ಸೆ. 5 ರಂದು ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ನೀಡುವ ಕುರಿತು ನಿರ್ಧಾರ- ಸಿಎಂ ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ: ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ನೀಡುವ ಕುರಿತು ಸೆ. 5 ರಂದು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಹಾವೇರಿ ಜಿಲ್ಲೆಗೆ ತೆರಳುವ ಮುನ್ನ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಕೋವಿಡ್ ಪರಿಸ್ಥಿತಿ ನೋಡಿಕೊಂಡು‌ ನಿರ್ಧಾರ ಕೈಗೊಳ್ಳಲಾಗುವುದು.  ಜಿಲ್ಲಾವಾರು ಕೊವಿಡ್ ಪರಿಸ್ಥಿತಿ ಕುರಿತು ವರದಿ ನೀಡುವಂತೆ ತಜ್ಞರಿಗೆ ಕೇಳಿದ್ದೇವೆ. ಸೆ. 5 ರಂದು ಈ ಕುರಿತು ಸೂಕ್ತ ಪ್ರಕಟಿಸಿಲಾಗುವುದು ಎಂದು ತಿಳಿಸಿದರು.

ಈಗಾಗಲೇ ನಾವು ವೀಕೆಂಡ್ ಕರ್ಪ್ಯೂ ತೆಗೆದಿದ್ದೇವೆ. ಕೋವಿಡ್ ಪರಿಸ್ಥಿತಿ ನೋಡಿಕೊಂಡ ನೈಟ್ ಕರ್ಪ್ಯೂ ತೆಗೆಯುವ ಬಗ್ಗೆ ನಿರ್ಧಾರ ಮಾಡಲಾಗುವುದು. ಆರ್ಥಿಕ ಚಟುವಟಿಕೆ ಮೇಲೆ ನಿರ್ಬಂಧ ಹಾಕುವ ಉದ್ದೇಶ ಸರಕಾರಕ್ಕಿಲ್ಲ. ಕೋವಿಡ್ ನಿರ್ವಹಣೆಯೂ ನಮಗೆ ಅಷ್ಟೇ ಮುಖ್ಯವಾಗಿದೆ. ಕೊರೊನಾ ನಿಯಂತ್ರಣದಲ್ಲಿರುವ ಜಿಲ್ಲೆಗಳಲ್ಲಿ ನೈಟ್ ಕರ್ಪ್ಯೂ ಸಡಿಲಿಕೆ ಬಗ್ಗೆ ಮುಂದಿನ ದಿನದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ದೇಶ ವಿರೋಧಿ ಚಟುವಟಿಕೆಗಳ ಮೇಲೆ ನಿಗಾ

ಇದೇ ವೇಳೆ, ಉಗ್ರ ಚಟುವಟಿಕೆ ನಡೆಸುವವರ ಮೇಲೆ ನಿಗಾ ವಹಿಸಲಾಗುತ್ತಿದೆ. ದೇಶದ ವಿರುದ್ಧ ಉಗ್ರ ಚಟುವಟಿಕೆ ನಡೆಸುವವರ ಮೇಲೆ ಪೊಲೀಸ್ ಇಲಾಖೆ‌ ನಿಗಾ ಇಟ್ಟಿದೆ. ಉಗ್ರರ ಜೊತೆ ಕೈ ಜೋಡಿಸಿ ಸ್ಲೀಪರ್ ಸೆಲ್ ಗಳಂತೆ ಕೆಲಸ ಮಾಡುವವರ ಮೇಲೆ‌ಯೂ ನಿಗಾ ವಹಿಸಲಾಗುತ್ತಿದೆ‌. ಈಗಾಗಲೇ ಎನ್ಐಎ ಕೆಲವರನ್ನು ಲಿಫ್ಟ್ ಮಾಡಿದೆ‌. ಎನ್‌ಐಎ ಜೊತೆ ನಮ್ಮ ಪೊಲೀಸರು ಕೂಡಿಕೊಂಡು ಕೆಲಸ ಮಾಡುತ್ತಿದ್ದಾರೆ. ಉಗ್ರರ ಚಟುವಟಿಕೆಗಳ ಮೇಲೆ ನಿಗಾ ಇಡಲಾಗಿದೆ ಎಂದು ಸಿಎಂ ತಿಳಿಸಿದರು.

