ವಿಜಯಪುರಛ ನಮ್ಮ ದೇಶದ ಕಾನೂನು ನಮ್ಮ ರಕ್ಷಣೆಗಾಗಿ ಇವೆ. ಅವುಗಳನ್ನು ಗೌರವಿಸುವುದು ನಮ್ಮ ಆಧ್ಯ ಕರ್ತವ್ಯವಾಗಿದೆ ಎಂದು ವಿಜಯಪುರ ಹಿರಿಯ ಸಿವಿಲ್ ನ್ಯಾಯಾಧೀಶ ವೆಂಕಣ್ಣ ಬಿ. ಹೊಸಮನಿ ಹೇಳಿದ್ದಾರೆ.
ವಿಜಯಪುರ ನಗರದ ಜಲನಗರದ ಸರಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಪೌಷ್ಠಿಕ ಆಹಾರ ದಿನ ಮತ್ತು ರಾಷ್ಟ್ರೀಯ ಪೌಷ್ಠಿಕ ಸಪ್ತಾಹ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, 18 ವರ್ಷದ ಒಳಗಿನ ಮಕ್ಕಳ ಕೈಯಲ್ಲಿ ಪಾಲಕರು ವಾಹನವನ್ನು ನೀಡಿದ್ದಲ್ಲಿ ಪಾಲಕರೇ ಹೊಣೆಗಾರರು ಮತ್ತು ವಾಹನ ಚಾಲನೆ ಪರವಾನಿಗೆ ಇಲ್ಲದೆ ವಾಹನ ಓಡಿಸುವುದು ಅಪರಾಧ ಎಂದು ಹೇಳಿದರು.
18 ವರ್ಷದೊಳಗಿನ ಗಂಡು ಮತ್ತು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದಲ್ಲಿ ಫೋಕ್ಸೋ ಕಾಯದೆ ಅಡಿ ರೂ. 8 ಲಕ್ಷದವರಿಗೆ ದಂಡ ಮತ್ತು ಶಿಕ್ಷೆಗೆ ಗುರಿಯಾಗುತ್ತಾರೆ ಎಂದು ಎಚ್ಚರಿಕೆ ನೀಡಿದ ಅವರು, ಕಾರ್ಯಕ್ರಮ ನಡೆದ ಶಾಲೆಯಲ್ಲಿ ಕೊರೊನಾ ಮಾರ್ಗಸೂಚಿ ಪಾಲಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನ್ಯಾಯವಾದಿ ಅಶೋಕ ಜೈನಾಪೂರ ಅವರು ಮಕ್ಕಳಿಗೆ ಪೌಷ್ಠಿಕ ಆಹಾರದ ಮಹತ್ವದ ಕುರಿತು ಉಪನ್ಯಾಸ ನೀಡಿದರು. ಶಿಕ್ಷಣ ಇಲಾಖೆಯ ಬೇಟಿ ಬಚಾವೂ ಬೇಟಿ ಪಡಾವೂ ಜಿಲ್ಲಾ ನೋಡಲ್ ಅಧಿಕಾರಿ ನಿರ್ಮಲಾ ದೊಡಮನಿ ಅವರು ಮಕ್ಕಳಿಗೆ ಪೌಷ್ಠಿಕ ಆಹಾರದ ಬಗ್ಗೆ ತಿಳಿ ಹೇಳಿದರು.
ಈ ಸಂದರ್ಭದಲ್ಲಿ ಎ. ಆರ್. ದಶವಂತ, ಬಿ. ಎಂ. ಜಿರಾಳೆ ಮತ್ತು ಇತರರು ಉಪಸ್ಥಿತರಿದ್ದರು.