ವಿಜಯಪುರ: ಪದ್ಮಶ್ರೀ ಕಾಕಾ ಕಾರ್ಖಾನಿಸ್ ಪ್ರೌಢಶಾಲೆ ನಿರ್ಮಿಸುವ ಕಾರ್ಯವನ್ನು ಆರು ತಿಂಗಳಲ್ಲಿ ಪೂರ್ಣಗೊಳಿಸಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಎಲ್ಲ ಚಟುವಟಿಕೆಗಳು ಪ್ರಾರಂಭವಾಗುವಂತೆ ನೋಡಿಕೊಳ್ಳಬೇಕು ಎಂದು ಜಲಸಂಪನ್ಮೂುಲ ಸಚಿವ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ನೀಡಿದ್ದಾರೆ.
ವಿಜಯಪುರ ನಗರದಲ್ಲಿರುವ ಪದ್ಮಶ್ರೀ ಕಾಕಾ ಕಾರ್ ಖಾನಿಸ್ ಪ್ರೌಢಶಾಲೆ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡಿದ ಅವರು, 2020-21ನೇ ವರ್ಷದಲ್ಲಿ ಪರಿಶಿಷ್ಟ ಜಾತಿ ಉಪಯೋಜನೆಯ ಅಡಿಯಲ್ಲಿ ರೂ. 10 ಕೋ. ಮಂಜೂರಾಗಿದ್ದು, ಈ ಅನುದಾನದಲ್ಲಿ ಪ್ರೌಢಶಾಲೆಯ ವಿಜ್ಞಾನ ಪ್ರಯೋಗಾಲಯ, ವಾಚನಾಲಯ, ದೈಹಿಕ ಶಿಕ್ಷಣ ವಿಭಾಗದ ಕೊಠಡಿ ಹಾಗೂ ಶೌಚಾಲಯ ನಿರ್ಮಾಣ ಕಾಮಗಾರಿಯನ್ನು ಗುಣಮಟ್ಟದಿಂದ ಹಾಗೂ ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
1933ರಲ್ಲಿ ಗಾಂಧೀಜಿಯವರಿಂದ ಪ್ರೇರಣೆ ಪಡೆದು ಕಾಕಾ ಕಾರ್ಖಾನೀಸ ಅವರು ಹರಿಜನ ಕನ್ಯಾ ಮಂದಿರ ಮತ್ತು ಹರಿಜನ ಗಂಡು ಮಕ್ಕಳ ಹಾಸ್ಟೆಲ್ ಪ್ರಾರಂಭ ಮಾಡಿ 236 ಮಕ್ಕಳನ್ನು ಓದಿಸಿ ಕರ್ನಾಟಕದ ಗಾಂಧಿ ಎನಿಸಿಕೊಂಡಿದ್ದಾರೆ. ದೀನ ದಲಿತರ ಉದ್ಧಾರಕ್ಕಾಗಿ ಅವರ ಜೀವನವನ್ನೇ ಮುಡುಪಾಗಿಟ್ಟವರು ಅವರು ಎಂದು ಅವರು ತಿಳಿಸಿದರು.
ಡಾ. ಸುಧಾಮೂರ್ತಿ ಮತ್ತು ಡಾ. ನಾರಾಯಣಮೂರ್ತಿ ಅವರನ್ನು ಕಾಕಾ ಕಾರ್ಖಾನಿಸ್ ಪ್ರೌಢಶಾಲೆ ಕಟ್ಟಡ ಕಾಮಗಾರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಕರೆತರುವ ಆಶಯ ತಮ್ಮದಾಗಿದೆ ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಈ ಕಟ್ಟಡವು 2020-21ನೇ ವರ್ಷದಲ್ಲಿ 5054-ಎಸ್ ಸಿ ಪಿ ಅಡಿಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ರೂ. 10 ಕೋ. ವೆಚ್ಚದಲ್ಲಿ ಈ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು. ನಿಗದಿತ ಅವಧಿಯೊಳಗೆ ಗುಣಮಟ್ಟದ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ, ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ, ಎಸ್ಪಿ ಎಚ್. ಡಿ. ಆನಂದ ಕುಮಾರ, ಹಿರಿಯ ಪತ್ರಕರ್ತ ಗೋಪಾಲ ನಾಯಕ, ಮುಖಂಡರಾದ ಅಡಿವೆಪ್ಪ ಸಾಲಗಲ, ಸಿದ್ದು ರಾಯಣ್ಣವರ, ರಮೇಶ ಆಸಂಗಿ, ಶಂಕರ, ಭೀರಪ್ಪ ಅರ್ಧಾವೂರ ಮತ್ತು ಇತರರು ಉಪಸ್ಥಿತರಿದ್ದರು.