ವಿಜಯಪುರ: ವಿಜಯಪುರದಲ್ಲಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಶನಿವಾರ ಮಧ್ಯಾರಾತ್ರಿ ವೇಳೆಗೆ ಭೂಕಂಪನ ಸಂಭವಿಸಿದೆ.
ಮಹಾರಾಷ್ಟ್ರದ ಕೊಲ್ಹಾಪುರ ಈ ಭೂಕಂಪನನದ ಕೇಂದ್ರ ಬಿಂದುವಾಗಿದ್ದು, ಅಲ್ಲಿ ರಿಕ್ಚರ್ ಮಾಪಮಕದಲ್ಲಿ 3.9 ತೀವ್ರತೆಯ ಕಂಪನ ದಾಖಲಾಗಿದೆ.
ಶನಿವಾರ ರಾತ್ರಿ 11.51ರ ಸುಮಾರಿಗೆ ಮೂರು ಬಾರಿ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ವಿಜಯಪುರ ನಗರದ ನಾನಾ ಬಡವಾಣೆಗಳ ಜನರು ತಿಳಿಸಿದ್ದಾರೆ. ರಾತ್ರಿ 11.51ರ ಸುಮಾರಿಗೆ ಶಬ್ದ ಕೇಳಿ ಬಂದಿದೆ. ನಂತರ ಭೂಮಿ ಕಂಪಿಸಿದ ಅನುಭವವಾಗಿದೆ. ಇದರಿಂದ ಆತಂಕಗೊಂಡ ಜನತೆ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.
ಜಿಟಿಜಿಟಿ ಮಳೆಯ ನಡುವೆಯ ಭೂಮಿ ಕಂಪಿಸಿದ ಅನುಭವದಿಂದಾಗಿ ಜನರು ಮತ್ತಷ್ಟು ಗಾಬರಿಯಾಗಿದ್ದಾರೆ. ಕೆಲವರು ನಿದ್ದೆಯಿಂದ ಎಚ್ಚೆತ್ತುಕೊಂಡು ಹೊರಗೆ ಓಡಿ ಬಂದಿದ್ದಾರೆ. ಮತ್ತೆ ಕೆಲವರು ಟಿವಿ ನೋಡುತ್ತ ಕುಳಿತಿದ್ದು, ತಕ್ಷಣ ಗಾಬರಿಯಾಗಿ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.
ಈ ಘಟನೆಯಿಂದಾಗಿ ವಿಜಯಪುರ ನಗರದ ಕಾಸಗೇರಿ ಓಣಿ, ಬಸವ ನಗರ, ಮುರಾಣಕೇರಿ, ಕೀರ್ತಿ ನಗರ, ಜಲನಗರ, ಶ್ಯಾಪೇಟಿ ಓಣಿ, ಇಂಡಿ ರಸ್ತೆ, ಕನಕದಾಸ ಬಡಾವಣೆ, ವಜ್ರಹನುಮಾನ ನಗರ ಸೇರಿದಂತೆ ಬಹುತೇಕ ಕಡೆಗಳಲ್ಲಿ ವಾಸಿಸುವ ಜನರಿಗೆ ಭೂಕಂಪನದ ಅನುಭವ ಉಂಟಾಗಿದೆ.
ಬಸವನ ಬಾಗೇವಾಡಿ, ತಿಕೋಟಾ ಮತ್ತು ಬಬಲೇಶ್ವರ ತಾಲೂಕಿನ ನಾನಾ ಗ್ರಾಮಗಳಲ್ಲಿಯೂ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ನಾನಾ ಗ್ರಾಮಗಳಲ್ಲಿ ಇತ್ತೀಚೆಗೆ ಭಾರಿ ಶಬ್ದ ಮತ್ತು ಭೂಮಿ ಕಂಪಿಸಿದ ಬಗ್ಗೆ ಆಗಾಗ ಅನುಭವಗಳು ಕೇಳಿ ಬರುತ್ತಿವೆ. ಆದರೆ, ಅಲ್ಲಿ ಭೂಕಂಪನದ ಬಗ್ಗೆ ಸಿಸ್ಮೊ ಮೀಟರ್ ಅಥವಾ ರಿಕ್ಚರ್ ಮಾಪಕದಲ್ಲಿ ಯಾವುದೇ ದಾಖಲಾಗಿಲ್ಲ. ಭೂಮಿಯ ಕೆಳಫದರಲ್ಲಿ ಸಂಗ್ರಹವಾಗುವ ಮಳೆ ನೀರು ಸಂಚಾರವಾಗುವುದರಿಂದ ಈ ರೀತಿ ಅನುಭವವಾಗುತ್ತವೆ ಎಂದು ಈ ಹಿಂದೆ ಅಧಿಕಾರಿಗಳು ಹೇಳಿದ್ದರು.
ಆದರೆ, ಈವರೆಗೆ ವಿಜಯಪುರ ಜಿಲ್ಲೆಯ ಗ್ರಾಮೀಣ ಭಾಗದ ಜನರಿಗೆ ಆಗುತ್ತಿದ್ದ ಅನುಭವ ಈಗ ವಿಜಯಪುರ ನಗರದ ಜನರಿಗೆ ಆಗಿರುವುದು ಆತಂಕ ಮೂಡಿಸಿದೆ.
ಕರ್ನಾಟಕ ರಾಜ್ಯ ಪ್ರಕೃತಿ ವಿಕೋಪ ನಿರ್ವಹಣೆ ಕೇಂದ್ರ ಕೂಡ ಮಹಾರಾಷ್ಟ್ರದ ಕೊಲ್ಹಾಪುರ ಭೂಕಂಪನದ ಕೇಂದ್ರಬಿಂದುವಾಗಿದ್ದು, ರಿಕ್ಚರ್ ಮಾಪಕದಲ್ಲಿ 3.9 ತೀವ್ರತೆಯೆ ಭೂಕಂಪನ ದಾಖಲಾಗಿದೆ ಎಂದು ಮಾಹಿತಿ ನೀಡಿದೆ ಎಂದು ವಿಜಯಪುರ ಜಿಲ್ಲಾಡಳಿತ ತಿಳಿಸಿದೆ.