ವಿಜಯೇಂದ್ರಗೆ ನನ್ನಿಂದಲೇ ಸಚಿವ ಸ್ಥಾನ ತಪ್ಪಿದೆ- ನನ್ನ ವಿರೋಧಿಗಳಿಗೆ ತಕ್ಕ ಪಾಠ ಕಲಿಸುವೆ- ಯತ್ನಾಳ

ವಿಜಯಪುರ: ಬಿ. ವೈ. ವಿಜಯೇಂದ್ರ ಅವರಿಗೆ ಸಚಿವ ಸ್ಥಾನ ತಪ್ಪಲು ನಾನೇ ಕಾರಣ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ನನಗೆ ಯಾವುದೇ ಕಾರಣಕ್ಕೂ ಸಚಿವ ಸ್ಥಾನ ನೀಡಬೇಡಿ ಎಂದು ಪಟ್ಟು ಹಿಡಿದ ಪರಿಣಾಮ ಅವರಿಗೆ ಸಚಿವ ಸ್ಥಾನ ತಪ್ಪಿದೆ ಎಂದು ತಿಳಿಸಿದರು.

ಮಸ್ಕಿ ಬೈ ಎಲೆಕ್ಷನ್ ಯಾರ ಉಸ್ತುವಾರಿಯಲ್ಲಿ ನಡೆಯಿತು? ಅದರ ಪಲಿತಾಂಶ ಏನಾಯ್ತು? ಒಂದೇ ಕುಟುಂಬದಲ್ಲಿ ಎಷ್ಟು ಜನರಿಗೆ ಅವಕಾಶ ನೀಡಬೇಕು ಎಂದು ಪ್ರಶ್ನಿಸಿದರು.

ಇದೇ ವೇಳೆ, ತಮ್ಮ‌ ವಿರುದ್ಧ ಮಾತನಾಡುವವರಿಗೆ ತಕ್ಕ ಪಾಠ ಕಲಿಸುವುದಾಗಿ ಅವರು ಎಚ್ಚರಿಕೆ ನೀಡಿದ ಯತ್ನಾಳ, ನನ್ನ ವಿರುದ್ಧ ಹೇಳಿಕೆ ನೀಡಿದವರು ಮುಂದೆ ಯಾವ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸುತ್ತಾರೆ ನೋಡುತ್ತೇನೆ. ಬಿಜೆಪಿಯಿಂದ ಸ್ಪರ್ಧಿಸಲಿ, ಕಾಂಗ್ರೆಸ್ ನಿಂದ ಕಣಕ್ಕಿಳಿಯಲಿ ಅಥವಾ ಮುಸ್ಲಿಂ ಲೀಗ ನಿಂದಲೇ ಬಂದರೂ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಇತ್ತೀಚೆಗೆ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಭೀಮಾಶಂಕರ ಹದನೂರ ತಮ್ಮ ವಿರುದ್ಧ ಮಾಡಿರುವ ಆರೋಪಗಳಿಗೆ ಯತ್ನಾಳ ಈ ಎಚ್ಚರಿಕೆ ನೀಡಿದರು.

ಅದ್ದೂರಿ ಗಣೇಶ ಚತುರ್ಥಿ ಆಚರಣೆಗೆ ಸರಕಾರದ ಅವಕಾಶ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಗಣೇಶ ಹಬ್ಬಕ್ಕೆ ಆತಂಕ ಮಾಡದಂತೆ ಗೃಹ ಸಚಿವರಿಗೆ ಹೇಳಿದ್ದೇನೆ. ಗಲ್ಲಿಗಳಲ್ಲಿ ಸಾರ್ವಜನಿಕ ಗಣಪತಿಗೆ ಅವಕಾಶ ನೀಡುವಂತೆ ಕೇಳಿದ್ದೇನೆ. ಈ ಬಗ್ಗೆ ಸರಕಾರದಲ್ಲಿ ಆಂತರಿಕವಾಗಿ ನಿರ್ಣಯವೂ ಆಗಿದೆ. ಸರಕಾರದಿಂದ ತೊಂದರೆಯಾಗಲ್ಲ ಎಂದು ಹೇಳಿದ್ದಾರೆ‌. ಸಿಎಂ ಈಗಾಗಲೇ ವಿಜಯಪುರ ಡಿಸಿ ಮತ್ತು ಎಸ್ಪಿಗೆ ಹೇಳಿದ್ದಾರೆ. ಹಿಂದೂ ಸಾರ್ವಜನಿಕ ಹಬ್ಬಗಳಿಗೆ ತೊಂದರೆ ಮಾಡೊಲ್ಲ ಎನ್ನುವ ವಿಶ್ವಾಸವಿದೆ. ಮೂರೇ ದಿನ ಗಣೇಶ ಕೂಡಿಸಲು ಆಗುವುದಿಲ್ಲ. ಸಂಪ್ರದಾಯದಂತೆ ಐದು ದಿನ, ಏಳು ದಿನ ಆಚರಣೆ ನಡೆಯುತ್ತದೆ‌ ಎಂದು ಅವರು ತಿಳಿಸಿದರು.

