ದಾವಣಗೆರೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಡಳಿತದಲ್ಲಿ, ಸಾರ್ವಜನಿಕ ಜೀವನದಲ್ಲಿ ಅಪಾರ ಅನುಭವ ಹೊಂದಿದ್ದು, ಅವರ ನೇತೃತ್ವದಲ್ಲಿ ಬಿಜೆಪಿ ಮತ್ತೊಮ್ಮೆ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂಬ ಸಂಪೂರ್ಣ ವಿಶ್ವಾಸವಿದೆ ತಮಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ತಿಳಿಸಿದ್ದಾರೆ.
ದಾವಣಗೆರೆಯ ಜಿಎಂಐಟಿ ಆವರಣದಲ್ಲಿ ನಾನಾ ಯೋಜನೆಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಇತ್ತೀಚೆಗೆ ಕರ್ನಾಟಕದ ನೇತೃತ್ವವನ್ನು ಬೇರೆಯವರಿಗೆ ವಹಿಸುವ ಕುರಿತು ಯಡಿಯೂರಪ್ಪಜೀ ಅವರು ಸ್ವತಃ ತೀರ್ಮಾನ ಕೈಗೊಂಡರು. ಬಿಜೆಪಿಯು ಬಸವರಾಜ ಬೊಮ್ಮಾಯಿ ಅವರಿಗೆ ನೂತನ ಮುಖ್ಯಮಂತ್ರಿಯ ಜವಾಬ್ದಾರಿ ವಹಿಸಲು ನಿರ್ಣಯಿಸಲಾಯಿತು. ಅದರಂತೆ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾರೆ ಎಂದು ಅವರು ತಿಳಿಸಿದರು.
ಯಡಿಯೂರಪ್ಪ ಅವರು ತಮ್ಮ ಎರಡೂ ಅವಧಿಯಲ್ಲಿ ಕರ್ನಾಟಕದ ಅಭಿವೃದ್ಧಿಗೆ ವಿಶೇಷವಾಗಿ ರೈತರ ಮತ್ತು ಹಳ್ಳಿಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಕರ್ನಾಟಕದಲ್ಲಿ ವಿಕಾಸ ಯುಗ ಪ್ರಾರಂಭವಾಗಿದ್ದು ಬಿಜೆಪಿ ಮತ್ತು ಯಡಿಯೂರಪ್ಪನವರ ಅವಧಿಯಲ್ಲಿ ಎಂದು ಅವರು ಅಭಿಪ್ರಾಯಪಟ್ಟರು.
ಬೊಮ್ಮಾಯಿ ಅವರು ಹಲವು ಮಹತ್ವಪೂರ್ಣ ಹೊಸ ಉಪಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಪೊಲೀಸರ ಗೌರವ ವಂದನೆ, ಹೂಗುಚ್ಛ ಸೇರಿ ಹಲವು ವಿವಿಐಪಿ ಸಂಸ್ಕೃತಿಗೆ ತಿಲಾಂಜಲಿ ಹಾಡಿದ್ದಾರೆ. ಪಾರದರ್ಶಕತೆ ತರಲು ಹಲವು ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಅಲ್ಪಾವಧಿಯಲ್ಲಿಯೇ ದೆಹಲಿಯಲ್ಲಿ ಕರ್ನಾಟಕ ಸರಕಾರವನ್ನು ಸೂಕ್ಷ್ಮವಾಗಿ ಗಮನಿಸುವವರು, ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದರಿಂದ ಬಿಜೆಪಿ ಮತ್ತಷ್ಟು ಬಲವರ್ಧನೆ ಮಾಡಿಕೊಳ್ಳಲಿದೆ ಎಂದು ಅಭಿಪ್ರಾಯ ಪಡುತ್ತಿದ್ದಾರೆ ಎಂದು ಅಮಿತ ಶಾ ಮೆಚ್ಚುಗೆ ವ್ಯಕ್ತಪಡಿಸಿದರು.