ಹಾವೇರಿ: ತವರು ಜಿಲ್ಲೆ ಹಾವೇರಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ನಾಯಿ ತಮ್ಮ ಸ್ವಕ್ಷೇತ್ರ ಶಿಗ್ಗಾವಿ ತಾಲೂಕಿನ ತಡಸ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದರು.
ರಾಜ್ಯದ ಜನತೆಗೆ ನಾನು ಮುಖ್ಯಮಂತ್ರಿ. ಆದರೆ ಕ್ಷೇತ್ರದ ಒಳಗಡೆ ಬಂದಾಗ ನಾನು ನಿಮ್ಮ ಬಸವರಾಜ ಬೊಮ್ಮಾಯಿ ಎಂದು ಹೇಳುವ ಮೂಲಕ ತಾವೊಬ್ಬ ಸರಳ ರಾಜಕಾರಣಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ, ತಮ್ಮ ಸಚಿವ ಸಂಪುಟದಲ್ಲಿನ ಸಹೋದ್ಯೋಗಿಗಳ ಕಾರ್ಯಕ್ಷಮತೆ ದಕ್ಷತೆ, ಪ್ರತಿಭೆಯ ಬಗ್ಗೆ ಮೆಚ್ಚುಗೆಯ ವ್ಯಕ್ತಪಡಿಸಿದರು.
ನನ್ನ ಸಚಿವ ಸಂಪುಟದಲ್ಲಿರುವ ಸಚಿವರು ಪ್ರತಿಭಾವಂತರಿದ್ದಾರೆ. ಕಾರ್ಯಕ್ಷಮತೆಯಿಂದ ಕೆಲಸ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಹೀಗಾಗಿ ರಾಜ್ಯದ ಜನತೆಗೆ ಉತ್ತಮ ಕಾರ್ಯಕ್ರಮಗಳನ್ನು ಕೊಡಲು ಸಾಧ್ಯವಾಗುತ್ತಿದೆ ಎಂದು ಹೇಳಿದರು.
ತಡಸ ಗ್ರಾಮ ಮುಂದಿನ ದಿನಗಳಲ್ಲಿ ಪಟ್ಟಣ, ನಗರವಾಗಿ ಪರಿವರ್ತನೆಯಾಗಲಿದೆ. ಗ್ರಾಮಕ್ಲೆ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು. ಈಗಾಗಲೇ ಗ್ರಾಮದಲ್ಲಿ ಪದವಿ ಪೂರ್ವ ಕಾಲೇಜು ಇದೆ. ಮುಂದಿನ ದಿನಗಳಲ್ಲಿ ಇಲ್ಲಿ ಪದವಿ ಕಾಲೇಜು ಸ್ಥಾಪಿಸಲಾಗುವುದು. ಹೆಣ್ಣು ಮಕ್ಕಳಿಗಾಗಿ ವಿಶೇಷ ಹೈಸ್ಕೂಲನ್ನು ತೆರೆಯಲಾಗುವುದು. ಗ್ರಾಮದ ಯುವಕ ಯುವತಿಯರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ತಾಂತ್ರಿಕ ಶಿಕ್ಷಣ ನೀಡುವ ಶಾಲೆಯನ್ನು ಆರಂಭಿಸಲು ಉದ್ದೇಶಿಸಿದ್ದೇನೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.