ಬಸವ ನಾಡಿನಲ್ಲಿ ಸೆ.6 ರಿಂದ ರಾಷ್ಟ್ರೀಯ ಕಂದುರೋಗ ನಿಯಂತ್ರಣ ಲಸಿಕಾ ಕಾರ್ಯಕ್ರಮ

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಸೆ. 6 ರಿಂದ ರಾಷ್ಟ್ರೀಯ ಕಂದುರೋಗ ನಿಯಂತ್ರಣ ಲಸಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಮತ್ತು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ. ಪ್ರಾಣೇಶ ಜಹಾಗೀರದಾರ ತಿಳಿಸಿದ್ದಾರೆ.

ಈ ಕಂದುರೋಗ ಜಾನುವಾರುಗಳಿಗೆ ಮಾರಕವಾಗಿದ್ದು, ಸಾಂಸರ್ಗಿಕ ರೋಗವಾಗಿದೆ. ಈ ರೋಗವು ಹಸು, ಎಮ್ಮೆ,, ಕುರಿ, ಮೇಕೆ, ಹಂದಿ, ನಾಯಿ, ಒಂಟೆ ಮತ್ತು ಕುದುರೆ ಮುಂತಾದ ಪ್ರಾಣಿಗಳಲ್ಲಿ ಕಂಡು ಬರುತ್ತದೆ. ರೋಗ ಪೀಡಿತ ಜಾನುವಾರುಗಳ ಸಂಪರ್ಕದಿಂದ ಮನುಷ್ಯರಿಗೂ ಕೂಡಾ ಈ ರೋಗ ತಗಲುವ ಸಾಧ್ಯತೆಯಿದೆ. ಈ ರೋಗದಿಂದ ಜಾನುವಾರುಗಳಲ್ಲಿ ಗರ್ಭಧಾರಣೆ ಸಮಸ್ಯೆ, ಗರ್ಭಪಾತ, ಬಂಜೆತನ ಮುಂತಾದ ಸಮಸ್ಯೆಗಳು ಉಂಟಾಗುತ್ತವೆ. ರೋಗಗ್ರಸ್ತ ಜಾನುವಾರುಗಳ ಪ್ಯಾಸ್ಟೀಕರಿಸಿದ ಹಾಲು ಮತ್ತು ಹಾಲಿನ ಉತ್ಪನ್ನಗಳ ಸೇವನೆಯಿಂದ ಮಾನವನಿಗೂ ಈ ರೋಗವು ಹರಡುವ ಸಾಧ್ಯತೆ ಇರುತ್ತದೆ ಎಂದು ಪ್ರಾಣೇಶ ಜಹಾಗೀರದಾರ ಈ ಸಂದರ್ಭದಲ್ಲಿ ತಿಳಿಸಿದರು.

ಈ ಹಿನ್ನೆಲೆಯಲ್ಲಿ 4 ರಿಂದ 6 ತಿಂಗಳೊಳಗಿನ ಎಲ್ಲ ಕರುಗಳಿಗೆ ಜೀವನದಲ್ಲಿ ಒಂದು ಬಾರಿ ಈ ಲಸಿಕೆ ಹಾಕುವ ಮೂಲಕ ಈ ರೋಗವನ್ನು ತಡೆಗಟ್ಟಬಹುದಾಗಿದೆ. ಜಿಲ್ಲೆಯಲ್ಲಿ ಈ ವಯೋಮಾನದ ಒಟ್ಟು 33080 ಕರುಗಳಿರುವ ಅಂದಾಜಿದೆ. ಈ ಎಲ್ಲ ಕರುಗಳಿಗೆ 3 ಹಂತಗಳಲ್ಲಿ ಅಂದರೆ 2021ರ ಸಪ್ಟೆಂಬರ, 2020ರ ಜನೇವರಿ ಮತ್ತು ಮೇ ನಲ್ಲಿ ಮೂರು ಲಸಿಕೆ ಹಾಕುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.

 

Leave a Reply

ಹೊಸ ಪೋಸ್ಟ್‌