ವಿಜಯಪುರ: ಒಂದೆಡೆ ಅನಾರೋಗ್ಯಕ್ಕೆ ಚಿಕಿತ್ಸೆ. ಮತ್ತೋಂದೆಡೆ ಜನರ ಸಮಸ್ಯೆಯ ಕಾಳಜಿ. ಹೇಳಿದರೂ ಅಧಿಕಾರಿಗಳು ಸ್ಪಂದಿಸದ ಹಿನ್ನೆಲೆಯ ಸ್ವತಃ ಗುದ್ದಲಿ ಮತ್ತು ಸನಿಖೆ ಖರೀದಿಸಿ ಚರಂಡಿ ಸ್ವಚ್ಛತೆಗೆ ಮುಂದಾಗುವ ಮೂಲಕ ಶಾಸಕರು ಗಮನ ಸೆಳೆದಿದ್ದಾರೆ.
ಅಷ್ಟೇ ಅಲ್ಲ, ತಮ್ಮ ಜೀವಕ್ಕೆ ಅಪಾಯವಾದರೆ ಅದಕ್ಕೆ ಸರಕಾರವೇ ಹೊಣೆ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.
ಈ ಘಟನೆಗೆ ಸಾಕ್ಷಿಯಾಗಿದ್ದು ಗುಮ್ಮಟ ನಗರಿ ವಿಜಯಪುರದ ಖಾವಿ ಪ್ಲಾಟ್. ಈ ಪ್ರದೇಶದಲ್ಲಿ ಪ್ರತಿಬಾರಿ ಮಳೆ ಬಂದಾಗ ಇಲ್ಲಿನ ರಸ್ತೆಗಳು ಜಲಾವೃತವಾಗಿ ಮರಂಡಿ ಮತ್ತು ಚರಂಡಿ ನೀರು ಇಲ್ಲಿ ವಾಸಿಸುಪ ಬಡಾವಣೆ ನಿವಾಸಿಗಳ ಮನೆಗಳಿಗೆ ನುಗ್ಗುತ್ತವೆ. ಹಲವಾರು ಬಾರಿ ಶಾಸಕರು ಇಲ್ಲಿಗೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ವಿಜಯಪುರ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚನೆಯನ್ನೂ ನೀಡಿದ್ದಾರೆ.
ಶನಿವಾರ ಸಂಜೆ ವಿಜಯಪುರ ನಗರದಲ್ಲಿ ಕೆಲವೆಡೆ ಉತ್ತಮ ಮಳೆಯಾಗಿದ್ದು, ಇದೇ ಖಾವಿ ಪ್ಲಾಟ್ ನಲ್ಲಿ ಮನೆಗಳಿಗೆ ಮಳೆ ಮತ್ತು ಚರಂಡಿ ನೀರು ನುಗ್ಗಿದೆ. ಆಗ ಅಲ್ಲಿನ ನಿವಾಸಿಗಳು ಈ ವಿಷಯವನ್ನು ನಾಠಾಣ(ಮೀ) ಜೆಡಿಎಸ್ ಶಾಸಕ ಡಾ. ದೇವಾನಂದ ಚವ್ಹಾಣ ಅವರ ಗಮನಕ್ಕೆ ತಂದಿದ್ದಾರೆ. ಆಗ, ಕೂಡಲೇ ಶಾಸಕರು ಈಗ ರಾತ್ರಿ ವೇಳೆಯಾಗಿದ್ದರಿಂದ ಬೆಳಿಗ್ಗೆಯಾದರೂ ಬೇಗ ಹೋಗಿ ಅಲ್ಲಿನ ಸಮಸ್ಯೆ ಬಗೆ ಹರಿಸಿ ಎಂದು ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ವಿಜಕುಮಾರ ಮೆಕ್ಕಳಕಿ ಅವರಿಗೂ ಫೋನ್ ಮೂಲಕ ಮಾಹಿತಿ ನೀಡಿ ಆಗ್ರಹಿಸಿದ್ರಾರೆ.
ಆದರೆ, ಬೆಳಿಗ್ಗೆಯಾದರೂ ಮಹಾನಗರ ಪಾಲಿಕೆಯ ಯಾವ ಸಿಬ್ಬಂದಿಯೂ ಅತ್ತ ಕಡೆ ತಲೆ ಹಾಕಿಲ್ಲ. ಇದರಿಂದ ಕೆರಳಿ ಕೆಂಡವಾದ ಶಾಸಕ ಡಾ. ದೇವಾನಂದ ಚವ್ಹಾಣ, ಕೂಡಲೇ ತಮ್ಮ ಆಪ್ತ ಸಿಬ್ಬಂದಿಯೊಂದಿಗೆ ವಿಜಯಪುರ ನಗರದ ಮಾರುಕಟ್ಟೆಗೆ ತೆರಳಿ ಚರಂಡಿ ಸ್ವಚ್ಛತೆ ಮತ್ತು ದುರಸ್ಥಿಗೆ ಬೇಕಾದ ಗುದ್ದಲಿ ಹಾಗೂ ಸನಿಕೆಯನ್ನು ಖರೀಸಿದಿಕೊಂಡು ಬಂದು ಸ್ಥಳೀಯ ಜನರ ನೆರವಿನೊಂದಿಗೆ ಖಾವಿ ಪ್ಲಾಟ್ ನಲ್ಲಿ ದುರಸ್ಥಿ ಮತ್ತು ಸ್ವಚ್ಛತೆಗೆ ಮುಂದಾಗಿದ್ದಾರೆ. ಆಗ, ಈ ವಿಷಯ ತಿಳಿದ ಮಹಾನಗರ ಪಾಲಿಕೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ.
