ಬೆಂಗಳೂರು: ರಾಜ್ಯದಲ್ಲಿ ಈ ವರ್ಷದಲ್ಲಿ 5000 ಶಿಕ್ಷಕರನ್ನು ನೇಮಕ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲಿನಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಈ ಸಮಾರಂಭದಲ್ಲಿ ಶಿಕ್ಷಕರ ಕೊರತೆ ನೀಗಿಸುವ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ. ಸಿ. ನಾಗೇಶ ಅವರು ಮಾಡಿದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು 5000 ಶಿಕ್ಷಕರನ್ನು ನೇಮಕ ಮಾಡುವುದಾಗಿ ತಿಳಿಸಿದರು.
21ನೇ ಶತಮಾನ ಜ್ಞಾನದ ಶತಮಾನ. ಜ್ಞಾನದಿಂದ ವಿಜ್ಞಾನ. ವಿಜ್ಞಾನದಿಂದ ತಂತ್ರಜ್ಞಾನದತ್ತ ಮುನ್ನಡೆದಿರುವ ದೇಶ ಭಾರತ. ಈಗ ತಂತ್ರಜ್ಞಾನದಿಂದ ತಂತ್ರಾಂಶ ಜ್ಞಾನದತ್ತ ವೇಗವಾಗಿ ಸಾಗಿದೆ. ಈ ವೇಗಕ್ಕೆ ಶಿಕ್ಷಕರು ಹೊಂದಿಕೊಳ್ಳುವುದು ಅನಿವಾರ್ಯ. ಉತ್ತಮ ವಿದ್ಯಾರ್ಥಿಗಳಾದಾಗ ಮಾತ್ರ ಉತ್ತಮ ಶಿಕ್ಷಕರಾಗಲು ಸಾಧ್ಯ ಎಂದು ಅವರು ತಿಳಿಸಿದರು.
ವಿದ್ಯಾರ್ಥಿಗಳಿಗೆ ಪ್ರಶ್ನಿಸುವ ಮನೋಭಾವ ಬೆಳೆಸಲು ಪ್ರೇರೇಪಿಸಿ, ತಿಳಿದುಕೊಳ್ಳಲು ಉತ್ತೇಜನ ನೀಡುವವರೇ ನಿಜವಾದ ಗುರುಗಳು. ಮಕ್ಕಳಲ್ಲಿ ಮುಗ್ಧತೆ, ತಿಳಿದುಕೊಳ್ಳುವ ತವಕವನ್ನು ಉಳಿಸುವವರು ಅತ್ಯುತ್ತಮ ಗುರುಗಳು ಎಂದು ಅವರು ಅಭಿಪ್ರಾಯಪಟ್ಟರು.
ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಕ್ರಮ ವಹಿಸಲಾಗುತ್ತಿದ್ದು, ಶಿಕ್ಷಕರು ತಮ್ಮ ಅನಿಸಿಕೆ, ಅನುಮಾನ ವ್ಯಕ್ತಪಡಿಸಿ, ಮುಕ್ತವಾಗಿ ಚರ್ಚಿಸಿ ಮುಂದುವರೆಯೋಣ. ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ನೀತಿಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸೋಣ ಎಂದು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ತಿಳಿಸಿದರು.
ಮಾಜಿ ರಾಷ್ಟ್ರಪತಿ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಅವರು ಸಾತ್ವಿಕತೆ, ವೈಚಾರಿಕತೆಯನ್ನು ಹೊಂದಿದ ಅಪರೂಪದ ನಾಯಕರಾಗಿದ್ದರು. ನೈತಿಕ ನಡೆಯ ಧೀಮಂತ ನಾಯಕರಾದ ರಾಧಾಕೃಷ್ಣನ್ ಅವರ ಆದರ್ಶದ ಜೀವನ ನಮಗೆ ದಾರಿದೀಪ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ. ಸಿ. ನಾಗೇಶ ಅವರು, ಬುದ್ಧಿ, ಕರುಣೆ, ಕೌಶಲ್ಯ ತರಬೇತಿಯನ್ನು ಮೈಗೂಡಿಸಿಕೊಂಡ ರಾಷ್ಟ್ರೀಯ ಶಿಕ್ಷಣ ನೀತಿ ಭಾರತಕ್ಕೆ ಸ್ವಾಭಿಮಾನಿ ಮತ್ತು ಸ್ವಾವಲಂಬಿ ಸಮಾಜ ನಿರ್ಮಾಣಕ್ಕೆ ಪೂರಕವಾಗಿದೆ ಎಂದು ತಿಳಿಸಿದರು.
ಕೋವಿಡ್ ಸಂದರ್ಭದಲ್ಲಿ ಮಕ್ಕಳ ಕಲಿಕೆಗೆ ಅಡ್ಡಿಯಾಗದಂತೆ ಶ್ರಮಿಸಿದ ಹಾಗೂ ಯಶಸ್ವಿಯಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸಿಕೊಟ್ಟ ಶಿಕ್ಷಕರನ್ನು ಶ್ಲಾಘಿಸಿದ ಸಚಿವರು, ಕೋವಿಡ್ ನಿಂದ ಪ್ರಾಣ ಕೊಟ್ಟ ಶಿಕ್ಷಕರನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಶಾಲೆಗಳ ಅಭಿವೃದ್ಧಿಗೆ ದೇಣಿಗೆ ವರ್ಗಾವಣೆಗಾಗಿ ರೂಪಿಸಲಾದ ನಮ್ಮ ಶಾಲೆ ನನ್ನ ಕೊಡುಗೆ ತಂತ್ರಾಂಶವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶಾಸಕ ರಿಜ್ವಾನ್ ಅರ್ಷದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸರಕಾರದ ಹಿರಿಯ ಅಧಿಕಾರಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.