ಗಣೇಶ ಚತುರ್ಥಿ ಆಚರಣೆಗೆ ಏಳು ದಿನ ಕಾಲಾವಕಾಶ ನೀಡಿ, ಮೆರವಣಿಗೆ ನಡೆಸಲು ಬಿಡಿ- ಇಲ್ಲದಿದ್ದರೆ ತಾಲಿಬಾನ್ ರೀತಿ ವರ್ತಿಸಿದಂತಾಗುತ್ತದೆ- ಶಾಸಕ ಯತ್ನಾಳ ವಾಗ್ದಾಳಿ

ವಿಜಯಪುರ: ಗಣೇಶೋತ್ಸವ ಆಚರಣೆಗೆ ಸರಕಾರ ವಿಧಿಸಿರುವ ಷರತ್ತುಗಳ ಬಗ್ಗೆ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ಗಣೇಶ ಚತುರ್ಥಿ ಆಚರಣೆಗೆ ಸರಕಾರ ಅವಕಾಶ ನೀಡಿರುವುದು ಸಮಾಧಾನ ತಂದಿಲ್ಲ. ನಮ್ಮ ಹೋರಾಟದ ಫಲವಾಗಿ ಶೇ. 50ರಷ್ಟು ಈ ವಿಚಾರದಲ್ಲಿ ಗೆದ್ದಿದ್ದೇವೆ. ಐದು ದಿನಗಳ ಬದಲು ಏಳು ದಿನಗಳ ಕಾಲ ಅವಕಾಶ ನೀಡಬೇಕಿತ್ತು. ಮೆರವಣಿಗೆಗೆ ಅವಕಾಶ ಕೊಡಬೇಕಿತ್ತು. ಅಲ್ಲದೇ, ಪ್ರತಿ ವಾರ್ಡಿಗೆ ಕೇವಲ ಒಂದು ಗಣೇಶ ಮೂರ್ತಿ ಪ್ರತಿಷ್ಠಾಪನೆ ಕಂಡಿಷನ್ ಕೈ ಬಿಡಬೇಕು. ಇದು ಹಿಂದುಗಳ ವಿರೋಧಿ ನಿಲುವು ಮತ್ತು ತಾಲಿಬಾನಿಗಳ ರೀತಿ ವರ್ತಿಸದಂತಾಗುತ್ತದೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಿಡಿ ಕಾರಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ಸರಕಾರವೇ ಈಗ ಐದು ದಿನಗಳ ಕಾಲ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಉತ್ಸವ ಸಮಿತಿ ಮತ್ತು ಮಂಡಳಿಗಳು ಪ್ರತ್ಯೇಕವಾಗಿ ಕೆಇಬಿ ಮತ್ತು ಪೊಲೀಸ್ ಠಾಣೆಗಳಿಗೆ ತೆರಳಿ ಅನುಮತಿ ಪಡೆಯುವ ಅಗತ್ಯವಿಲ್ಲ. ಮುಖ್ಯಮಂತ್ರಿಗಳು ರಾಜ್ಯಾದ್ಯಂತ ಅವಕಾಶ ನೀಡಿದ್ದರಿಂದ ಯಾರೂ ಈಗ ಹೊಸದಾಗಿ ಅನುಮತಿ ಪಡೆಯುವ ಅಗತ್ಯವಿಲ್ಲ ಎಂದು ಹೇಳಿದರು.

ಮುಖ್ಯಮಂತ್ರಿಗಳು ಏಳು ದಿನಗಳ ಕಾಲ ಗಣೇಶ ಮೂರ್ತಿ ಪ್ರತಿಷ್ಛಾಪನೆಗೆ ಅವಕಾಶ ನೀಡಬೇಕು. ಮೆರವಣಿಗೆಗೆ ಅನುಮತಿ ನೀಡಬೇಕು. ಕೊರೊನಾ ಎರಡೂ ಲಸಿಕೆ ಪಡೆದವರಿಗೆ ಮೆರವಣಿಗೆಯಲ್ಲಿ ಪಾಲ್ಗೋಳ್ಳಲು ಅನುಮತಿ ನೀಡಬೇಕು. ಸಾಮಾಜಿಕ ಅಂತರ ಕಾಪಾಡಿಕೊಂಡು ಮೆರವಣಿಗೆ ನಡೆಸಲು ಅವಕಾಶ ನೀಡಬೇಕು. ಅಲ್ಲದೇ, ಯಾರು ಕೊರೊನಾ ಎರಡೂ ಡೋಸ್ ಲಸಿಕೆ ಹಾಕಿಕೊಂಡಿರುತ್ತಾರೋ ಅವರಿಗೆ ಮೆರವಣಿಗೆಯಲ್ಲಿ ಪಾಲ್ಗೋಳ್ಳಲು ಅವಕಾಶ ನೀಡಬೇಕು. ಯಾರು ಮಾಸ್ಕ್ ಧರಿಸುವುದಿಲ್ಲವೋ, ಸಾಮಾಜಿಕ ಅಂತರ ಕಾಪಾಡುವುದಿಲ್ಲವೋ ಮತ್ತು ಕೊರನಾ ಎರಡೂ ಡೋಸ್ ಲಸಿಕೆ ಹಾಕಿಸಿಕೊಳ್ಳದೇ ಮೆರವಣಿಗೆಯಲ್ಲಿ ಪಾಲ್ಗೋಲ್ಳುತ್ತಾರೋ ಅಂಥವರಿಗೆ ದಂಡ ವಿಧಿಸಬೇಕು. ಅಲ್ಲದೇ, ಕಾನೂನು ಪ್ರಕಾರ ಶಿಕ್ಷೆಯನ್ನೂ ನೀಡಬೇಕು ಎಂದು ಯತ್ನಾಳ ಹೇಳಿದರು.

