ರಸ್ತೆ ಸಾರಿಗೆ ನಿಗಮಗಳನ್ನು ಲಾಭದಾಯಕವಾಗಿಸಲು ಪರಿಣತರ ಸಮಿತಿ ರಚನೆ- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವನ್ನು ಲಾಭದಾಯಕವಾಗಿಸಲು ಕೈಗೊಳ್ಳಬೇಕಾದ ಸುಧಾರಣೆ ಕ್ರಮಗಳ ಕುರಿತು ಪರಿಶೀಲಿಸಲು ಪರಿಣತರ ಸಮಿತಿಯನ್ನು ರಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ 60ನೇ ವರ್ಷದ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.

ಇಂದು ನಿಗಮವು ಸಂಕಷ್ಟದಲ್ಲಿದೆ. ಆದರೆ ಸಮಸ್ಯೆಯನ್ನು ಬೆಳೆಯಲು ಬಿಡದೆ ನಾವು ಪರಿಹಾರ ಕಂಡುಕೊಳ್ಳಬೇಕಾಗಿದೆ. ಆದಾಯೋತ್ಪನ್ನ ಮಾದರಿಯಿದ್ದರೂ, ನಿಗಮ ನಷ್ಟದಲ್ಲಿರಲು ಕಾರಣಗಳನ್ನು ವಿಶ್ಲೇಷಿಸುವುದರೊಂದಿಗೆ, ನಿಗಮವನ್ನು ಲಾಭದಾಯಕವಾಗಿಸಲು ಸಲಹೆ ಸೂಚನೆಗಳನ್ನು ನೀಡಲು ಈ ಸಮಿತಿ ರಚಿಸಲಾಗುವುದು. ಕೆ.ಎಸ್.ಆರ್.ಟಿ.ಸಿ. ಗೆ ಅದರದೇ ಅಂತರ್ಗತವಾದ ಶಕ್ತಿ ಇದೆ. ವಿಸ್ತಾರವಿದೆ. ಜಾಲವಿದೆ. ಇವುಗಳನ್ನು ಹೇಗೆ ಹೆಚ್ಚಿಸುವುದು ಎಂಬ ಕುರಿತು ಸಹ ಚಿಂತನೆ ನಡೆಸಲಾಗುವುದು ಎಂದು ಸಿಎಂ ತಿಳಿಸಿದರು.

ಕೋವಿಡ್- 19ರ ಸಂಕಷ್ಟದ ಸಮಯದಲ್ಲಿ ನೌಕರರ ವೇತನ ಸೇರಿದಂತೆ, ನಿಗಮಕ್ಕೆ ಬೆಂಬಲ ನೀಡಲು ರಾಜ್ಯ ಸರಕಾರ ರೂ. 2300 ಕೋ. ಬಿಡುಗಡೆ ಮಾಡಿದೆ. ತಾವು ಮುಖ್ಯಮಂತ್ರಿಯಾದ ನಂತರವೂ ರೂ. 108 ಕೋ. ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಮುಂಬರುವ ದಿನಗಳಲ್ಲಿ ನಿಗಮದ ಆದಾಯ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕಾಗಿದೆ. ಇದಕ್ಕೆ ಚಿಂತನೆ, ಕಾರ್ಯ ವಿಧಾನಗಳಲ್ಲಿ ಬದಲಾವಣೆ ಅಗತ್ಯ. ಜೊತೆಗೆ ಕ್ಷಮತೆಯಿಂದ ನಿಗಮವನ್ನು ಮುನ್ನಡೆಸಲು ಸರಕಾರ ಬದ್ಧವಾಗಿದೆ ಎಂದು ಸಿಎಂ ತಿಳಿಸಿದರು.

ನಿಗಮದ ಸುಧಾರಣೆಯೊಂದಿಗೆ ನೌಕರರ ಜೀವನಮಟ್ಟ ಸುಧಾರಣೆಗೂ ಆದ್ಯತೆ ನೀಡಲಾಗುವುದು. ಕೆ.ಎಸ್.ಆರ್.ಟಿ.ಸಿ.ಯೊಂದಿಗೆ ಜನತೆ ಭಾವನಾತ್ಮಕ ಬಾಂಧವ್ಯ ಬೆಸೆದಿದ್ದಾರೆ. ಬಸ್ ಎಂದರೆ ಹಲವು ಅರ್ಥಗಳನ್ನು ಧ್ವನಿಸುತ್ತದೆ.‌‌ ಪ್ರಯಾಣ, ಜೀವನದ ಪ್ರಯಾಣ, ಎಲ್ಲರಿಗೂ ಸ್ಥಳಾವಕಾಶ ಒದಗಿಸುವ ಸಮಾನತೆಯ ಪರಿಕಲ್ಪನೆ, ನಿರಂತರ ಚಾಲನೆ ಶಕ್ತಿ ಮೊದಲಾದ ವಿಚಾರಗಳು ನಮ್ಮಲ್ಲಿ ಸುಳಿಯುತ್ತದೆ. ಸರಕಾರದಲ್ಲಿ ನಿರಂತರ ಚಲನಶೀಲತೆ ಹೊಂದಿರುವ ಇಲಾಖೆ ಸಾರಿಗೆ ಇಲಾಖೆ ಎಂದು ಮುಖ್ಯಮಂತ್ರಿಗಳು ಬಣ್ಣಿಸಿದರು.