ವಿಜಯಪುರ ಜಿಲ್ಲೆಗೆ ಸಚಿವ ಸ್ಥಾನ ಸಿಗದಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ವಿಜಯಪುರ ಜಿಲ್ಲೆಗೆ ನ್ಯಾಯಯುತವಾಗಿ ಸಚಿವ ಸ್ಥಾನ ಸಿಗಬೇಕು. ಸಿಂದಗಿ ಬೈ ಎಲೆಕ್ಷನ್ ಗೂ ಮೊದಲೇ ಸಚಿವ ಸ್ಥಾನ ನೀಡಬೇಕು. ಯಾರ ಉಪಕಾರಕ್ಕೆ ಸಚಿವ ಸ್ಥಾನ ಕೊಡ್ತಾ ಇಲ್ಲ. ಬಾಗಲಕೋಟೆ, ಶಿವಮೊಗ್ಗಕ್ಕೆ ಎರಡು ಸಚಿವ ಸ್ಥಾನ ಯಾಕೆ ಕೊಟ್ಟಿದ್ದೀರಿ ಕಲಬುರಗಿ, ಚಾಮರಾಜನಗರ, ಮೈಸೂರು, ಯಾದಗಿರಿಗೆ ಯಾಕೆ ಸಚಿವ ಸ್ಥಾನ ಕೊಟ್ಟಿಲ್ಲ? ಇವ್ರೇನು ಓಟ್ ಹಾಕಿಲ್ಲವಾ? ಎಲ್ಲ ಜಿಲ್ಲೆಗಳಿಗೂ ಒಂದೊಂದು ಸಚಿವ ಸ್ಥಾನ ನೀಡಬೇಕು. ಕೆಲವರಿಗೆ ಯತ್ನಾಳ್ ಸಚಿವ ಆಗಬಾರದು ಎಂಬುದಿದೆ. ಹಣೆಯಲ್ಲಿ ಬರೆದಿದ್ದರೆ ಯಾರೂ ತಪ್ಪಿಸಲು ಸಾಧ್ಯವಿಲ್ಲ. ಈ ವಾರಿ ವಿಜಯಪುರಕ್ಜೆ ಅನ್ಯಾಯ ಆಗುವುದಿಲ್ಲ. ನಮ್ಮ ಹೈಕಮಾಂಡ್ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತದೆ. ವಿಜಯಪುರ ಜಿಲ್ಲೆಯಲ್ಲಿ ಮೂಲ ಬಿಜೆಪಿಗರು ಮಂತ್ರಿ ಆಗಲಿದ್ದಾರೆ ಎಂದು ಅವರು ತಿಳಿಸಿದರು.

ಸಿಎಂ‌ ಕುರ್ಚಿ ಮೇಲೆ ಯತ್ನಾಳ್ ಕಣ್ಣು ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕಾಲ ಕೂಡಿ ಬಂದ್ರೆ ಯಾರು ತಪ್ಪಿಸಲು ಆಗುವುದಿಲ್ಲ. ಕಾಲ ಯಾರನ್ನು ಕೇಳಿ ಬರುವುದಿಲ್ಲ. ಬೊಮ್ಮಾಯಿ ಹೆಸರು ಇರಲಿಲ್ಲ. ಆದರೆ, ಅವರು ಸಿಎಂ‌ ಆಗಿದ್ದಾರೆ. ಕಾಲಕ್ರಮೇಣ ಬದಲಾವಣೆ ನಡೆದೆ ನಡೆಯುತ್ತವೆ. ಒಳ್ಳೆಕಾಲ ಬಂದೆ ಬರುತ್ತದೆ. ನಾವ್ಯಾಕೆ ನಿರೀಕ್ಷೆ ಮಾಡಬಾರದು ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರಶ್ನಿಸಿದರು.

Leave a Reply

ಹೊಸ ಪೋಸ್ಟ್‌