗಳಿಂದ ಸಿಎಂ ಬೊಮ್ಮಾಯಿ ಅವರಿಗೆ ಸನ್ಮಾನ.

ಅತ್ಯಂತ ಕೌಶಲ್ಯಪೂರ್ಣ ಕಾಯಕವನ್ನು ಮಾಡುತ್ತಿದ್ದೀರಿ. ವೈಯಕ್ತಿಕ ವಿಶ್ವಾಸ ಮತ್ತು ಸಂಬಂಧ ಗ್ರಾಹಕರ ಜೊತೆಗಿರುತ್ತದೆ. ನಿಮ್ಮ ವೃತ್ತಿಯ ಮಹತ್ವವನ್ನು ಇದು ಸೂಚಿಸುತ್ತದೆ. ಬದಲಾಗುತ್ತಿರುವ ಆರ್ಥಿಕ ವ್ಯವಸ್ಥೆಯಲ್ಲಿ- ವ್ಯಾಪಾರೀಕರಣ, ಜಾಗತೀಕರಣ ಹಾಗೂ ತಂತ್ರಜ್ಞಾನ ಹಾಗೂ ಸ್ಪರ್ಧೆಯಿಂದಾಗಿ ಹಲವರು ಕಸುಬು ಬಿಡುವ ಪರಿಸ್ಥಿತಿ ಬಂದಿದೆ. ಬದಲಾಗುತ್ತಿರುವ ಪರಿಸ್ಥಿತಿಗೆ ನಾವು ಹೊಂದಿಕೊಂಡಾಗ ಮಾತ್ರ ಕಸುಬನ್ನು ಮುಂದುವರೆಸಲು ಸಾಧ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅಖಿಲ ಕರ್ನಾಟಕ ದೈವಜ್ಞ ಬ್ರಾಹ್ಮಣ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ಸಿಎಂ ಬೊಮ್ಮಾಯಿ.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ, ಸಂಘದ ಅಧ್ಯಕ್ಷ ರಾಮರಾವ ವಿ. ರಾಯ್ಕರ ಮತ್ತು ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