ಮೂರು ತಲೆಮಾರುಗಳಿಂದ ಮಣ್ಣಿನ ಗಣೇಶ ಮೂರ್ತಿ ತಯಾರಿಸುವ ಮೂಲಕ ಮೂಲಕ ಗಮನ ಸೆಳೆಯುತ್ತಿರುವ ಬಸವ ನಾಡಿನ ಪತ್ತಾರ ಕುಟುಂಬ

ವಿಜಯಪುರ: ಈ ಕುಟುಂಬ ಕಳೆದ ಮೂರು ತಲೆಮಾರುಗಳಿಂದ ಪರಸರಕ್ಕೆ ಪೂರಕವಾಗಿರುವ ಮಣ್ಣಿನ ಗಣೇಶ ಮೂರ್ತಿಗಳನ್ನು ತಯಾರಿಸುವ ಮೂಲಕ ಗಮನ ಸೆಳೆದಿದೆ. ಮಣ್ಣಿನ ಗಣಪ ತಯಾರಿಸಲು ಪಣತೊಟ್ಟು ಅದನ್ನೇ ನಡೆಸಿಕೊಂಡು ಬಂದಿರುವ ಕುಟುಂಬ ಎಲ್ಲರೂ ಪರಿಸರ ಸ್ನೇಹಿ ಗಣೇಶೋತ್ಸವ ನಡೆಸಲಿ ಎಂಬ ಸಂಕಲ್ಪ ಮಾಡಿದೆ. ಈ ಕುಟುಂಬದ ಮಗ ಮತ್ತು ಸೊಸೆ ವಿದೇಶದಲ್ಲಿ ಸಾಫ್ಟವೇರ್ ಎಂಜಿನಿಯರ್ ಆಗಿದ್ದರೂ ಕೂಡ ತಂದೆಯ ಸಂಕಲ್ಪಕ್ಕೆ ಪೂರಕವಾಗಿ ನಿಂತಿರುವುದು ಗಮನಾರ್ಹವಾಗಿದೆ.

ಗುಮ್ಮಟ ನಗರಿ ವಿಜಯಪುರದ ವಾಟರ್ ಟ್ಯಾಂಕ್ ಬಳಿಯ ಜೋರಾಪುರ ಪೇಟೆಯಲ್ಲಿ ನಿವೃತ್ತ ಶಿಕ್ಷಕ ಮನೋಹರ ಪತ್ತಾರ ಕುಟುಂಬ ಮಣ್ಣಿನ ಗಣೇಶನ ಮೂರ್ತಿಗಳನ್ನು ತಯಾರಿಸುವ ಮೂಲಕ ಹೆಸರು ಮಾಡಿದೆ. ಅದೂ ಕೂಡ ಕಳೆದ 45 ವರ್ಷಗಳಿಂದ ತಮ್ಮ ಪೂರ್ವಜರಿಂದ ಬಂದಿರುವ ಕಲೆಯನ್ನು ಪರಿಸರಕ್ಕೆ ಪೂರಕವಾಗಿರುವ ವಸ್ತುಗಳನ್ನು ಬಳಸು ಮೂಲಕ ಮುಂದುವರೆಸಿರುವುದು ಗಮನಾರ್ಹವಾಗಿದೆ.

ಇಂದಿನ ಆಧುನಿಕ ಭರಾಟೆಯ ನಡುವೆಯೂ ಅದರ ಸೋಂಕಿಗೆ ತಮ್ಮ ಕಾಯಕ ಬಲಿಕೊಡದೆ ರಕ್ಷಿಸಿಕೊಂಡು ಬರುತ್ತಿದೆ. ಈಗ ಜನರೂ ಕೂಡ ಬಣ್ಣ ಮತ್ತು ಅಂದಕ್ಕೆ ಮರುಳಾಗಿ ಪಿಓಪಿ ಗಣೇಶ ಮೂರ್ತಿಗಳನ್ನು ಮುಂದಾಗುತ್ತಿದ್ದರೂ, ಅದ್ಯಾವುದಕ್ಕೂ ಗಮನ ನೀಡದ ಈ ಕುಟುಂಬ ಪೂಜೆಗೆ ಯೋಗ್ಯವಾದ ಮತ್ತು ಪರಿಸರಕ್ಕೆ ಪೂರಕವಾಗಿರುವ ಮಣ್ಣಿನ ಗಣೇಶ ಮೂರ್ತಿಗಳನ್ನು ಪ್ರತಿ ವರ್ಷವೂ ಗಣೇಶ ಆಚರಣೆ ಹಿನ್ನೆಲೆಯಲ್ಲಿ ತಯಾರಿಸುತ್ತಿದೆ.