ಬಸ್ ಚಾಲಕರು ಅತ್ಯಂತ ಜವಾಬ್ದಾರಿಯ ಕೆಲಸ ನಿರ್ವಹಿಸುತ್ತಾರೆ. ಪ್ರಯಾಣದ ಅವಧಿಯಲ್ಲಿ ನಮ್ಮ ಜೀವ ಅವರ ಕೈಯಲಿರುತ್ತದೆ. ಆದ್ದರಿಂದ ಚಾಲಕರಿಗೆ ಮೊದಲ ಗೌರವ ಸಲ್ಲಿಸುವುದಾಗಿ ಅವರು ತಿಳಿಸಿದರು.

ವಿಶ್ವಾದ್ಯಂತ ಸಾರಿಗೆ ವ್ಯವಸ್ಥೆಯಲ್ಲಿ ಎಷ್ಟೇ ಬದಲಾವಣೆಗಳಾದರೂ, ಬಸ್ ಸೇವೆ ನಿರಂತರವಾಗಿ ತನ್ನ ಅಸ್ತಿತ್ವ ಉಳಿಸಿಕೊಂಡಿದೆ. ಹಳ್ಳಿಗಳಲ್ಲಿ ಬಸ್ ಬಂದರೆ ಚಟುವಟಿಕೆ ಪ್ರಾರಂಭವಾಗುತ್ತದೆ. ಈ ಎಲ್ಲ ಕಾರಣಗಳಿಗಾಗಿ ನಿಗಮ ಅದರದೇ ಆದ ಗೌರವವನ್ನು ಹೊಂದಿದೆ ಎಂದು ಅವರು ಅಭಿಪ್ರಾಯಪಟ್ಟರು.

ಬದಲಾಗುತ್ತಿರುವ ತಂತ್ರಜ್ಞಾನದೊಂದಿಗೆ ಹೊಂದಿಕೊಳ್ಳುವ ಜೊತೆಗೆ ಪರಿಸರ ಸ್ನೇಹಿ ವಾಹನಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಬಿಎಂಟಿಸಿಯು 90 ವಿದ್ಯುತ್ ಚಾಲಿತ ಬಸ್ ಗಳನ್ನು ಖರೀದಿಸುತ್ತಿದೆ. ಅಲ್ಲದೇ, ಕೆ.ಎಸ್.ಆರ್.ಟಿ.ಸಿಯು 642 ಹೊಸ ಬಸ್ ಗಳನ್ನು ಖರೀದಿಸುತ್ತಿದೆ ಎಂದು ಸಿಎಂ ತಿಳಿಸಿದರು.

ಕೆ.ಎಸ್. ಆರ್. ಟಿ.ಸಿ. ಕಾರ್ಯಾಗಾರಗಳಲ್ಲಿ ಬಳಕೆಯಾಗುತ್ತಿರುವ ತಂತ್ರಜ್ಞಾನಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, ಈ ತಂತ್ರಜ್ಞಾನಗಳು ಪೂರ್ಣಪ್ರಮಾಣದಲ್ಲಿ ಬಳಕೆಯಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದರು.

ಸಮಾರಂಭದಲ್ಲಿ ನಾಲ್ಕೂ ನಿಗಮಗಳ ಅಪಘಾತ ರಹಿತ ಚಾಲನೆ ಮಾಡಿದ 60 ಚಾಲಕರಿಗೆ ಚಿನ್ನದ ಪದಕ ಪ್ರದಾನ ಮಾಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ 60ನೇ ವರ್ಷದ ಸವಿ ನೆನಪಿಗೆ ಅಂಚೆ ಲಕೋಟೆ ಬಿಡುಗಡೆ ಹಾಗೂ ಕೆಂಪೇಗೌಡ ಬಸ್ ನಿಲ್ದಾಣ 60 ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.

ಇದರೊಂದಿಗೆ ನೌಕರರು ಮತ್ತು ಕುಟುಂಬದವರ ಅನುಕೂಲಕ್ಕಾಗಿ ಇನ್ಫೋಸಿಸ್ ಸಹಯೋಗದೊಂದಿಗೆ ಡಿಜಿಟಲ್ ಲರ್ನಿಂಗ್ ಕಾರ್ಯಕ್ರಮ ಹಾಗೂ ಆನ್ ಲೈನ್ ನಲ್ಲಿ ನೌಕರರ ಕುಂದುಕೊರತೆ ನಿವಾರಣೆ ವ್ಯವಸ್ಥೆಗೆ ಚಾಲನೆ ನೀಡಲಾಯಿತು.

ಈ ಸಮಾರಂಭದಲ್ಲಿ ಸಚಿವರಾದ ಬಿ. ಶ್ರೀರಾಮುಲು, ಕೋಟ ಶ್ರೀನಿವಾಸ ಪೂಜಾರಿ, ಬಿ. ಸಿ. ನಾಗೇಶ್, ಆನಂದ್ ಸಿಂಗ್, ಕೆ.ಎಸ್.ಆರ್.ಟಿ.ಸಿ. ಅಧ್ಯಕ್ಷ ಎಂ.ಚಂದ್ರಪ್ಪ, ಶಾಸಕ ರಿಜ್ವಾನ್ ಅರ್ಷದ್, ಕರ್ನಾಟಕದ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಶಾರದಾ ಸಂಪತ್, ಸಾರಿಗೆ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಮತ್ತಿತರರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