ಕಂದು ರೋಗ ಲಸಿಕಾ ಕಾರ್ಯಕ್ರಮದಿಂದ ಜಾನುವಾರುಗಳು, ರೈತರಿಗೆ ಹೆಚ್ಚು ಅನುಕೂಲ- ಸಂಸದ ರಮೇಶ ಜಿಗಜಿಣಗಿ

ವಿಜಯಪುರ: ಕರುಗಳ ಕಂದು ರೋಗ ಲಸಿಕಾ ಕಾರ್ಯಕ್ರಮ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು ಇದರಿಂದ ರೈತರಿಗೆ ಅದರಲ್ಲೂ ಬಡ ರೈತರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಹೇಳಿದರು.

ವಿಜಯಪುರ ನಗರದ ಭೂತನಾಳ ಕೆರೆಯ ಹತ್ತಿರದ ಗೋಶಾಲೆಯಲ್ಲಿ ಪಶು ಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಆಯೋಜಿಸಲಾಗಿದ್ದ ಆಕಳು ಮತ್ತು ಎಮ್ಮೆಗಳ ಹೆಣ್ಣು ಕರುಗಳ ರಾಷ್ಟ್ರೀಯ ಕಂದು ರೋಗ ನಿಯಂತ್ರಣ ಕಾರ್ಯಕ್ರಮವನ್ನು ಕರುವಿಗೆ ಪೂಜೆ ಸಲ್ಲಿಸಿ, ಲಸಿಕೆ ಹಾಕುವ ಮೂಲಕ ಸಾಂಕೇತಿಕವಾಗಿ ಉದ್ಘಾಟಿಸಿ ಅವರು ಮಾತನಾಡಿದರು.

ಜಾಗತಿಕ ಹಾಲು ಉತ್ಪಾದನೆ ಮತ್ತು ಡೈರಿ ಉದ್ಯಮದಲ್ಲಿ ರಾಷ್ಟ್ರೀಯ ಕೃತಕ ಗರ್ಭಧಾರಣೆ ಕಾರ್ಯಕ್ರಮ ಪ್ರಮುಖವಾಗಿದೆ. ರೈತರ ಮನೆಬಾಗಿಲಿಗೆ ತೆರಳಿ ದೇಶೀಯ ಹಾಗೂ ವಿದೇಶಿಯ ವೀರ್ಯದೊಂದಿಗೆ ದೇಶಿಯ ರಾಸುಗಳನ್ನು ಉಚಿತವಾಗಿ ಉನ್ನತೀಕರಿಸಲಾಗುತ್ತದೆ. ಈಗಾಗಲೇ ದೇಶದ 604 ಜಿಲ್ಲೆಗಳಲ್ಲಿ 6 ಕೋಟಿ ರೈತರಿಗೆ ಇದರಿಂದ ಅನುಕೂಲವಾಗಿದೆ ಎಂದು ಅವರು ತಿಳಿಸಿದರು.

ಕಂದು ರೋಗ ಲಸಿಕೆ ಕಾರ್ಯಕ್ರಮದ ಪೋಸ್ಟರ್ ನ್ನು ಸಂಸದ ರಮೇಶ ಜಿಗಜಿಣಗಿ ಬಿಡುಗಡೆ ಮಾಡಿದರು.

ಕಂದು ರೋಗ ಲಸಿಕಾ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ರಾಜ್ಯವನ್ನು ಸಂಪೂರ್ಣ ರೋಗಮುಕ್ತ ಮಾಡುವ ಪ್ರಯತ್ನದಲ್ಲಿ ನಾವಿದ್ದೇವೆ. ವಿಜಯಪುರ ಜಿಲ್ಲೆಯಲ್ಲಿ 37000 ಹೆಣ್ಣು ಕರುಗಳಿಗೆ ಉಚಿತವಾಗಿ ಲಸಿಕೆ ಹಾಕಲಾಗುವುದು. ರೈತರಿಗೆ ಆರ್ಥಿಕ ನಷ್ಟವುಂಟು ಮಾಡುವ ಹಾಗೂ ಪ್ರಮುಖ ಪ್ರಾಣಿ ಜನ್ಯ ಮಾನವ ರೋಗವಾದ ಕಂದು ರೋಗದಿಂದ ರಾಜ್ಯವನ್ನು ಮುಕ್ತ ಮಾಡುವಲ್ಲಿ ನಾವು ಹೆಜ್ಜೆ ಇಟ್ಟಿದ್ದೇವೆ ಎಂದು ಅವರು ತಿಳಿಸಿದರು.

