ಆಸ್ತಿ ತೆರಿಗೆ ಬಾಕಿಯನ್ನು ಫೆಬ್ರವರಿ ಅಂತ್ಯದೊಳಗೆ ಸಂಪೂರ್ಣ ವಸೂಲಿ ಮಾಡಲು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಸೂಚನೆ

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಯ ಕಂದಾಯ ವಿಭಾಗದ ಸಿಬ್ಬಂದಿಗಳು ಬಾಕಿ ಇರುವ ಆಸ್ತಿ ತೆರಿಗೆಯನ್ನು ಫೆಬ್ರವರಿ ಅಂತ್ಯದೊಳಗೆ ಸಂಪೂರ್ಣ ವಸೂಲಿ ಮಾಡುವಂತೆ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಅಧಿಕಾರಿಗಳಿಗೆ ಸೂಚಿನೆ ನೀಡಿದ್ದಾರೆ.

ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಡೆದ ವಿಜಯಪುರ ಮಹಾನಗರಪಾಲಿಕೆ ನಾನಾ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಸಂಬಂಧಿಸಿದಂತೆ ತೆರಿಗೆ ಪಾವತಿಸಿ, ಅಭಿವೃದ್ಧಿಗೆ ಸಹಕರಿಸಬೇಕು. ರಸ್ತೆಗಳಲ್ಲಿ ಹಾಗೂ ಪ್ರಮುಖ ವೃತ್ತಗಳಲ್ಲಿನ ಪ್ರಚಾರ ತೆರಿಗೆ ಬಗ್ಗೆ ಪರಿಶೀಲಿಸಿ ಪ್ರಚಾರ ತೆರಿಗೆ ವಸೂಲಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯ ಉದ್ದಿಮೆದಾರರು ಉದ್ದಿಮೆ ಪರವಾನಿಗೆ ಪಡೆದುಕೊಂಡು ಉದ್ದಿಮೆ ನಡೆಸಬೇಕು. ಉದ್ದಿಮೆ ಪರವಾನಗಿ ಪಡೆಯದೆ ಉದ್ದಿಮೆ ನಡೆಸುತ್ತಿರುವ ಉದ್ದಿಮೆದಾರರ ಪಟ್ಟಿ ತಯಾರಿಸಿ ದಂಡದೊಂದಿಗೆ ಉದ್ದಿಮೆ ಪರವಾನಗಿ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.

ಮಹಾನಗರ ಪಾಲಿಕೆ, ಜಲಮಂಡಳಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ.

ಜಲಮಂಡಳಿ ವ್ಯಾಪ್ತಿಯಲ್ಲಿ ಈಗಾಗಲೇ ಪೈಪ್‌ಲೈನ್ ಅಳವಡಿಸಲು ಸುಮಾರು 531 ಕೀ. ಮೀ. ನಷ್ಟು ರಸ್ತೆಯನ್ನು ಅಗೆದಿದ್ದು ಸುಮಾರು 176 ಕೀ. ಮೀ. ರಷ್ಟು ರಸ್ತೆಯನ್ನು ಪುನರ ಸ್ಥಾಪಿಸಲಾಗಿದೆ. ಉಳಿದ ರಸ್ತೆಯನ್ನು ಸಮರೋಪಾದಿಯಲ್ಲಿ ಪುನರಸ್ಥಾಪಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಮಹಾನಗರ ಪಾಲಿಕೆಯಿಂದ ಪೌರ ಕಾರ್ಮಿಕ ಗೃಹಭಾಗ್ಯ ಯೋಜನೆಯಡಿ ನಿರ್ಮಿಸಿದ ಕಟ್ಟಡಗಳನ್ನು ಪೌರ ಕಾರ್ಮಿಕ ಅರ್ಹ ಫಲಾನುಭವಿಗಳಿಗೆ ಸೆ. 23ರೊಳಗೆ ಹಕ್ಕು ಪತ್ರ ವಿತರಿಸಿ ಮನೆಗಳನ್ನು ಹಸ್ತಾಂತರಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಮನೆ ಮನೆ ಕಸ ಸಂಗ್ರಹಣೆಯನ್ನು ಪರಿಶೀಲಿಸಿ ಈಗಾಗಲೇ 17 ವಾರ್ಡಗಳಲ್ಲಿ ಮನೆ ಮನೆಗಳಿಂದ ಹಸಿ ಕಸ ಮತ್ತು ಒಣ ಕಸ ವಿಂಗಡಣೆಯಾಗುತ್ತಿದೆ. ಇನ್ನೂ ಎಲ್ಲ ವಾರ್ಡಗಳಲ್ಲಿ ಹಸಿ ಕಸ ಮತ್ತು ಒಣ ಕಸ ಬೇರ್ಪಡಿಸಿ ಶೇ. 100 ರಷ್ಟು ವಿಲೆವಾರಿ ಮಾಡಲು ಪಾಲಿಕೆ ಪರಿಸರ ಅಭಿಯಂತರಿಗೆ ಜಿಲ್ಲಾಧಿಕಾರಿಗಲು ಸೂಚನೆ ನೀಡಿದರು.

