ವಿಜಯಪುರ ನಗರದಲ್ಲಿ ನಾನಾ ಕಾಮಗಾರಿಗಳ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ

ವಿಜಯಪುರ: ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಅವರು ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ ಅವರ ಜೊತೆ ವಿಜಯಪುರ ನಗರದ ನಾನಾ ಕಾಮಗಾರಿಗಳ ಸ್ಥಳಗಳಿಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದರು.

ಬೆಳ್ಳಂಬೆಳಿಗ್ಗೆ ವಿಜಯಪುರ ನಗರದ ಜುಮ್ಮಾ ಮಸೀದಿ ಹತ್ತಿರ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಕೈಗೊಳ್ಳಲಾಗಿರುವ ಕುಡಿಯುವ ನೀರಿನ ಕಾಮಗಾರಿಗಾಗಿ ಅಗೆದ ರಸ್ತೆ ಕಾಮಗಾರಿಯನ್ನು ಪರಿಶೀಲಿಸಿದರು. ಅಲ್ಲದೇ, ಒಂದು ವಾರದಲ್ಲಿ ಈ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರ ಮತ್ತು ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಜಲಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೇ, ಪರಿಸರ ಸ್ವಚ್ಛತೆಗಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ ಅವರಿಗೆ ಸೂಚನೆ ನೀಡಿದರು.

ವಿಜಯಪುರ ನಗರದಲ್ಲಿ ನಡೆಯುತ್ತಿರುವ ನಾನಾ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು.

ನಂತರ ಹುತಾತ್ಮರ ವೃತ್ತ(ಮೀನಾಕ್ಷಿ ಚೌಕ್) ದಲ್ಲಿ ಮಹಾನಗರ ಪಾಲಿಕೆಯ ವತಿಯಿಂದ 14ನೇ ಹಣಕಾಸು ಆಯೋಗದ ಅನುದಾನದಲ್ಲಿ ಕೈಗೊಂಡ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿ, ಒಳಚರಂಡಿ ಮ್ಯಾನಹೋಲ್‌ಗಳನ್ನು ರಸ್ತೆಯ ಮಟ್ಟಕ್ಕೆ ಮತ್ತು ಗುಣಮಟ್ಟದಲ್ಲಿ ನಿರ್ಮಿಸುವಂತೆ ಮಹಾನಗರ ಪಾಲಿಕೆ ಎಂಜಿನಿಯರ್ ಗಳಿಗೆ ಸೂಚನೆ ನೀಡಿದರು.

ಬಳಿಕ ಅದರಂತೆ ಬಬಲೇಶ್ವರ ನಾಕಾದ ಹತ್ತಿರ ಕಾಮಗಾರಿ ನಡೆಯುವ ಸ್ಥಳದಲ್ಲಿ ಗುಂಪಾಗಿ ಬಿದ್ದಿರುವ ಮಣ್ಣನ್ನು ತೆರವುಗೊಳಿಸಲು ಮಹಾನಗರ ಪಾಲಿಕೆ ಸಿಬ್ಬಂದಿಗೆ ಸೂಚನೆ ನೀಡಿದರು. ಜೋಡ ಗುಮ್ಮಟ ಬಳಿ ಅಲ್ಪಸಂಖ್ಯಾತರ ಪ್ರದೇಶಗಳ ಅಭಿವೃದ್ಧಿ ಅನುದಾನದಲ್ಲಿ ನಿರ್ಮಿಸಲಾಗುತ್ತಿರುವ ರಸ್ತೆಯ ಕಾಮಗಾರಿಯನ್ನು ವೀಕ್ಷಿಸಿದರು. ಅಲ್ಲದೇ, ಸಿಸಿ ರಸ್ತೆ ಕಾಮಗಾರಿ ಕೈಗೊಳ್ಳುವ ಪೂರ್ವದಲ್ಲಿ ಒಳಚರಂಡಿ ಸಂಪರ್ಕವನ್ನು ಪಡೆಯಲು ಸಾರ್ವಜನಿಕರಿಗೆ ತಿಳಿಸಿದರು.

ನಂತರ ಗೋದಾವರಿ ಹೋಟೆಲಿನಿಂದ ಇಟಗಿ ಪೆಟ್ರೋಲ್ ಪಂಪವರೆಗೆ ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸಲಾಗುತ್ತಿರುವ ರಸ್ತೆ ಹಾಗೂ ತೆರೆದ ಚರಂಡಿ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೇರೆ ಯಾವುದೇ ಕಾಮಗಾರಿ ಅನುಷ್ಠಾನ ಮಾಡುವ ಮುನ್ನ ಸಂಬಂಧಿಸಿದ ಇಲಾಖೆಗಳು ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆಗೆ ತಿಳಿಸಲು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಎಕ್ಸಿಕ್ಯೂಟಿವ್ ಎಂಜಿನಿಯರ್ ಎಸ್. ಎ. ಇನಾಮದಾರ, ಮಹಾನಗರ ಪಾಲಿಕೆಯ ಎಕ್ಯಿಕ್ಯೂಟಿವ್ ಎಂಜಿನಿಯರ್ ಡಿ. ಎಚ್. ಕಿರೇಸೂರ, ವಿಶ್ಚಲ ಎಸ್. ಹೊನ್ನಳ್ಳಿ, ಜಲಮಂಡಳಿ ಎಕ್ಸಿಕ್ಯೂಟಿವ್ ಎಂಜಿನಿಯರ್ ಎಸ್. ಎಸ್. ಪಟ್ಟಣಶೆಟ್ಟಿ, ಮಹಾನಗರ ಪಾಲಿಕೆ ಮತ್ತು ಜಲಮಂಡಳಿ ಎಂಜಿನಿಯರ್ ಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