ಮಕ್ಕಳ ಜೀವನ ರೂಪಿಸುವಲ್ಲಿ ಶಿಕ್ಷಕರದು ಬಹಳ ಪ್ರಮುಖ ಪಾತ್ರ: ವಿಜಯಪುರ ಉಪ ವಿಭಾಗಾಧಿಕಾರಿ ಬಲರಾಮ ಲಮಾಣಿ

ವಿಜಯಪುರ: ತಂದೆ-ತಾಯಿಯ ನಂತರ ಮಕ್ಕಳ ಜೀವನ ರೂಪಿಸುವಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ವಿಜಯಪುರ ಉಪವಿಭಾಗಾಧಿಕಾರಿ ಬಲರಾಮ ಲಮಾಣಿ ಹೇಳಿದ್ದಾರೆ.

ವಿಜಯಪುರ ನಗರದ ಶ್ರೀ. ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಮಂಗಲ ಕಾರ್ಯಾಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಂಯುಕ್ತಾಶ್ರಯದಲ್ಲಿ ಡಾ. ಎಸ್. ರಾಧಾಕೃಷ್ಣನ್ ಅವರ ಜನ್ಮದಿನೋತ್ಸವದ ಅಂಗವಾಗಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿಜಯಪುರದಲ್ಲಿ ಶಿಕ್ಷಕರ ದಿನ ಕಾರ್ಯಕ್ರಮಕ್ಕೆ ಉಪವಿಭಾಗಾಧಿಕಾರಿ ಬಲರಾಮ ಲಮಾಣಿ ಚಾಲನೆ ನೀಡಿದರು.

ಮನಸ್ಸಿಟ್ಟು ಪಾಠ ಮಾಡುವ ಶಿಕ್ಷಕರು ವಿದ್ಯಾರ್ಥಿಯ ಮನಸ್ಸಿನಲ್ಲಿ ಸದಾ ಇರುತ್ತಾರೆ. ವಿದ್ಯಾರ್ಥಿಯು ಎಂಥ ಉನ್ನತ ಸ್ಥಾನವನ್ನು ಅಲಂಕರಿಸಿದರೂ ಆ ಶಿಕ್ಷಕರನ್ನು ಮರೆಯುವುದಿಲ್ಲ. ನಾನೂ ಕೂಡ ಓರ್ವ ಶಿಕ್ಷಕನಾಗಿದ್ದೆ. ಎಂಟು ವರ್ಷಗಳ ಕಾಲ ಪದವಿ ವಿದ್ಯಾರ್ಥಿಗಳಿಗೆ ಪಾಠ ಬೋಧನೆ ಮಾಡಿದ್ದೇನೆ. ಮುಂದೆ ಕೆಎಎಸ್ ಪರೀಕ್ಷೆ ಬರೆದು ಈ ಹುದ್ದೆ ಅಲಂಕರಿಸಲು ಶಿಕ್ಷಕರು ಪ್ರಮುಖ ಕಾರಣರಾಗಿದ್ದಾರೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.

ಶಿಕ್ಷಕರು ಮಕ್ಕಳಿಗೆ ಅಂಕ ಗಳಿಸುವದನ್ನು ಮಾತ್ರ ಬೋಧಿಸದೇ ಜೀವನ ಪಾಠ ಹೇಳಿಕೊಡುವ, ಮೌಲ್ಯಗಳನ್ನು ಬಿತ್ತುವ ಕೆಲಸ ಮಾಡಬೇಕು. ಅಂಕಗಳಿಗಷ್ಟೇ ಹೆಚ್ಚಿನ ಪ್ರಾಮುಖ್ಯತೆ ನೀಡದೆ ಮಕ್ಕಳ ಪ್ರತಿಭೆ ಮತ್ತು ಅವರಲ್ಲಿರುವ ಆಸಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸಿ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೋಳಸಂಗಿ ಮಾತನಾಡಿ, ಶಿಕ್ಷಕರು ದೇಶದ ಭವಿಷ್ಯ ನಿರ್ಮಿಸುವವರು. ಗುರುಗಳನ್ನು ತ್ರಿಮೂರ್ತಿಗಳಿಗೆ ಹೋಲಿಸಲಾಗಿದೆ. ಶಿಕ್ಷಣ ಕ್ಷೇತ್ರವನ್ನು ಇನ್ನಷ್ಟು ಸುಧಾರಿಸುವ ಕಾರ್ಯವಾಗಬೇಕಾಗಿದೆ. ಸರಕಾರಿ ಶಾಲೆಗಳಲ್ಲಿ ಕಲಿತರೆ ಒಳ್ಳೆಯ ಭವಿಷ್ಯವಿದೆ ಎಂಬ ಭಾವನೆಯನ್ನು ಎಲ್ಲರಲ್ಲೂ ಮೂಡಿಸುವಂತಾಗಬೇಕು ಎಂದು ಹೇಳಿದರು.

ಶಿಕ್ಷಕರ ದಿನ ಕಾರ್ಯಕ್ರಮದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿದ ಮುಕಂಡರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್. ವಿ. ಹೊಸೂರು ಪ್ರಾಸ್ತಾವಿಕವಾಗಿ ಮಾತನಾಡಿ, ಮೌಲ್ಯಗಳು ಕುಸಿಯುತ್ತಿರುವ ಇಂದಿನ ದಿನಗಳಲ್ಲಿ ಆ ಮೌಲ್ಯಗಳನ್ನು ಎತ್ತಿಹಿಡಿಯುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಕೋವಿಡ್ ಕಾಲದಲ್ಲಿ ಕಾರ್ಯ ನಿರ್ವಹಿಸಿ ಶಿಕ್ಷಕರು ಪ್ರಾಮಾಣಿಕ ಕೆಲಸ ಮಾಡಿದ್ದಾರೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಆರಂಭದಲ್ಲಿ ಗಣ್ಯರು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಹೇಮರೆಡ್ಡಿ ಮಲ್ಲಮ್ಮ ಸಂಸ್ಥೆಯ ಅಧ್ಯಕ್ಷ ಸುರೇಶ ದೇಸಾಯಿ. ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುರೇಶ ಶೆಡಶ್ಯಾಳ, ಶಿವಾನಂದ ಗುಡ್ಡೋಡಗಿ, ಎಸ್. ಎಸ್. ಪಡಶೆಟ್ಟಿ, ರಾಜಶೇಖರ ಉಮರಾಣಿ, ಜಗದೀಶ, ಬಿ. ಎಚ್. ನಾಡಗೇರ, ಸಯ್ಯದ್ ಜುಬೇರ ಸೇರಿದಂತೆ ಶಿಕ್ಷಕ, ಶಿಕ್ಷಕಿಯರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