ಈ ಕುರಿತು ಬಸವ ನಾಡಿಗೆ ಪ್ರತಿಕ್ರಿಯೆ ನೀಡಿರುವ ಮನೋಹರ ಪತ್ತಾರ, ತಮ್ಮ ತಂದೆಯ ಕಾಲದಿಂದಲೂ ಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಮಾತ್ರ ಮಾರಾಟ ಮಾಡುತ್ತಿದ್ದೇವೆ. ಇದಕ್ಕೆ ತಮ್ಮ ಪತ್ನಿ ಶಾರದಾ ಬೆನ್ನೆಲುಬಾಗಿ ನಿಂತಿದ್ದಾರೆ. ಮಗ ಮತ್ತು ಸೊಸೆ ಅಮೇರಿಕಾದಲ್ಲಿ ಎಂಜಿನಿಯರ್‌ ಆಗಿದ್ದರೂ ಪ್ರತಿವರ್ಷ ವಿಜಯಪುರಕ್ಕೆ ಬಂದು ಕೈಜೋಡಿಸುತ್ತಾರೆ. ಆದರೆ, ಕಳೆದ ಎರಡು ವರ್ಷಗಳಿಂದ ಕೊರೊನಾ ಹಿನ್ನೆಲೆಯಲ್ಲಿ ಬಂದಿಲ್ಲ ಎನ್ನುತ್ತಾರೆ.

ತಮ್ಮ ತಂದೆ ಕಾಳಪ್ಪ ಮಣ್ಣಿನ ಗಣೇಶ ಮೂರ್ತಿ ತಯಾರಿಸುತ್ತಿದ್ದರು. ಅವರಿಂದ ತಾವೂ ಇದನ್ನು ಕಲಿತಿರುವುದಾಗಿ ಹೇಳುವ ಅವರು, 1973 ರಿಂದ ಈ ಕಾರ್ಯದಲ್ಲಿ ತೊಡಗಿದ್ದೇನೆ. ದರಬಾರ ಶಾಲೆಯಲ್ಲಿ ಕಲಾ ಶಿಕ್ಷಕನಾಗಿದ್ದೆ. ತಂದೆಯ ಮಾತಿನಂತೆ ಈ ಕಲೆಯನ್ನೂ ಕಲಿತೆ. ಈಗ ಮಣ್ಣಿನ ಗಣಪತಿ ಮೂರ್ತಿಗಳಿಗೆ ಸಾಕಷ್ಟು ಬೇಡಿಕೆಯಿದೆ. ತಮ್ಮ ಸಾಧನೆಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದು, ಸದ್ಯ ಕರ್ನಾಟಕ ಶಿಲ್ಪ ಕಲಾ ಅಕಾಡಮಿ ಸದಸ್ಯರಾಗಿ ಯೂ ಸೇವೆ ಸಲ್ಲಿಸುತ್ತಿರುವೆ ಎಂದು ಮನೋಹರ ಪತ್ತಾರ ಹೇಳುತ್ತಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಮನೋಹರ ಪತ್ತಾರ ಅವರ ಪತ್ನಿ ಶಾರದಾ ಮನೋಹರ ಪತ್ತಾರ, ತಾವು ಮದುವೆಯಾಗಿ ಗಂಡನ ಮನೆಗೆ ಬಂದಾಗ ಗಣೇಶ ಮೂರ್ತಿ ಮಾಡುವುದು ತಮಗೆ ಗೊತ್ತಿರಲಿಲ್ಲ. ಆದರೆ, ಪತಿಯ ಕಾಯಕದಲ್ಲಿ ಭಾಗಿಯಾಗಿ ತಾವೂ ಈಗ ಈ ಕಲೆಯನ್ನು ಕಲಿತಿದ್ದು, ಕಳೆದ 40 ವರ್ಷಗಳಿಂದ ಈ ಕಾಯಕ ಮುಂದುವರೆಸಿರುವುದಾಗಿ ತಿಳಿಸಿದ್ದಾರೆ.

