ವಿಜಯಪುರ-ಸಂಕೇಶ್ವರ ರಾಷ್ಟ್ರೀಯ ಹೆದ್ದಾರಿ ಸುಧಾರಣೆ ಯೋಜನೆ ವಿಸ್ತರಣೆ ಸೇರಿ ನಾನಾ ಯೋಜನೆಗಳಿಗೆ ಆಗ್ರಹ- ನವದೆಹಲಿಯಲ್ಲಿ ಕೇಂದ್ರ ಸಚಿವರೊಂದಿಗೆ ಸಿಎಂ ಚರ್ಚೆ

ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿ ಪ್ರವಾಸದಲ್ಲಿದ್ದು, ಕೇಂದ್ರ ಭೂಸಾರಿಗೆ, ರಾಷ್ಟ್ರೀಯ ಹೆದ್ದಾರಿ ಮತ್ತು ಎಂಎಸ್‌ಎಂಇ ಸಚಿವ ನಿತೀನ ಗಡ್ಕರಿ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿ ಆಗಬೇಕಿರುವ ಕಾಮಗಾರಿಗಳಿಗೆ ಆದ್ಯತೆ ನೀಡುವುದು ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದ್ದಾರೆ.

ಈ ಕುರಿತು ನಿತೀನ ಗಡ್ಕರಿ ಅವರೊಂದಿಗೆ ಚರ್ಚೆ ನಡೆಸಿರುವ ಅವರು, ವಿಜಯಪುರ- ಸಂಕೇಶ್ವರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ NH-548B ಸುಧಾರಣೆ ಯೋಜನೆಯನ್ನು ಈಗ 80 ಕಿ. ಮೀ. ಗೆ ಸೀಮಿತಗೊಳಿಸಿ ರೂ. 497.01 ಕೋ. ವೆಚ್ಚದ ಟೆಂಡರ್ ಕರೆಯಲಾಗಿದೆ. Hybrid Annuity Mode(ಸರಕಾರ ಮತ್ತು ಖಾಸಗಿ ಪಾಲುದಾರಿಕೆ)ಯಲ್ಲಿ ನಡೆಯಲಿರುವ ಈ ಕಾಮಗಾರಿಯನ್ನು 80 ಕಿ. ಮೀ. ಯಿಂದ 168.80 ಕಿ. ಮೀ. ವರೆಗೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಆಗ್ರಹಿಸಿದರು.

ಕೇಂದ್ರ ಸಚಿವ ನಿತೀನ ಗಡ್ಕರಿ ಅವರನ್ನು ಭೇಟಿ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ರಾಜ್ಯ ಸಚಿವರು.

ಈ ಕಾಮಗಾರಿಯಲ್ಲಿ ಸರಕಾರ ಶೇ. 40 ರಷ್ಟು ಮತ್ತು ಖಾಸಗಿಯವರು ಶೇ. 60 ರಷ್ಟು ಹಣ ವಿನಿಯೋಗಿಸಬೇಕಾಗುತ್ತದೆ. ಅಲ್ಲದೇ, 15 ವರ್ಷ ಟೋಲ್ ಸಂಗ್ರಹಿಸಿ ಪ್ರತಿ ವರ್ಷ ಎರಡು ಬಾರಿ ಖಾಸಗಿದಾರರು ಪಾವತಿಸಿರುವ ಹಣವನ್ನು ಸರಕಾರ ಅವರಿಗೆ ಹಿಂದಿರುಗಿಸುವ ಹೈಬ್ರಿಡ್ ಆ್ಯನ್ಯೂಟಿ ಮೋಡ್ ಯೋಜನೆಯಲ್ಲಿ ಅವಕಾಶವಿದೆ.

ಬೆಂಗಳೂರು ಉಪನಗರ (ಸ್ಯಾಟಲೈಟ್)ವರ್ತುಲ ರಸ್ತೆ ಯೋಜನೆ ಶೀಘ್ರವೇ ಕೈಗೆತ್ತಿಕೊಳ್ಳಲು ಕೇಂದ್ರಕ್ಕೆ ಮುಖ್ಯಮಂತ್ರಿ ಮನವಿ

ಇದೇ ವೇಳೆ ಬೆಂಗಳೂರು ನಗರ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಪೂರಕವಾದ ಉಪ ನಗರ(ಸ್ಯಾಟಲೈಟ್) ವರ್ತುಲ ರಸ್ತೆ ಯೋಜನೆಯನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆ ನೀಡುವಂತೆ ಸಿಎಂ ಕೇಂದ್ರ ಸಚಿವ ನಿತೀನ್ ಗಡ್ಕರಿ ಅವರಿಗೆ ಮನವಿ ಮಾಡಿದರು ಈ ಹಿಂದೆ ನೀಡಿದ ಭರವಸೆಯಂತೆ ರಾಜ್ಯ ಸರಕಾರವು ಭೂಸ್ವಾಧೀನ ವೆಚ್ಚಕ್ಕಾಗಿ ರೂ. 1560 ಕೋ, ಗಳ ಶೇ.30 ರಷ್ಟು ಹಣವನ್ನು ಭರಿಸಲು ಸಮ್ಮತಿ ಪತ್ರ ನೀಡಿದೆ. ಈ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಕೂಡಲೇ ಕೈಗೆತ್ತಿಕೊಳ್ಳುವಂತೆ ಮುಖ್ಯಮಂತ್ರಿಗಳು ಮನವಿ ಮಾಡಿದರು.

