ಬೆಂಗಳೂರು: ಕೋವಿಡ್ 19 ಹಿನ್ನೆಲೆಯಲ್ಲಿ ನಾಡಹಬ್ಬ ದಸರಾವನ್ನು ಈ ಬಾರಿಯೂ ಸಾಂಪ್ರದಾಯಿಕವಾಗಿ ಮತ್ತು ಸರಳವಾಗಿ ಆಚರಿಸಲು ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2021 ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ.
ಸಭೆಯ ನಂತರ ಮಾಧ್ಯಮದವರೊಂದಿಗೆ ಈ ಮಾಹಿತಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ ಹಾಗೂ ಮೈಸೂರು ಅರಮನೆ ಆವರಣದಲ್ಲಿ ಜಂಬೂ ಸವಾರಿ, ಹತ್ತು ದಿನಗಳ ದೀಪಾಲಂಕಾರ ಮೊದಲಾದ ಕಾರ್ಯಕ್ರಮ ಏರ್ಪಡಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಮೈಸೂರು, ಚಾಮರಾಜನಗರ ಮತ್ತು ಶ್ರೀರಂಗಪಟ್ಟಣಗಳಲ್ಲಿ ದಸರಾ ಆಚರಣೆ ನಡೆಸಲು ರೂ. 6 ಕೋ. ಅನುದಾನ ಬಿಡುಗಡೆ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ತಿಳಿಸಿದರು.
ದಸರಾ ಉತ್ಸವ ಉದ್ಘಾಟಕರನ್ನು ಆಯ್ಕೆ ಮಾಡುವ ಅಧಿಕಾರವನ್ನು ಸಮಿತಿಯು ಮುಖ್ಯಮಂತ್ರಿಗಳಿಗೇ ನೀಡಿತು.
2019ರ ದಸರಾ ಉತ್ಸವಕ್ಕೆ ಸಂಬಂಧಿಸಿದಂತೆ ಪಾವತಿಸಬೇಕಿರುವ ರೂ. 8.09 ಕೋ. ಬಾಕಿ ಅನುದಾನ ಒದಗಿಸಲು ಸಭೆಯಲ್ಲಿ ನಿರ್ಧರಿಸಲಾಗಿದ್ದು, ಈ ವರ್ಷದಿಂದ ಸರಕಾರ ಒದಗಿಸಿದ ಮೊತ್ತದಲ್ಲಿಯೇ ದಸರಾ ನಡೆಸಲು ಹಾಗೂ ದಸರಾ ಉತ್ಸವದ ಖರ್ಚುವೆಚ್ಚದಲ್ಲಿ ಶಿಸ್ತು ಪಾಲಿಸಿ, ಲೆಕ್ಕಪತ್ರವನ್ನು ಸಮರ್ಪಕವಾಗಿ ನಿರ್ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಜನಪ್ರತಿನಿಧಿಗಳು ಪ್ರವಾಸೋದ್ಯಮ ಉತ್ತೇಜನ ನೀಡಲು ಪ್ರವಾಸೋದ್ಯಮ ಸರ್ಕ್ಯುಟ್ ಮಾಡುವಂತೆ ಕೋರಿದ್ದಾರೆ. ರಾಜ್ಯದಲ್ಲಿ ಹಂಪಿ, ಬಾದಾಮಿ, ವಿಜಯಪುರ ಹೀಗೆ ನಾನಾ ಪ್ರವಾಸೋದ್ಯಮ ಸರ್ಕ್ಯುಟಗಳಿವೆ. ಈಗ ಜಾರಿಯಲ್ಲಿರುವ ಪ್ರವಾಸೋದ್ಯಮ ನೀತಿಯಡಿ ಲಭ್ಯವಿರುವ ಅವಕಾಶಗಳು ಹಾಗೂ ಇತರ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಪ್ರವಾಸೋದ್ಯಮ ಸಚಿವರು ಮತ್ತು ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಮೈಸೂರು ದಸರಾ ಮತ್ತು ಪ್ರವಾಸೋದ್ಯಮದಿಂದ ನಡೆಯುತ್ತಿದ್ದ ಆರ್ಥಿಕ ಚಟುವಟಿಕೆಗಳು ಕೋವಿಡ್ ನಿಂದಾಗಿ ಕುಂಠಿತಗೊಂಡಿವೆ. ಈ ಹಿನ್ನೆಲೆಯಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಕುರಿತು ಚಿಂತನೆ ನಡೆಸಲಾಗುವುದು. ದಸರಾ ಹಿನ್ನೆಲೆಯಲ್ಲಿ ಮೈಸೂರು ನಗರ ಮತ್ತು ಜಿಲ್ಲೆಯಲ್ಲಿ ಅಗತ್ಯವಿರುವ ಮೂಲಸೌಲಭ್ಯ ಅಭಿವೃದ್ಧಿ ಕುರಿತಂತೆ ಅಂದಾಜು ಪಟ್ಟಿಯೊಂದಿಗೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು.
ಈ ಸಭೆಯಲ್ಲಿ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲಕುಮಾರ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ, ಸರಕಾರದ ಮುಖ್ಯ ಪಿ. ರವಿಕುಮಾರ, ಸಂಸದರು, ಶಾಸಕರು ಮತ್ತಿತರ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.