ವಿಜಯಪುರ: ವಿಜಯಪುರ ನಗರದ ಪ್ರತಿಷ್ಠಿತ ಬಿ ಎಲ್ ಡಿ ಇ ಸಂಸ್ಥೆಯ ವಚನಪಿತಾಮಹ ಡಾ. ಪ. ಗು. ಹಳಕಟ್ಟಿ ಸಂಶೋಧನಾ ಕೇಂದ್ರದಲ್ಲಿ ಖ್ಯಾತ ಸಂಶೋಧಕ, ನಾಡೋ ಡಾ. ಎಂ. ಎಂ. ಕಲಬುರ್ಗಿ ಅವರ 6ನೇ ಪುಣ್ಯ ಸ್ಮರಣೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರದ ಸಂಯೋಜನಾಧಿಕಾರಿ ಡಾ. ವಿ. ಡಿ. ಐಹೊಳ್ಳಿ, ನಾಡೋಜ ಡಾ. ಎಂ ಎಂ. ಕಲಬುರ್ಗಿ ಅವರು ನಡೆದು ಬಂದ ದಾರಿ ಬಗ್ಗೆ ಮಾಹಿತಿ ನೀಡಿದರು.
ಯಾವುದೇ ವಿಷಯವಿದ್ದರೂ ಡಾ.ಎಂ. ಎಂ. ಕಲಬುರ್ಗಿ ಅವರು ಆ ವಿಷಯದ ಬಗ್ಗೆ ಆಳವಾದ ಜ್ಞಾನ ಹೊಂದಿದ್ದರು. ಅಲ್ಲದೆ ಕಥೆ, ಕಾದಂಬರಿ ಹಳಗನ್ನಡ, ನಡುಗನ್ನಡ ಹೊಸಗನ್ನಡಗಳ ಬಗ್ಗೆ ನಿರರ್ಗಳವಾಗಿ ತರಗತಿಗಳಲ್ಲಿ ಬೋಧನೆ ಮಾಡುತ್ತಿದ್ದರು. ಅವರ ಶಿಷ್ಯರಾಗಿರುವ ಸಾವಿರಾರು ಜನರು ಇಂದು ದೇಶ, ವಿದೇಶಗಳಲ್ಲಿ ಕೆಲಸ ಮಾಡುತ್ತಿದ್ದು ಇಂದಿಗೂ ಡಾ. ಎಂ. ಎಂ. ಕಲಬುರ್ಗಿ ಅವರ ಸಾಮರ್ಥ್ಯದ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಿರುತ್ತಾರೆ ಎಂದು ತಿಳಿಸಿದರು.
1977 ರಲ್ಲಿ ಡಾ. ಎಂ ಎಂ ಕಲಬುರ್ಗಿ ಅವರ ಶಿಷ್ಯರಾಗಿ ತಾವು ಸ್ನಾತಕೋತ್ತರ ಪದವಿಯನ್ನು ಪೂರೈಸಿದ್ದು ತಮ್ಮ ಭಾಗ್ಯ. ಇಂಥ ಸಂಶೋಧಕರ ಕೈಯಲ್ಲಿ ಅಧ್ಯಯನ ಮಾಡುವುದು ಹೆಮ್ಮೆಯ ವಿಷಯ ಎಂದು ಅವರು ತಿಳಿಸಿದರು.
ವಿಜಯಪುರದ ಬಿ ಎಲ್ ಡಿ ಇ ಸಂಸ್ಥೆಯ ಅಧ್ಯಕ್ಷ ಮತ್ತು ಶಾಸಕ ಎಂ. ಬಿ. ಪಾಟೀಲ ಅವರ ಆಸಕ್ತಿ ಮತ್ತು ಮಾರ್ಗದರ್ಶನದಲ್ಲಿ ವಚನಪಿತಾಮಹ ಡಾ. ಹಳಕಟ್ಟಿ ಸಂಶೋಧನಾ ಕೇಂದ್ರವು ಡಾ. ಎಂ. ಎಂ. ಕಲಬುರ್ಗಿ ಅವರ ಸಮಗ್ರ ಸಾಹಿತ್ಯವನ್ನು 40 ಸಂಪುಟಗಳಲ್ಲಿ ಪ್ರಕಟಿಸಿದೆ. ಈ ಮೂಲಕ ನಾಡೋಜ ಮತ್ತು ಸಂಶೋಧಕರಾಗಿದ್ದ ಡಾ. ಎಂ. ಎಂ. ಕಲಬುರ್ಗಿ ಅವರಿಗೆ ಗೌರವಪೂರ್ವಕ ನಮನ ಸಲ್ಲಿಸಿದೆ ಎಂದು ವಿ. ಡಿ. ಐಹೊಳ್ಳಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಕಾರ್ಯ ನಿಮಿತ್ಯ ಸಂಶೋಧನೆ ಕೇಂದ್ರಕ್ಕೆ ಆಗಮಿಸಿದ್ದ ಮಾಜಿ ಸಚಿವ ಎಂ. ಬಿ. ಪಾಟೀಲ ಅವರ ಪತ್ನಿ ಆಶಾ ಎಂ. ಪಾಟೀಲ ಡಾ. ಎಂ. ಎಂ. ಕಲಬುರ್ಗಿ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೇಂದ್ರದ ಕಾರ್ಯದರ್ಶಿ ಡಾ. ಎಂ. ಎಸ್. ಮದಭಾವಿ, ಸಂಯೋಜನಾಧಿಕಾರಿ ಎ. ವಿ. ಬೂದಿಹಾಳ, ಸಂಶೋಧನಾ ವಿದ್ಯಾರ್ಥಿನಿ ಚೈತನಾ ಸಂಕೊಂಡ, ಮಹೇಶ ದೊಡ್ಡಿ ಉಪಸ್ಥಿತರಿದ್ದರು.