ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಶನಿವಾರ ತಡರಾತ್ರಿ ವೇಲೆಯಲ್ಲಿ ಸಂಭವಿಸಿದ ಭೂಕಂಪ ವಲಯ-2ರಲ್ಲಿ ಬರುತ್ತಿದ್ದು, ಇದು ಕಡಿಮೆ ಅಪಾಯ ಇರುವ ವಲಯವಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಆದ್ದರಿಂದ ಸಾರ್ವಜನಿಕರು ಈ ಕುರಿತು ಯಾವುದೇ ಊಹಾಪೋಹಗಳಿಗೆ ಕಿವಿಗೊಡಬಾರದು ಮತ್ತು ಭಯಪಡಬಾರದು ಎಂದು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಶನಿವಾರ ತಡರಾತ್ರಿ 11.47 ರಿಂದ 11.49ರ ಅವಧಿಯಲ್ಲಿ ವಿಜಯಪುರ ಜಿಲ್ಲೆಯ ವಿಜಯಪುರ, ಬಬಲೇಶ್ವರ, ತಿಕೋಟಾ, ಬಸವನ ಬಾಗೇವಾಡಿ ತಾಲೂಕುಗಳು, ವಿಜಯಪುರ ನಗರ ಹಾಗೂ ಜಿಲ್ಲೆಯ ಇತರೆ ಭಾಗಗಳಲ್ಲಿ ಭೂಕಂಪನದ ಅನುಭವವಾಗಿರುವ ಬಗ್ಗೆ ಸಾರ್ವಜನಿಕರು ಮತ್ತು ಮಾಧ್ಯಮಗಳಿಂದ ಮಾಹಿತಿ ಬಂದಿದೆ. ಈ ಕುರಿತು ಬೆಂಗಳೂರಿನ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣೆ ಕೇಂದ್ರ(KSNDMC) ಮಾಹಿತಿ ಸಂಗ್ರಹಿಸಲಾಗಿದೆ. ಅಲ್ಲದೇ, ವಿಜಯಪುರ ಜಿಲ್ಲೆಯ ಆಲಮಟ್ಟಿಯಲ್ಲಿರುವ ಭೂಕಂಪನ ಮಾಪಕ ಕೇಂದ್ರದಲ್ಲಿಯೂ 3.9 ರಷ್ಟು ತೀವ್ರತೆಯ ಭೂಕಂಪ ದಾಖಲಾಗಿದೆ. ಈ ಭೂಕಂಪದ ಕೇಂದ್ರ ಮಹಾರಾಷ್ಟ್ರದ ಕೊಲ್ಲಾಪುರ ಇದೆ ಎಂದು ಅವರು ತಿಳಿಸಿದ್ದಾರೆ.
ಶನಿವಾರ ರಾತ್ರಿ ಭೂಕಂಪದ ಅನುಭವದ ಮಾಹಿತಿಯು ಸಾರ್ವಜನಿಕರಿಂದ ಮತ್ತು ಮಾಧ್ಯಮಗಳಿಂದ ತಿಳಿದು ಬಂದ ಕೂಡಲೇ ಕಂದಾಯ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಮಧ್ಯರಾತ್ರಿಯೇ ಭೂಕಂಪದ ಅನುಭವವಾದ ಪ್ರದೇಶಗಳಿಗೆ ಭೇಟಿ ನೀಡಿದ್ದೇವೆ. ಈವರೆಗೆ ಜಿಲ್ಲೆಯಲ್ಲಿ ಯಾವುದೇ ಜೀವಹಾನಿ, ಆಸ್ತಿ-ಪಾಸ್ತಿ ಹಾನಿಯಾದ ಬಗ್ಗೆ ವರದಿಯಾಗಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ತಿಳಿಸಿದ್ದಾರೆ.
ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಸಭೆ
ಈ ಮಧ್ಯೆ, ವಿಜಯಪುರ ಜಿಲ್ಲೆಯಲ್ಲಿ ಶನಿವಾರ ಭೂಕಂಪ ಉಂಟಾಗಿರುವ ಹಿನ್ನೆಲೆಯಲ್ಲಿ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದಿದ್ದಾರೆ. ಅಲ್ಲದೇ, ಹಲವಾರು ಸಲಹೆ, ಸೂಚನೆಗಳನ್ನು ನೀಡಿದ್ದಾರೆ.
ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಈ ಸಭೆಯಲ್ಲಿ ಭಾಗಿಯಾಗಿದ್ದರು. ಈ ಸಭೆಯಲ್ಲಿ ಭೂಕಂಪನ ಕುರಿತು ಮಾಹಿತಿ ಸಂಗ್ರಹಿಸಿದ ಅವರು, ಎಲ್ಲೆಲ್ಲಿ ಭೂಮಿ ಕಂಪಿಸಿದೆ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಪಡೆದ ರಮೇಶ ಕಳಸದ ಅವರು, ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ವಿಜಯಪುರ ನಗರದಲ್ಲಿ, ಬಸವನ ಬಾಗೇವಾಡಿ, ತಿಕೋಟಾ, ಬಬಲೇಶ್ವರ ತಾಲೂಕುಗಳ ಭಾಗಗಳಲ್ಲಿ ಭೂಮಿ ಕಂಪಿಸಿದೆ. ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯ ಡ್ಯಾಂ ಆವರಣದಲ್ಲಿನ ಭೂಕಂಪನ ಮಾಪನ ಕೇಂದ್ರ ಮತ್ತು ಕಲಬುರಗಿಯಲ್ಲಿನ ಭೂಕಂಪನ ಮಾಪನ ಕೇಂದ್ರದಲ್ಲಿ ಭೂಮಿ ಕಂಪಿಸಿದ್ದು ದಾಖಲಾಗಿದೆ. ರಿಕ್ಟರ್ ಮಾಪನದಲ್ಲಿ 3.9 ರಷ್ಟು ತೀವ್ರತೆಯಿತ್ತು ದಾಖಲಾಗಿದೆ. ನೆರೆಯ ಮಹಾರಾಷ್ಟ್ರದ ಕೊಲ್ಹಾಪುರ ಭೂಕಂಪನದ ಕೇಂದ್ರವಾಗಿತ್ತು. ಅಲ್ಲಿಂದ 170 ಕಿ. ಮೀ. ವೈಮಾನಿಕ ಅಂತರದಲ್ಲಿರುವ ವಿಜಯಪುರ ಜಿಲ್ಲೆಯಲ್ಲಿಯೂ ಭೂಮಿ ಕಂಪಿಸಿದೆ ಎಂದು ತಿಳಿಸಿದ್ದಾರೆ.
ಆಲಮಟ್ಟಿಯ ಡ್ಯಾಂನಿಂದ 200 ಕಿ. ಮೀ. ಅಂತರವಿದೆ ಇದೆ. ಇಷ್ಟು ದೂರವಿದ್ದರೂ ಭೂಕಂಪನದ ಅನುಭವ ಇಲ್ಲಿಯೂ ಆಗಿದೆ. ಆದರೆ, ಜನರು ಭಯ ಪಡಬಾರದು. ವಿಜಯಪುರ ಜಿಲ್ಲೆ ಸುರಕ್ಷತೆ ವಲಯದಲ್ಲಿದೆ. ಭೂಕಂಪನದಿಂದ ಯಾವುದೇ ಹಾನಿಯ ವರದಿಯಾಗಿಲ್ಲ ಎಂದು ರಮೇಶ ಕಳಸದ ತಿಳಿಸಿದರು.