ಮಹಾನಗರ ಪಾಲಿಕೆ, ಜಲಮಂಡಳಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ.

ವಿಜಯಪುರ ಮಹಾನಗರ ಪಾಲಿಕೆಯಲ್ಲಿನ ಲೆಕ್ಕ ಶಾಖೆಯಲ್ಲಿ ಈಗಾಗಲೇ ಸುಮಾರು ರೂ. 18 ಕೋ. ಗುತ್ತಿಗೆದಾರರಿಗೆ ನೀಡಬೇಕಿರುವ ಹಣ ಬಾಕಿ ಇದ್ದು, ಮಹಾನಗರ ಪಾಲಿಕೆಗೆ ಬರಬೇಕಿರುವ ಆಸ್ತಿ ತೆರಿಗೆ, ಉದ್ದಿಮೆ ಪರವಾನಿಗೆ, ಪ್ರಚಾರ ತೆರಿಗೆ ಹಾಗೂ ಬೇರೆ ಮೂಲಗಳಿಂದ ಬರುವ ಆದಾಯವನ್ನು ವಸೂಲಿ ಮಾಡಿ ಗುತ್ತಿಗೆದಾರರಿಗೆ ಹಂತ ಹಂತವಾಗಿ ಬಿಲ್ಲು ಪಾವತಿಸಲು ಕ್ರಮ ಕೈಗೊಳ್ಳುವಂತೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಅವರಿಗೆ ಸೂಚನೆ ನೀಡಿದರು.

ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರು, ಚಾಲಕರ ಮತ್ತು ಲೋಡಗಳ ಪಿ. ಎಫ್ ಮತ್ತು ಇ ಎಸ್ ಆಯ್ ಮೊತ್ತವನ್ನು ನಿಗದಿತ ಅವಧಿಯೊಳಗೆ ಪಾವತಿಸಲು ಗುತ್ತಿಗೆದಾರರಿಗೆ ಸೂಚಿಸಲು ತಿಳಿಸಿದ ಅವರು, ತಪ್ಪಿದಲ್ಲಿ ಅಂಥ ಗುತ್ತಿಗೆದಾರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಆಯುಕ್ತರಿಗೆ ಸೂಚನೆ ನೀಡಿದರು.

ಕೇಂದ್ರ ಪುರಸ್ಕೃತ ಸ್ವಚ್ಛ ಭಾರತ ಮಿಷನ ಯೋಜನೆಯಡಿ ವಿಜಯಪುರ ನಗರವನ್ನು ಉತ್ತಮ ಶ್ರೇಯಾಂಕ ತರುವ ನಿಟ್ಟಿನಲ್ಲಿ ಉತ್ತಮ ಕೆಲಸ ನಿರ್ವಹಿಸಬೇಕು. ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ನಗರದಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದ ಅವರು, ಮಹಾನಗರ ಪಾಲಿಕೆ ವ್ಯಾಪ್ತಿಯ ಆಸ್ತಿ ಮಾಲೀಕರು ಸರಿಯಾದ ಸಮಯದಲ್ಲಿ ಆಸ್ತಿ ತೆರಿಗೆ ಪಾವತಿಸಿ ನಗರದ ಅಭಿವೃದ್ಧಿಗೆ ಸಹಕಾರ ನೀಡಲು ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಮನವಿ ಮಾಡಿದರು.

ಈ ಸಭೆಯಲ್ಲಿ ಅಧಿಕಾರಿಗಳಾದ ರಿಷಿ ಆನಂದ, ವಿಜಯಪುರ ಉಪವಿಭಾಗಾಧಿಕಾರಿ ಬಲರಾಮ ಲಮಾಣಿ, ವಿಜಯಪುರ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಾಜಶೇಖರ ಡಂಬಳ, ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮಕ್ಕಳಕಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಎಕ್ಸಿಕ್ಯೂಟಿವ್ ಎಂಜಿನಿಯರ್ ಎಸ್. ಎ. ಇನಾಮದಾರ, ಸಹಾಯಕ ಎಂಜಿನಿಯರ್ ಡಿ. ಎಚ್. ಕಿರೇಸೂರ, ವಿಠಲ ಎಸ್. ಹೊನ್ನಳ್ಳಿ, ಜಲಮಂಡಳಿ ಎಕ್ಸಿಕ್ಯೂಟಿವ್ ಎಂಜಿನಿಯರ್ ಎಸ್. ಎಸ್. ಪಟ್ಟಣಶೆಟ್ಟಿ, ಪಾಲಿಕೆಯ ಮತ್ತು ಜಲಮಂಡಳಿಯ ಅಧಿಕಾರಿಗಳು ಉಪಸ್ಥಿತರಿದ್ದರು.

 

 

Leave a Reply

ಹೊಸ ಪೋಸ್ಟ್‌