ವಿಜಯಪುರ: ಅವರೆಲ್ಲ ರಾತ್ರಿವೇಳೆ ನಿಶ್ಚಿಂತೆಯಿಂದ ಮಲಗುತ್ತಿದ್ದರು. ಆದರೆ, ಆ ಒಂದು ಘಟನೆ ಅವರು ಮನೆಯಿಂದ ಹೊರಗೆ ಓಡಿ ಬರುವಂತೆ ಮಾಡಿದೆ. ಆಗ ಎಲ್ಲರೂ ಒಬ್ಬರ ಮುಖವನ್ನೊಬ್ಬರು ನೋಡಿ ತಂತಮ್ಮ ಆತಂಕದ ಕ್ಷಣಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡಿದ್ದಾರೆ.
ಅಷ್ಟೇ ಅಲ್ಲ, ರಾತ್ರಿಯಿಡೀ ಮನೆಯ ಹೊರಗಡೆಯೇ ಜಾಗರಣೆ ಮಾಡಿ ಆತಂಕದಲ್ಲಿಯೇ ಕಾಲ ಕಳೆದಿದ್ದಾರೆ.
ಅಂದಹಾಗೆ, ಈ ಘಟನೆ ನಡೆದಿದ್ದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಹುಣಶ್ಯಾಳ ಪಿಬಿ, ಕರಭಂಟನಾಳ ಹಾಗೂ ಇತರ ಗ್ರಾಮಗಳಲ್ಲಿ. ಎಂದಿನಂತೆ ಇವರು ರಾತ್ರಿವೇಳೆ ಆರಾಮಾಗಿ ಮಲಗಿದ್ದಾಗ ಏಕಾಏಕಿ ಭೂಮಿಯೊಳಗಿನಿಂದ ಭಾರಿ ಶಬ್ದ ಕೇಳಿಸಿದೆ. ಭೂಮಿ ಕಂಪಿಸಿದ ಅನುಭವವೂ ಆಗಿದೆ. ಇದರಿಂದ ಗಾಬರಿಯಾದ ಗ್ರಾಮಸ್ಥರು ಎದ್ದೊನೋ, ಬಿದ್ದಿನೋ ಎಂದು ಹೌಹಾರಿ ಮನೆಯಿಂದ ಹೊರಗೋಡಿ ಬಂದಿದ್ದಾರೆ.
ಭೂಕಂಪ ಆಗಿದೆ ಎಂದು ಕೆಲವರು ಹೇಳಿದ್ದಾರೆ. ಭೂಮಿಯಿಂದ ಶಬ್ದ ಬಂದಾಗ ಮಲಗಿದ ನೆಲ ನಡುಗಿದ ಅನುಭಯ್ತು ಎಂದು ಜನರು ತಾವು ಎದುರಿಸಿದ ಆತಂಕಕದ ಕ್ಷಣಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಈ ಭಾರಿ ಶಬ್ದ ಮತ್ತು ಭೂಮಿ ಕಂಪಿಸಿದ ಅನುಭವ ಉಂಟಾಗಲು ಏನು ಕಾರಣ ಎಂಬುದರ ಕುರಿತು ಈವರೆಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಅಧಿಕಾರಿಗಳೂ ಈವರೆಗೆ ಇತ್ತ ಸುಳಿಯಸಿರುವುದು ಗ್ರಾಮಸ್ಥರನ್ನು ಮತ್ತಷ್ಟು ಆತಂಕಕ್ಕೆ ತಳ್ಳುವಂತೆ ಮಾಡಿದೆ.