ವಿಜಯಪುರ: ನನಗೆ ಜನ್ಮಕೊಟ್ಟಂಥ ಪುಣ್ಣಭೂಮಿಯ ಋಣವನ್ನು ತೀರಿಸುವ ಕೆಲಸವನ್ನು ಮಾಡುತ್ತೇನೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ವಿಜಯಪುರ ಜಿಲ್ಲೆಯ ಬುರಣಾಪುರ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯಪುರ ನನ್ನ ಜನ್ಮಭೂಮಿ. ನಾನು ಯಾವುದೇ ಇಲಾಖೆಯಲ್ಲಿರಲಿ ಜನ್ಮ ನೀಡಿದ ಪುಣ್ಯ ಭೂಮಿಯ ಋಣ ತೀರಿಸುವ ಕೆಲಸ ಮಾಡುತ್ತೇನೆ. ಇಲ್ಲಿ ನಿರ್ಮಿಸಲಾಗುತ್ತಿರುವ ವಿಮಾನ ನಿಲ್ದಾಣ ಕಾಮಗಾರಿಯನ್ನು ಯಾವುದೇ ಲಾಭ ಅಥವಾ ನಷ್ಟದ ದೃಷ್ಠಿ ಇಟ್ಟುಕೊಂಡು ನೋಡುವುದಿಲ್ಲ. ವಿಜಯಪುರ ಐತಿಹಾಸಿಕ ನಗರ. ಇಲ್ಲಿ ಎಲ್ಲ ಸೌಲಭ್ಯಗಳು ಇರಬೇಕು ಎಂಬ ದೃಷ್ಠಿಯಿಂದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿರುವುದಾಗಿ ತಿಳಿಸಿದರು.
ಐತಿಹಾಸಿಕ ವಿಜಯಪುರ ವಿಮಾನ ನಿಲ್ದಾಣಕ್ಕೆ 320 ಏರ್ ಬಸ್ ಬರುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಸಿಎಂ ಕೂಡ ಈ ಮನವಿಗೆ ಒಪ್ಪಿಗೆ ನೀಡಿದ್ದಾರೆ. ಈ ಕುರಿತು ಯೋಜನೆಯನ್ನೂ ಕೂಡ ರೂಪಿಸಲು ಸರಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಈ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ 1976 ರಿಂದ ಪದೇ ಪದೇ ಸರ್ವೆ ಕಾರ್ಯ ಮಾತ್ರ ನಡೆಸಲಾಗುತ್ತಿತ್ತು. ನಂತರ 2008 ರಿಂದ 2013ರ ಅವಧಿಯಲ್ಲಿ ನಮ್ಮದೇ ಸರಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ತಾವೇ ಉಸ್ತುವಾರಿ ಸಚಿವರಾಗಿ 727 ಎಕರೆ ಜಮೀನಿನಲ್ಲಿ ಈ ವಿಮಾನ ನಿಲ್ದಾಣ ಕಾಮಗಾರಿಗೆ ಅಡಿಗಲ್ಲು ನೆರವೇರಿಸಲಾಗಿತ್ತು ಎಂದು ಅವರು ತಿಳಿಸಿದರು.
ಈಗ ಮತ್ತೆ ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ ಕಾಮಗಾರಿಯನ್ನು ಕೈಗೊಂಡು ರೂ. 220 ಕೋ. ವೆಚ್ಚದಲ್ಲಿ ATR 72 ವಿಮಾನ, ಚಿಕ್ಕ ವಿಮಾನ ಇಳಿಯಲು ಯೋಜನೆಗೆ ಅನುಮೋದನೆ ನೀಡಲಾಯಿತು ಎಂದು ಅವರು ತಿಳಿಸಿದರು.
ಈ ಕಾಮಗಾರಿಯ ವೆಚ್ಚವನ್ನು ರೂ. 323 ಕೋ. ಗೆ ಹೆಚ್ಚಿಸಲಾಗಿದೆ. ಈಗಾಗಲೇ ಮೊದಲನೇ ಹಂತದಲ್ಲಿ ರೂ. 95 ಕೋ. ವೆಚ್ಚದಲ್ಲಿ ವಿಮಾನದ ರನ್ ವೇ ಮತ್ತು ರಸ್ತೆಗಳ ಕಾಮಗಾರಿಗಳಿಗೆ ಖರ್ಚು ಮಾಡಲಾಗಿದೆ. ಶೇ. 80ರಷ್ಟು ಮೊದಲನೇ ಹಂತದ ಕಾಮಗಾರಿ ಪೂರ್ಣಗೊಂಡಿದೆ. ಇನ್ನು ಎರಡನೇ ಹಂತದ ಕಾಮಗಾರಿಗೆ ರೂ. 125 ಕೋ. ಗೆ ಟೆಂಡರ್ ಕರೆಯಲಾಗುವುದು. ನಾವೇ ವಿಮಾನ ನಿಲ್ದಾಣ ಉದ್ಘಾಟನೆ ಮಾಡಬೇಕು ಎಂಬ ಯೋಚನೆ ಮಾಡಿರುವುದಾಗಿ ಗೋವಿಂದ ಕಾರಜೋಳ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪಿ, ಸುನಿಲ ಕುಮಾರ, ಎಸ್ಪಿ ಎಚ್. ಡಿ. ಆನಂದ ಕುಮಾರ, ಲೋಕೋಪಯೋಗಿ ಇಲಾಖೆ ಕಾರ್ಯ ನಿರ್ವಾಹಕ ಅಭಿಯಂತರ ಅರುಣ ಕುಮಾರ, ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ರಾಜು ಮುಜುಂದಾರ, ಜಿ. ಪಂ. ಬಿಜೆಪಿ ಮಾಜಿ ಸದಸ್ಯ ನವೀನ ಅರಕೇರಿ, ರಾಜು ಗಚ್ಚಿನಮಠ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.