ರಾಷ್ಟ್ರೀಯ ಕಾರ್ಯಕ್ರಮವಾದ ಕಾಲು ಮತ್ತು ಬಾಯಿ ಬೇನೆ ರೋಗದ ವಿರುದ್ದ ವಿಜಯಪುರ ಜಿಲ್ಲೆಯಲ್ಲಿರುವ ಸುಮಾರು 3.75 ಲಕ್ಷ ದನಕರುಗಳಿಗೆ ವರ್ಷಕ್ಕೆ ಎರಡು ಬಾರಿ ಉಚಿತವಾಗಿ ಲಸಿಕೆ ಹಾಕಲಾಗುವುದು. ದೇಶದ ಎಲ್ಲ ರಾಸುಗಳಿಗೆ ಗುರುತಿನ ಕಿವಿಯೋಲೆ ಹಾಕುವದರಲ್ಲಿ ಪಶುಪಾಲನಾ ಇಲಾಖೆ ಯಶಸ್ವಿ ಹಾದಿಯಲ್ಲಿದೆ. ಕಿವಿಯೋಲೆ ಅಳವಡಿಸಿದಕ್ಕೆ ಕೇಂದ್ರ ಸರಕಾರದ ವತಿಯಿಂದ ಗೌರವ ಧನವನ್ನು ನೀಡಲಾಗುತ್ತಿದೆ. ಅಲ್ಲದೇ, ಕೃತಕ ಗರ್ಭಧಾರಣೆ ಕಾರ್ಯಕರ್ತರು ಹಾಗೂ ಲಸಿಕಾದಾರರು ಜಾನುವಾರುಗಳಿಗೆ ಕಿವಿಯೋಲೆ ಹಾಕಿಯೇ ಕೃತಕ ಗರ್ಭಧಾರಣೆ ಮತ್ತು ಲಸಿಕೆ ಹಾಕಿಸಬೇಕು ಎಂದು ರಮೇಶ ಜಿಗಜಿಣಗಿ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪಶುಪಾಲನೆ, ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ‌. ‌ಪ್ರಾಣೇಶ ಜಾಗೀರದಾ, ನಮ್ಮ ರಾಜ್ಯದಲ್ಲಿ 2021-22ನೇ ವರ್ಷದಲ್ಲಿ ಕಂದು ರೋಗ ನಿಯಂತ್ರಣ ಯೋಜನೆಯಡಿಯಲ್ಲಿ ಕಂದು ರೋಗ ಲಸಿಕಾ ಕಾರ್ಯಕ್ರಮವನ್ನು ಆಯೋಜಿಸಿ ಸಂಪೂರ್ಣ ರೋಗ ಮುಕ್ತ ಮಾಡುವ ಪ್ರಯತ್ನದಲ್ಲಿ ಇಲಾಖೆಯೊಂದಿಗೆ ರೈತರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಎಂ. ಸಿ. ಅರಕೇರಿ, ಪಾಲಿಕ್ಲಿನಿಕ ಉಪನಿರ್ದೇಶಕ ಡಾ. ಎಸ್. ಪಿ. ಕುಂಬಾರ, ಹಿರಿಯ ಪಶುವೈದ್ಯಾಧಿಕಾರಿ ಡಾ. ಮುತ್ತಣ್ಣಗೌಡ ಬಿರಾದಾರ, ಹಿರಿಯ ಪಶು ವೈದ್ಯಾಧಿಕಾರಿಗಳು ಡಾ. ರಮೇಶ ರಾಠೋಡ. ಡಾ. ಪಂಚಾಕ್ಷರಿ, ಎ. ಆರ್‌. ಸೂರ್ಯವಂಶಿ, ನಮ್ರತಾ ರಾಠೋಡ, ಭಾಗ್ಯಶ್ರೀ, ಆನಂo, ಬುರುಡ, ಜೀವನ್, ವಿನಾಯಕ ಗುಡದಿನ್ನಿ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