ಮೂರು ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶದ ಕುರಿತು ಮಾತನಾಡಿದ ಅವರು, ಬೆಳಗಾವಿಯಲ್ಲಿ ಈಗ ಎಂ. ಇ. ಎಸ್. ವರ್ಚಸ್ಸು ಕಡಿಮೆಯಾಗುತ್ತಿದೆ. ಈ ಹಿಂದೆ ವಿಧಾನ ಸಭೆಯಲ್ಲಿ ಐದು ಜನ ಎಂ. ಇ. ಎಸ್. ಶಾಸಕರಿರುತ್ತಿದ್ದರು. ಈಗ ಆ ವರ್ಚಸ್ಸು ಕುಸಿದಿದೆ. ದೇಶದ ವಿಚಾರ ಬಂದಾಗ ಎಂಇಎಸ್ ಬೆಂಬಲಿಗರೂ ಕೂಡ ಬಿಜೆಪಿಯನ್ನು ಬೆಂಬಲಿಸುತ್ತಾರೆ ಎಂದು ಅವರು ತಿಳಿಸಿದರು.

ನಗರ ಪ್ರದೇಶಗಳು ಈ ಮುಂಚೆಯಿಂದಲೂ ಬಿಜೆಪಿಯ ಭದ್ರಕೋಟೆಗಳು. ಕಾರಣಾಂತರಗಳಿಂದ ಕಾಂಗ್ರೆಸ್, ಜೆಡಿಎಸ್ ಅಪವಿತ್ರ ಮೈತ್ರಿಯಿಂದ ಕೆಲವು ಕಡೆಗಳಲ್ಲಿ ಅಧಿಕಾರ ಕಳೆದುಕೊಂಡಿದ್ದೇವು. ಈಗ ಮತದಾರರು ಬೆಳಗಾವಿಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ನೀಡಿದ್ದಾರೆ. ಫಲಿತಾಂತ ಇದು ಪಕ್ಷದ ಜಯ. ಬೊಮ್ಮಾಯಿ ಅವರ ನೇತೃತ್ವಕ್ಕೆ ಸಿಕ್ಕ ಮೊದಲ ಜಯ ಇದಾಗಿದೆ ಎಂದು ಯತ್ನಾಳ ತಿಳಿಸಿದರು.

ಬೊಮ್ಮಾಯಿ ಅವರ ನೇತೃತ್ವದಲ್ಲಿಯೇ ಚುನಾವಣೆ ನಡೆಯಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿರುವುದನ್ನು ತಪ್ಪಾಗಿ ಅರ್ಥೈಸುವುದು ಬೇಡ. ಬೊಮ್ಮಾಯಿ, ರಾಜ್ಯಾಧ್ಯಕ್ಷರು ಎಲ್ಲರೂ ಸೇರಿಯೇ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ಅವರ ನೇತೃತ್ವದಲ್ಲಿಯೇ ಚುನಾವಣೆ ಎಂದು ಹೇಳಿರುವುದರ ಹಿಂದೆ ಅಲ್ಲಿಯವರೆಗೆ ಅವರು ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ಹೇಳಿರಬಹುದು. ಅದಕ್ಕೆ ಯಾಕೆ ನಾವು ಗೊಂದಲ ಮಾಡಿಕೊಳ್ಳಬೇಕು? ಅವರು ಇತ್ತೀಚೆಗೆ ಮುಖ್ಯಮಂತ್ರಿಯಾಗಿದ್ದಾರೆ. ಅವರಿಗೆ ಆಡಳಿತ ನಡೆಸಲು ಅವಕಾಶ ನೀಡಬೇಕು. ಯಾರು ಮುಖ್ಯಮಂತ್ರಿಯಾಗಿರುತ್ತಾರೋ ಅವರ ನೇತೃತ್ವದಲ್ಲಿಯೇ ಚುನಾವಣೆ ನಡೆಯುವುದು ಅಲಿಖಿತ ನಿಯಮವಾಗಿದೆ. ಅದರಲ್ಲಿ ತಪ್ಪೇನಿದೆ ಎಂದು ಯತ್ನಾಳ ಪ್ರಶ್ನಿಶಿದರು.

 

 

Leave a Reply

ಹೊಸ ಪೋಸ್ಟ್‌