ಗುರುವಾರ ಅಮಿತ ಶಾ ಹುಬ್ಬಳ್ಳಿಗೆ ಭೇಟಿ

ಈ ಮಧ್ಯೆ, ಗುರುವಾರ ಕೇಂದ್ರ ಗೃಹ ಸಚಿವ ಅಮಿತ ಶಾ ಸೇರಿದಂತೆ ಸೇರಿದಂತೆ ಹಲವಾರು ಕೇಂದ್ರ ಸಚಿವರು ಹುಬ್ಬಳ್ಳಿ ಆಗಮಿಸುತ್ತಿದ್ದಾರೆ. ಬಳಿಕ ದಾವಣಗೆರೆಗೆ ಅಮಿತ್ ಶಾ ಭೇಟಿ ನೀಡಲಿದ್ದಾರೆ. ಅಮಿತ್ ಶಾ ಜೊತೆ ರಾಜ್ಯದ ಹಲವಾರು ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚೆ ನಡೆಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮೂರು ಮಹಾನಗರ ಪಾಲಿಕೆಗಳ ಚುನಾವಣೆ

ರಾಜ್ಯ ಮೂರು ಮಹಾನಗರ ಪಾಲಿಕೆಗಳಿಗೆ ನಡೆಯುತ್ತಿರುವ ಚುನಾವಣೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಮೂರೂ ಪಾಲಿಕೆಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹುಬ್ಬಳ್ಳಿ – ಧಾರವಾಡ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಲಾಗುತ್ತಿದೆ. ಈಗಾಗಲೇ ಹಲವಾರು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಲೇ ಇವೆ. ಕೇಂದ್ರ ಮತ್ತು ರಾಜ್ಯ ಸರಕಾರದ ಅಡಿ ಸ್ಮಾರ್ಟ್ ಸಿಟಿ ಸೇರಿದಂತೆ ನಾನಾ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಈ ಯೋಜನೆಗಳಿಗೆ ಮತ್ತಷ್ಟು ಒತ್ತು ಒಟ್ಟು ದೊಡ್ಡ ಪ್ರಮಾಣದಲ್ಲಿ ಮಾಡಲಾಗುವುದು. ನಗರಾಭಿವೃದ್ಧಿ ವಿಚಾರದಲ್ಲಿ ಮುಂದಿನ ದಿನಗಳಲ್ಲಿ ಅನೇಕ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಚುನಾವಣೆ ಇರೋ ಕಾರಣ ಸದ್ಯಕ್ಕೆ ನಾನು ಹೆಚ್ಚಿನದೇನನ್ನೂ ಹೇಳಲ್ಲ. ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ‌ಯನ್ನು ಬೆಂಬಲಿಸಿ. ಮುಂದಿನ ದಿನಗಳಲ್ಲಿ ಎಲ್ಲ ಮಹಾನಗರ ಪಾಲಿಕೆಗಳಿಗೂ ವಿಶೇಷವಾದ ಯೋಜನೆ ರೂಪಿಸಲಾಗುವುದು. ಕೈಗಾರಿಕೆಗಳನ್ನು ಸ್ಥಾಪಿಸಿ ಉದ್ಯೋಗ ಸೃಷ್ಟಿ ಮಾಡಲಾಗುವುದು. ಬಡವರು ಮತ್ತು ಸ್ಲಂ ನಿವಾಸಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಿ ಅವರ ಜೀವನ ಗುಣಮಟ್ಟ ಸುಧಾರಿಸಲು ಸಮಗ್ರ ಯೋಜನೆ ರೂಪಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಇದೇ ಸಂದರ್ಭದಲ್ಲಿ ತಿಳಿಸಿದರು.

 

ಈ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವ ಸಿ. ಸಿ. ಪಾಟೀಲ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