ವಿಜಯಪುರ: ಬಸವರಾಜ ಬೊಮ್ಮಾಯಿ ಮತ್ತು ತಾವು 2004ರಲ್ಲಿ ಜನತಾ ದಳ ಬಿಟ್ಟು ಬಿಜೆಪಿಗೆ ಬರದಿದ್ದರೆ ಅಂದು ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಿರಲಿಲ್ಲ ಎಂದು ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಬಿಜೆಪಿಯಲ್ಲಿ ನಾಯಕತ್ವದ ಬಗ್ಗೆ ಅಪಸ್ವರ ಎತ್ತಿರುವ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ಕೇಂದ್ರ ಗೃಹ ಸಚಿವ ಅಮಿತ ಶಾ ಅವರು ಮುಂದಿನ ಚುನಾವಣೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿಯೇ ನಡೆಯಲಿದೆ ಎಂದು ಹೇಳಿದ್ದಾರೆ. ಆದರೆ, ಇದಕ್ಕೆ ಬಿಜೆಪಿಯ ಕೆಲವು ಜನ ನಾಯಕರು ಮತ್ತು ಮಂತ್ರಿಗಳು ಅಪಸ್ವರ ಎತ್ತಿದ್ದಾರೆ. ಇದು ಸರಿಯಲ್ಲ ಎಂದು ಹೇಳಿದರು.
ಜನತಾದಳದಿಂದ ಬಂದಿರುವ ನಾಯಕರಾದ ಬಸವರಾಜ ಬೊಮ್ಮಾಯಿ ಮತ್ತು ನಾನು ಅಧಿಕಾರಕ್ಕಾಗಿ ಬಿಜೆಪಿ ಸೇರಿಲ್ಲ. ಅಂಥ ಭಾವನೆಯೂ ನಮ್ಮಲ್ಲಿಲ್ಲ. ನಾನು ಅಧಿಕಾರಕ್ಕಾಗಿ ಬಿಜೆಪಿಗೆ ಬಂದಿದ್ದರೆ ನನಗೆ ಸಚಿವ ಸ್ಥಾನ ನೀಡದಿದ್ದಾಗ ಬೈಯ್ಯುತ್ತ ತಿರುಗಾಡಬೇಕಿತ್ತು. ಮೂರು ವರ್ಷ ನನ್ನನ್ನು ಕೇಂದ್ರದಲ್ಲಿ ಸಚಿವನ್ನಾಗಿ ಮಾಡಿದರು. ನಂತರ ಇತ್ತೀಚೆಗೆ ನಡೆದ ಸಚಿವ ಸಂಪುಟ ವಿಸ್ತರಣೆಯಲ್ಲಿ ನನಗೆ ಅವಕಾಶ ನೀಡದೇ ನಮ್ಮದೇ ಸಮಾಜದ ಬೇರೆಯವರಿಗೆ ಸಚಿವ ಸ್ಥಾನ ನೀಡಿದರು. ಆದರೆ, ನಾನು ಏನನ್ನೂ ಹೇಳಿಲ್ಲ. ನಾವು ಸಿದ್ಧಾಂತಗಳ ಮೇಲೆ ಬಿಜೆಪಿಗೆ ಸೇರಿದ್ದೇವೆ. ಅಧಿಕಾರದ ದಾಹ ನಮಗಿಲ್ಲ. ಈ ಬಗ್ಗೆ ಬಿಜೆಪಿ ನಾಯಕರು ಎಚ್ಚರಿಕೆ ವಹಿಸಬೇಕು ಎಂದು ಅವರು ಹೇಳಿದರು.
ಬೊಮ್ಮಾಯಿ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸುವ ವಿಚಾರದಲ್ಲಿ ಬಿಜೆಪಿ ನಾಯಕರು ಅಸಮಾಧಾನ ವ್ಯಕ್ತಪಡಿಸಿರುವುದು ಸರಿಯಲ್ಲ. ನನ್ನ ದೇಶದ ಗೃಹ ಸಚಿವ ಅಮಿತ ಶಾ ಅವರು ರಾಜ್ಯಕ್ಕೆ ಬಂದಾಗ ಬೊಮ್ಮಾಯಿ ಅವರ ಬಗ್ಗೆ ಬಹಳ ಪ್ರಶಂಸೆ ಮಾಡಿದ್ದಾರೆ. ಅಲ್ಲದೇ, ಬೊಮ್ಮಾಯಿ ಅವರ ನೇತೃತ್ವದಲ್ಲಿಯೇ ಚುನಾವಣೆ ನಡೆಯುತ್ತದೆ ಎಂದು ಹೇಳಿದ್ದಾರೆ. ನಮ್ಮ ನಾಯಕರಾದ ಯಡಿಯೂರಪ್ಪ ಅವರ ಆಡಳಿತದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ಅಮಿತ ಶಾ ಅವರ ಮಾತುಗಳ ಬಗ್ಗೆ ಯಾಕೆ ಅಸಮಾಧಾನ ವ್ಯಕ್ತಪಡಿಬೇಕಿತ್ತು ಎಂದು ಪ್ರಶ್ನಿಸಿದರು.
