ವಿಜಯಪುರ: ಕ್ಯಾನ್ಸರ್ ಪೀಡಿತ ಮುಸ್ಲಿಂ ಮಹಿಳೆಯರಿಗೆ ಸರಕಾರದಿಂತ ತಲಾ ಒಂದು ಲಕ್ಷ ರೂಪಾಯಿ ಸಹಾಯ ಧನ ನೀಡುವ ಯೋಜನೆ ತಾವು ಘೋಷಣೆ ಮಾಡಿದ್ದಲ. ಇದು 2009 ರಿಂದಲೇ ಜಾರಿಯಲ್ಲಿದೆ ಎಂದು ಮುಜರಾಯಿ ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಸ್ಪಷ್ಟಪಡಿಸಿದ್ದಾರೆ.
ವಿಜಯಪುರ ನಗರದ ಅದೃಷ್ಟ ಲಕ್ಷ್ಮೀ ದೇವಸ್ಥಾನದಲ್ಲಿ ನಡೆದ ಕೊರೊನಾ ವಾರಿಯರ್ಸ್ ಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾತನಾಡಿದ ಅವರು, ಈ ಯೋಜನೆ ಬಗ್ಗೆ ಬಹಳಷ್ಟು ಜನರು ತಪ್ಪು ತಿಳುವಳಿಕೆ ಹೊಂದಿದ್ದಾರೆ. ಹಜ್ ಮತ್ತು ವಕ್ಫ್ ಇಲಾಖೆಯಲ್ಲಿ 2009 ರಲ್ಲಿಯೇ ಈ ಕುರಿತು ಆದೇಶ ಜಾರಿಯಾಗಿದೆ. ಇದನ್ನು ನಾನು ಹೊಸದಾಗಿ ಹೇಳಿಲ್ಲ. ಮುಸ್ಲಿಂ ಮಹಿ;ಳೆಯರು ಮಾರಣಾಂತಿಕ ಖಾಯಿಲೆಯಿಂದ ಬಳಲುತ್ತಿದ್ದರೆ ಅವರಿಗೆ ರೂ. 1 ಲಕ್ಷ ಸಹಾಯ ಧನ ನೀಡಲು ಅಂದು ತೀರ್ಮಾನಿಸಲಾಗಿತ್ತು. ಅದು ಇಲ್ಲಿವರೆಗೂ ಯಾರಿಗೂ ಗೊತ್ತಿರಲಿಲ್ಲ. ನಾನು ಇಲಾಖೆ ಜವಾಬ್ದಾರಿ ವಹಿಸಿಕೊಂಡ ಬಳಿಕ ನನ್ನ ಇಲಾಖೆ ಬಗ್ಗೆ ಮಾಹಿತಿ ನೀಡುವಾಗ ಅದರ ಬಗ್ಗೆ ಹೇಳಿದ್ದೇನೆ. ನಾನು ಕೇವಲ ಆ ಯೋಜನೆ ಬಗ್ಗೆ ಜನರಿಗೆ ಮಾಹಿತಿ ನೀಡಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದರು.
ಅದು ನಾನು ಘೋಷಣೆ ಮಾಡಿದ ಯೋಜನೆ ಅಲ್ಲ. ಹಿಂದಿನ ಯೋಜನೆ ಇದೆ ಎಂದು ಹೇಳಿದ್ದೇನೆ. ನಮಗೆ ಮುಸ್ಲಿಂ ಅಥವಾ ಹಿಂದೂ ಎನ್ನುವ ಭೇದಭಾವ ಇಲ್ಲ. ಸಿಎಂ ಪರಿಹಾರ ನಿಧಿ ಹಾಗೂ ಪ್ರಧಾನ ಮಂತ್ರಿ ಪರಿಹಾರ ನಿಧಿಯಿಂದ ಎಲ್ಲರಿಗೂ ಪರಿಹಾರ ನೀಡಲಾಗುತ್ತಿದೆ. ಹಿಂದೂ ಹೆಣ್ಣು ಮಕ್ಕಳಿಗೂ ಹಲವು ಯೋಜನೆಗಳ ಮೂಲಕ ಮಾರಕ ಕಾಯಿಲೆಗಳಿಗೆ ಸಹಾಯ ಧನ ನೀಡಲಾಗುತ್ತದೆ ಎಂದು ಶಶಿಕಲಾ ಜೊಲ್ಲೆ ಸ್ಪಷ್ಟಪಡಿಸಿದರು.
ಈ ಯೋಜನೆಯನ್ನು ಕೇವಲ ಮುಸ್ಲಿಮರಿಗೆ ಮಾತ್ರವಲ್ಲ, ಇತರರಿಗೂ ವಿಸ್ತರಿಸುವಂತೆ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಇತ್ತೀಚೆಗೆ ಮುಖ್ಯಮಂತ್ರಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಿಗೆ ಪತ್ರ ಬರೆದು ಒತ್ತಾಯಿಸಿದ್ದರು.
ಈ ಹಿನ್ನೆಲೆಯಲ್ಲಿ ಕೇಳಲಾದ ಪ್ಸಶ್ನೆಗೆ ಸಚಿವೆ ಶಶಿಕಲಾ ಜೊಲ್ಲೆ ಈ ಸ್ಪಷ್ಟನೆ ನೀಡಿದರು.