ಮನಹೋರ ಮತ್ತು ಶಾರದಾ ಪತ್ತಾರ ದಂಪತಿ ಈ ಗಣೇಶ ಮೂರ್ತಿಗಳ ತಯಾರಿಕೆಗಾಗಿ ಸಾಕಷ್ಟು ಸಿದ್ಧತೆಗಳನ್ನೂ ಮಾಡಿಕೊಂಡಿರುತ್ತಾರೆ. ಹೊಲದಲ್ಲಿನ ಆರು ಇಂಟು ಮೇಲ್ಪದರದ ಮಣ್ಣನ್ನು ತೆಗೆದು ಅದರ ಕೆಳಗಿನ ಮಣ್ಣನ್ನು ಸಂಗ್ರಹಿಸುತ್ತಾರೆ. ನಂತರ ಅದನ್ನು ಮನೆಗೆ ತಂದು ಕುಟ್ಟಿ ಸೋಸುತ್ತಾರೆ. ಅದನ್ನು ಒಂದೆಡೆ ಸಂಗ್ರಹಿಸಿ ಅದಕ್ಕೆ ಅರಳೆ ಅಂದರೆ ಹತ್ತಿಯನ್ನು ಮಿಶ್ರಣ ಮಾಡಿ ನೆನೆಯಲು ಬಿಡುತ್ತಾರೆ. ಈ ಮಿಶ್ರಣಕ್ಕೆ ಬಾಂಬೆ ಕ್ಲೇ ಸೇರ್ಪಡೆ ಗೊಳಿಸಿ ಗಣಪ ಮೂರ್ತಿಗಳನ್ನು ತಯಾರಿಸುತ್ತಾರೆ. ನಂತರ ನೈಸರ್ಗಿಕ ಬಣ್ಣ ಅಥವಾ ವಾಟರ್‌ ಪೇಂಟ್‌ ಬಳಸಿ ಗಣೇಶ ಮೂರ್ತಿಗಳನ್ನು ಅಲಂಕರಿಸುತ್ತಾರೆ. ಇದರಿಂದ ತಮಗಷ್ಟೇ ಅಲ್ಲ, ತಮ್ಮ ಬಳಿ ಗಣೇಶ ಮೂರ್ತಿಗಳನ್ನು ತೆಗೆದುಕೊಂಡು ಹೋಗಿ ಪೂಜಿಸಯವ ಭಕ್ತರಿಗೆ ಒಳ್ಳೆಯದಾಗುತ್ತದೆ ಎಂಬುದು ಪತ್ತಾರ ದಂಪತಿಗಳ ಅಭಿಪ್ರಾಯವಾಗಿದೆ.

ಈಗ ವಿಜಯಪುರ ಮಹಾನಗರ ಪಾಲಿಕೆಯೂ ಕೂಡ ಪಿಓಪಿ ಗಣೇಶ ಮೂರ್ತಿಗಳನ್ನು ನಿಷೇಧಿಸಿರುವುದರಿಂದ ಮಣ್ಣಿನ ಗಣೇಶ ಮೂರ್ತಿಗಳಿಗೆ ಬೇಡಿಕೆ ಬಂದಿದೆ. ಈ ಪತ್ತಾರ ದಂಪತಿಯ ಕಾರ್ಯಕ್ಕೆ ಸಲಾಂ ಹೇಳಲೇಬೇಕು.

 

 

Leave a Reply

ಹೊಸ ಪೋಸ್ಟ್‌