ಬಸವರಾಜ ಬೊಮ್ಮಾಯಿ ಅಥವಾ ರಮೇಶ ಜಿಗಜಿಣಗಿ ಅಧಿಕಾರ ನೋಡಿ ಇವರ ಜೊತೆ ಬಂದಿಲ್ಲ. ಪಕ್ಷದ ಸಿದ್ಧಾಂತ ನೋಡಿ ಅವರ ಪಕ್ಷಕ್ಕೆ ಬಂದಿದ್ದೇವೆ. ಜನತಾದಳದ ಹಿನ್ನೆಲೆ ಇರುವ ಎಲ್ಲ ನಾಯಕರು ಕೇವಲ ಅಧಿಕಾರದ ಸಲುವಾಗಿ ಮುಖ್ಯಮಂತ್ರಿಯಾಗಬೇಕು. ಕೇಂದ್ರ ಸಚಿವರಾಗಬೇಕು ಎಂಬ ಉದ್ದೇಶದಿಂದ ಬಿಜೆಪಿಗೆ ಬರಲಿಲ್ಲ. ಪಕ್ಷದ ಸಿದ್ಧಾಂತ ವಾಜಪೇಯಿ ಅವರ ನಡೆ, ಅಡ್ವಾಣಿ ಅವರ ನಡೆ ನೋಡಿಕೊಂಡು ನಾವು ಬಿಜೆಪಿಗೆ ಸೇರಿದ್ದೇವೆ ಎಂದು ಅವರು ತಿಳಿಸಿದರು.
ಈಗ ಬಿಜೆಪಿಯಲ್ಲಿ ಮತ್ತು ಸರಕಾರದಲ್ಲಿ ನಾವು ಭಾಗಿಯಾಗಿದ್ದೇವೆ. ಈಗ ನಾವು ಮೂಲ ಬಿಜೆಪಿಗರಲ್ಲ ಎಂಬ ಭಾವನೆ ಕೆಲವು ಬಿಜೆಪಿ ನಾಯಕರಲ್ಲಿದ್ದರೇ ಅದು ತಪ್ಪು. ನಾವೆಲ್ಲ ಬಿಜೆಪಿಗೆ ಬಂದು 17 ವರ್ಷಗಳಾಗಿವೆ. ನಾವು ಬಿಜೆಪಿಯವರಲ್ಲವೇ? ಕೇವಲ ಸಂಘ-ಪರಿವಾರದಲ್ಲಿದ್ದವರು ಮಾತ್ರ ಬಿಜೆಪಿಯವರಾ? ಎಂದು ಪ್ರಶ್ನಿಸಿದ ಅವರು, ಹಾಗೆ ಆಗಲು ಸಾಧ್ಯವಿಲ್ಲ. ಆ ಭಾವನೆಯನ್ನೂ ಯಾರೂ ಇಟ್ಟುಕೊಳ್ಳಬಾರದು. ಇದು ಸರಿಯೂ ಅಲ್ಲ. ಈವರೆಗೆ ಆಗಿದ್ದು ಆಯ್ತು. ಇನ್ನು ಮುಂದಾದರೂ ವಕ್ರದೃಷ್ಠಿಕೋನ ಇಟ್ಟುಕೊಳ್ಳಬಾರದು. ಇದು ಯಾವ ಪಕ್ಷಕ್ಕೂ ಒಳ್ಳೆಯಲದ್ದಲ್ಲ ಎಂದು ಸಲಹೆ ನೀಡಿದರು.
ಬಿಜೆಪಿ ನಾಯಕರು ವರ್ತನೆ ಬಿಡದಿದ್ದರೆ ಕಾಂಗ್ರೆಸ್ಸಿಗಾದ ಗತಿ ಬಿಜೆಪಿ ಬರಲಿದೆ
ಈ ಹಿಂದೆ ಕಾಂಗ್ರೆಸ್ಸಿನವರು ಸಿದ್ಧರಾಮಯ್ಯನವರ ಮೇಲೆ ವಕ್ರದೃಷ್ಠಿ ಇಟ್ಟುಕೊಂಡಿದ್ದರಿಂದಲೇ ಅವರ ಸರಕಾರ ಹಾಳಾಗಿ ಹೋಗಿದೆ ಎಂದು ಹೇಳಿದ ರಮೇಶ ಜಿಗಜಿಣಗಿ, ಈ ಎಚ್ಚರಿಕೆಯ ಭಾವನೆ ನನ್ನ ಬಿಜೆಪಿಯ ನಾಯಕರಲ್ಲಿದ್ದರೆ ಸಾಕು ಎಂದು ಎಚ್ಚರಿಕೆ ನೀಡಿದರು.
ಮೊನ್ನೆಯಿಂದ ನಾನು ಬಿಜೆಪಿಯ ಕೆಲವು ಮುಖಂಡರು ಮತ್ತು ಸಚಿವರ ಹೇಳಿಕೆಗಳನ್ನು ಗಮನಿಸಿದ್ದೇನೆ. ಇದು ಸರಿ ಎನಿಸುತ್ತಿಲ್ಲ. ಹೀಗಾಗಿ ನಾನು ಕಿವಿಮಾತು ಹೇಳಲು ಕಾಯುತ್ತಿದ್ದೆ ಎಂದು ಇದೇ ಮೊದಲ ಬಾರಿಗೆ ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಸಿಕ್ಕಾಪಟ್ಟೆ ಖಡಕ್ಕಾಗಿಯೇ ಎಚ್ಚರಿಕೆ ನೀಡಿದ್ದಾರೆ.