ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಗೆ ಭೇಟಿ ನೀಡಲಿದ್ದು, ನೀಡಿ ಹಣಕಾಸು, ಲೋಕೋಪಯೋಗಿ ಸಚಿವರನ್ನು ಭೇಟಿಯಾಗಲಿರುವುದಾಗಿ ತಿಳಿಸಿದರು.
ಬೆಂಗಳೂರಿನಲ್ಲಿ ತಮ್ಮ ನಿವಾಸದ ಬಳಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಎರಡು ದಿನಗಳ ದೆಹಲಿ ಪ್ರವಾಸದಲ್ಲಿ ಕೇಂದ್ರ ಸಚಿವರಾದ ನಿತಿನ ಗಡ್ಕರಿ ಅವರನ್ನು ಭೇಟಿಯಾಗಿ ಲೋಕೋಪಯೋಗಿ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಸ್ತಾವನೆಗಳ ಬಗ್ಗೆ ಚರ್ಚೆ ನಡೆಸಲಿರುವುದಾಗಿ ತಿಳಿಸಿದರು.
ವಸತಿ ಹಾಗೂ ನಗರಾಭಿವೃದ್ಧಿ ಸಚಿವರನ್ನೂ ಭೇಟಿಯಾಗುತ್ತೇನೆ. ರಾಜ್ಯದ ನಾನಾ ಪ್ರಸ್ತಾವನೆಗಳ ಬಗ್ಗೆ ಚರ್ಚೆ ನಡೆಸಿದ್ದೇನೆ. ಹಣಕಾಸು ಸಚಿವರ ಬಳಿ ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಅನುದಾನ ಬಿಡುಗಡೆ ಸಲುವಾಗಿ ದೆಹಲಿಗೆ ತೆರಳಲಿರುವುದಾಗಿ ಹೇಳಿದರು.
ವಸತಿ ಮತ್ತು ನಗರಾಭಿವೃದ್ಧಿ ಸಂಬಂಧಿಸಿದಂತೆ ಕೇಂದ್ರ ಸಚಿವರು ಬೆಂಗಳೂರಿಗೆ ಬಂದಾಗ ಹಲವಾರು ಯೋಜನೆಗಳ ಬಗ್ಗೆ ಚರ್ಚೆಯಾಗಿತ್ತು. ನಗರ ವಸತಿ ಯೋಜನೆ ಹಾಗೂ ಮೆಟ್ರೋ ವಿಸ್ತರಣೆ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಅವರು ತಿಳಿಸಿದರು.
ನಿಪಾ ವೈರಸ್ ನಿಯಂತ್ರಣಕ್ಕೆ ಕಟ್ಟೆಚ್ಚರ
ಈ ಮಧ್ಯೆ, ನಿಫಾ ವೈರಾಣು ಕುರಿತು ಸಂಪೂರ್ಣ ಮಾಹಿತಿ ಪಡೆಯಲು ತಜ್ಞರಿಗೆ ಸೂಚಿಸಲಾಗಿದೆ. ಕೇರಳ ಗಡಿಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ನಿಗಾ ಇಡಲಾಗಿದೆ ಎಂದು ಅವರು ತಿಳಿಸಿದರು.
ಬೆಂಗಳೂರು ನಗರದಲ್ಲಿ ಗುಂಡಿಗಳನ್ನು ಮುಚ್ಚುವ ಸಂಬಂಧ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಲು ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಿಎಂ ತಿಳಿಸಿದರು.
ಸಚಿವ ಸಂಪುಟ ವಿಸ್ತರಣೆ ವಿಚಾರ
ಸಚಿವ ಸಂಪುಟ ವಿಸ್ತರಣೆ ಸಂಬಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಅವರನ್ನು ಭೇಟಿಯಾಗುವ ವಿಚಾರವಿಲ್ಲ. ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಅವರ ಪುತ್ರಿಯ ವಿವಾಹ ಆರತಕ್ಷತೆ ಕಾರ್ಯಕ್ರಮದಲ್ಲಿ ಭೇಟಿಯಾದರೆ ಮಾತನಾಡುತ್ತೇನೆ ಎಂದು ತಿಳಿಸಿದರು.
ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಹಿಡಿಯುತ್ತೇವೆ
ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್ ಜೊತೆಗೂಡಿ ಅಧಿಕಾರ ಹಿಡಿಯುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಿನ್ನೆ ಜೆಡಿಎಸ್ ನಾಯಕರ ನಿಯೋಗ ತಮ್ಮನ್ನು ಬೇರೆ ವಿಚಾರಗಳ ಕುರಿತು ಭೇಟಿ ಮಾಡಿ ಚರ್ಚೆ ನಡೆಸಿದೆ. ಈ ಸಂದರ್ಭದಲ್ಲಿ ಒಟ್ಟಾಗಿ ಹೋಗುವ ಕುರಿತು ಒಲವು ವ್ಯಕ್ತವಾಗಿದೆ. ಅವರೂ ಕೂಡ ಕಲಬುರಗಿ ಸ್ಥಳೀಯ ನಾಯಕರ ಜೊತೆ ಸ್ಥಳಿಯವಾಗಿ ಚರ್ಚಿಸಿ ತೀರ್ಮಾನಿಸುವುದಾಗಿ ತಿಳಿಸಿದ್ದಾರೆ. ಒಂದಾಗಲಿ ಕೆಲಸ ಮಾಡಲು ಅವರು ಒಲವು ತೋರಿಸಿದ್ದಾರೆ. ಹೀಗಾಗಿ ಜೆಡಿಎಸ್ ಮತ್ತು ಬಿಜೆಪಿ ಸೇರಿ ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಹಿಡಿಯುತ್ತೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.