ಆಗ ಮಹಾನಗರ ಪಾಲಿಕೆ ಸಿಬ್ಬಂದಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಶಾಸಕರು, ನಾಲ್ಕು ಬಾರಿ ಇಲ್ಲಿಯ ಸಮಸ್ಯೆ ಗಮನಕ್ಕೆ ತಂದಿದ್ದೇನೆ. ಆದರೂ, ಯಾಕೆ ಕೆಲಸ ಮಾಡುತ್ತಿಲ್ಲ? ಅನುದಾನ ಬಿಡುಗಡೆ ಮಾಡಿಸಿದ್ದರೂ ಯಾಕೆ ಕೆಲಸ ಮಾಡುತ್ತಿಲ್ಲ? ಎಂದು ಹರಿಹಾಯ್ದಿದ್ದಾರೆ. ನಾನು ನೇರವಾಗಿ ಆಸ್ಪತ್ರೆಯಿಂದ ಇಲ್ಲಿಗೆ ಬಂದಿದ್ದಿನಿ, ನಾನೇನಾದರೂ ಸತ್ತರೇ ಸರಕಾರವೇ ಹೊಣೆ ಎಂದು ಎಚ್ಚರಿಕೆ ನೀಡಿದ್ದಾರೆ. ಆಗ, ಮಧ್ಯೆ ಪ್ರವೇಶಿಸಿದ ಮಹಾನಗರ ಪಾಲಿಕೆ ಸಿಬ್ಬಂದಿ ಮತ್ತು ಸ್ಥಲೀಯ ನಿವಾಸಿಗಳು ಶಾಸಕರ ಮನವೊಲಿಸಿ ಸಮಾಧಾನ ಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಡಾ. ದೇವಾನಂದ ಚವ್ಹಾಣ, ಕಳೆದ ಕೆಲವು ದಿನಗಳಿಂದ ತಮಗೆ ಅನಾರೋಗ್ಯ ಸಮಸ್ಯೆಯಿದೆ. ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ ಕಾರಣ ಚಿಕಿತ್ಸೆ ಪಡೆಯುತ್ತಿದ್ದೇನೆ. ನಾಲ್ಕು ದಿನಗಳ ಕಾಲ ಪ್ರಜ್ಞೆ ತಪ್ಪಿದ್ದೆ. ವಿಜಯಪುರದ ಬಳಿಕ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದು ನಿನ್ನೆಯಷ್ಟೇ ವಿಜಯಪುರಕ್ಕೆ ಬಂದಿದ್ದೇನೆ. ವೈದ್ಯರು ವಿಶ್ರಾಂತಿಗೆ ಸಲಹೆ ನೀಡಿದ್ದಾರೆ. ಖಾವಿ ಪ್ಲಾಟ್ ಸಮಸ್ಯೆ ಕುರಿತು ನಿನ್ನೆ ರಾತ್ರಿಯೇ ಮಹಾನಗರ ಪಾಲಿಕೆ ಆಯುಕ್ತರಿಗೆ ಮಾಹಿತಿ ನೀಡಿದರೂ ಸ್ಪಂದಿಸದ ಹಿನ್ನೆಲೆಯಲ್ಲಿ ಈ ಕೆಲಸಕ್ಕೆ ಮುಂದಾಗಿರುವುದಾಗಿ ತಿಳಿಸಿದ್ದಾರೆ.
ತಾವು ಪ್ರತಿನಿಧಿಸುವ ನಾಗಠಾಣ ಮತಕ್ಷೇತ್ರಕ್ಕೆ ಸರಕಾರ ಅನ್ಯಾಯ ಮಾಡುತ್ತಿದೆ, ಅನುದಾನ ಬಿಡುಗಡೆ ಮಾಡುತ್ತಿಲ್ಲ. ಪ್ರತಿಯೊಂದನ್ನು ಹೋರಾಟ ಮಾಡಿಯೇ ಪಡೆಯಬೇಕಿದೆ, ಅನುದಾನ ಬರದಿದ್ದರೆ ಸಿಎಂ ಕಚೇರಿ ಎದುರು ಆಮರಣಾಂತ ಉಪವಾಸ ಮಾಡುವೆ, ನಾನೇನಾದರೂ ಸತ್ತರೆ ಅದಕ್ಕೆ ಈ ಸರಕಾರವೇ ಹೊಣೆ ಎಂದು ವಾಗ್ದಾಳಿ ಗಂಭೀರ ಎಚ್ಚರಿಕೆ ನೀಡಿದರು.