ವಿಜಯಪುರ: ಹಾಲುಮತ ಸಮಾಜ ಮೀಸಲಾತಿ ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಈಗಾಗಲೇ ಸ್ವಾಮೀಜಿಗಳ ನೇತೃತ್ವದಲ್ಲಿ ಹೋರಾಟ ನಡೆಸಿದೆ. ಈಗ ತಮ್ಮ ತಂದೆ ಕೆ. ಎಸ್. ಈಶ್ವರಪ್ಪ ಸಚಿವರಾಗಿದ್ದು, ಸರಕಾರದ ಬಾಕಿ ಇರುವ ಒಂದೂವರೆ ವರ್ಷದ ಅವಧಿಯಲ್ಲಿ ಸಾಧ್ಯವಾದಷ್ಟು ಬೇಡಿಕೆಗಳನ್ನು ಈಡೇರಿಸಲು ಶ್ರಮಿಸುವುದಾಗಿ ಸಚಿವ ಕೆ. ಎಸ್. ಈಶ್ವರಪ್ಪ ಅವರ ಪುತ್ರ ಕೆ. ಈ. ಕಾಂತೇಶ ಭರವಸೆ ನೀಡಿದ್ದಾರೆ.
ವಿಜಯಪುರ ಜಿಲ್ಲೆಯ ಜಿಲ್ಲೆಯ ಮುಮ್ಮಟ್ಟಿಗುಡ್ಡಕ್ಕೆ ಭೇಟಿ ನೀಡಿದ ಅವರು, ಮುಮ್ಮೆಟ್ಟಿಗುಡ್ಡದ ಸುಕ್ಷೇತ್ತ ಶ್ರೀ ಅಮೋಘಸಿದ್ಧ ದೇವಾಲಯಕ್ಕೆ ಭೇಟಿ ನೀಡಿದರು. ನಂತರ ನಡೆದ ಹಾಲುಮತದ ಪೂಜ್ಯರು, ಒಡೆಯರು ಮತ್ತು ಗುರುಗಳಿಗೆ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೋಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಾವು ಹಾಗೂ ತಮ್ಮ ತಂದೆ ಈ ಹಿಂದೆ ನಡೆಸಿದ ಮೀಸಲಾತಿ ಹೋರಾಟದ ಸಂದರ್ಭದಲ್ಲಿ ಹಾಲುಮತ ಸಮಾಜದ ಎಲ್ಲರೂ ಅಭೂತಪೂರ್ವ ಬೆಂಬಲ ನೀಡಿದ್ದೀರಿ. ಅಂದಿನಿಂದ ಇಂದಿನವರೆಗೆ ಇಡೀ ನಾಡಿನಲ್ಲಿರುವ ಹಾಲುಮತ ಸಮಾಜದ ಮುಖಂಡರ ಪರಿಚಯ ತಮಗಾಗಿದೆ ಎಂದು ತಿಳಿಸಿದರು.
ಕುರುಬರಿಗೆ ಎಸ್ಟಿ ಮೀಸಲಾತಿ ಸೇರಿದಂತೆ ನಾನಾ ಸೌಲಭ್ಯಗಳ ಕುರಿತು ಈಗಾಗಲೇ ಹೋರಾಟ ನಡೆಸಲಾಗಿದೆ. ತಮ್ಮ ತಂದೆ ಕೆ. ಎಸ್. ಈಶ್ವರಪ್ಪ ಇನ್ನೂ ಒಂದೂವರೆ ವರ್ಷ ಸಚಿವರಾಗಿ ಇರಲಿದ್ದಾರೆ. ಈ ಅವಧಿಯಲ್ಲಿ ಸಾಧ್ಯವಾದಷ್ಟು ಹಾಲುಮತ ಸಮಾಜ ಮಂಡಿಸಿರುವ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸುತ್ತಾರೆ. ತಾವೂ ಕೂಡ ಈ ನಿಟ್ಟಿನಲ್ಲಿ ಪ್ರಯತ್ನ ಮಾಡುವುದಾಗಿ ಕೆ. ಈ. ಕಾಂತೇಶ ತಿಳಿಸಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡ ವಿರೂಪಾಕ್ಷಪ್ಪ ಸೇರಿದಂತೆ ನಾನಾ ಸ್ವಾಮೀಜಿಗಳು ಉಪಸ್ಥಿತರಿದ್ದರು.