ಕೇಂದ್ರ ಸಚಿವ ನಿತೀನ ಗಡ್ಕರಿ ಜೊತೆ ಚರ್ಚೆ ನಡೆಸಿದ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ರಾಜ್ಯ ಸಚಿವರು.

ಭೇಟಿಯ ವೇಳೆ ರಾಜ್ಯದಲ್ಲಿ ಅತಿವೃಷ್ಟಿಯಿಂದಾಗಿ ಪ್ರವಾಹ ಹಾಗೂ ಭೂಕುಸಿತ ಸಂಭವಿಸಿದ್ದರಿಂದ ರಾಷ್ಟ್ರೀಯ ಹೆದ್ದಾರಿಗಳು ಭಾರಿ ಪ್ರಮಾಣದಲ್ಲಿ ಹಾನಿಗೊಳಗಾಗಿವೆ. ಅವುಗಳ ದುರಸ್ತಿಗೆ ರೂ. 184.85 ಕೋ. ಹಣವನ್ನು ಶೀಘ್ರವೇ ಬಿಡುಗಡೆ ಮಾಡುವಂತೆ ಮನವಿ ಅವರು ಮನವಿ ಮಾಡಿದರು. ಈ ಸಂದರ್ಭದಲ್ಲಿ ಶಿರಾಡಿ ಘಾಟಿಯಲ್ಲಿ ಟನೆಲ್ ಬೈಪಾಸ್ ನಿರ್ಮಾಣ ಕುರಿತೂ ಕೂಡ ಚರ್ಚೆ ನಡೆಸಲಾಯಿತು.

ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಉನ್ನತೀಕರಿಸಲು ತಾತ್ವಿಕ ಅನುಮೋದನೆ ನೀಡಿರುವ ನಾಲ್ಕು ಹೆದ್ದಾರಿಗಳ ಕುರಿತು ಡಿಪಿಆರ್ ಸಿದ್ಧಪಡಿಸಿ ಕೇಂದ್ರಕ್ಕೆ ಸಲ್ಲಿಸಲಾಗಿದ್ದು, ಅವುಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಘೋಷಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಸಚಿವ ನಿತೀನ ಗಡ್ಕರಿ ಅವರಿಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವ ಸಿ. ಸಿ. ಪಾಟೀಲ, ಕಂದಾಯ ಸಚಿವ ಆರ್. ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.

ಕೇಂದ್ರ ಸಚಿವ ರಾಜೀವ ಚಂದ್ರಶೇಖರ ಭೇಟಿ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಸಚಿವರು.
ಕೇಂದ್ರ ಕೌಶಲ್ಯಾಭಿವೃದ್ಧಿ ಇಲಾಖೆ ಸಹಾಯಕ ಸಚಿವ ರಾಜೀವ ಚಂದ್ರಶೇಖರ ಬೇಟಿ

ಇದಕ್ಕೂ ಮುಂಚೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರು ನವದೆಹಲಿಯಲ್ಲಿ ಕೇಂದ್ರ ಕೌಶಲ್ಯ ಅಭಿವೃದ್ಧಿ ಖಾತೆ ರಾಜ್ಯ ಸಚಿವರಾದ ರಾಜೀವ್ ಚಂದ್ರಶೇಖರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಕಂದಾಯ ಸಚಿವ ಆರ್. ಅಶೋಕ, ಲೋಕೋಪಯೋಗಿ ಸಚಿವ ಸಿ. ಸಿ. ಪಾಟೀಲ, ಹಾವೇರಿ ಬಿಜೆಪಿ ಸಂಸದ ಶಿವಕುಮಾರ ಉದಾಸಿ ಉಪಸ್ಥಿತರಿದ್ದರು.

ಕೇಂದ್ರ ಸಚಿವ ಹರದೀಪಸಿಂಗ್ ಪುರಿ ಅವರನ್ನು ಭೇಟಿ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಸಚಿವರು.
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರದೀಪಸಿಂಗ್ ಪುರಿ ಭೇಟಿ

ಇದೇ ವೇಳೆ, ಸಿಎಂ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರದೀಪಸಿಂಗ್ ಪುರಿ ಅವರನ್ನು ಭೇಟಿಯಾಗಿ ನಾನಾ ವಿಷಯಗಳ ಕುರಿತು ಚರ್ಚಿಸಿದರು.

ಈ ಸಂದರ್ಭದಲ್ಲಿ ವಸತಿ ಸಚಿವ ವಿ. ಸೋಮಣ್ಣ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ, ಅಪರ ಮುಖ್ಯ ಕಾರ್ಯದರ್ಶಿ ಅಮಿತಾ ಪ್ರಸಾದ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ ಉಪಸ್ಥಿತರಿದ್ದರು.

ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ ಭೇಟಿ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.
ಕೇಂದ್ರ ಬಂದರು, ಹಡಗು, ಜಲಸಾರಿಗೆ ಮತ್ತು ಆಯುಷ್ ಸಚಿವ ಸರ್ಬಾನಂದ ಸೋನೋವಾಲ ಭೇಟಿ

ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕೇಂದ್ರ ಬಂದರು, ಹಡಗು, ಜಲಸಾರಿಗೆ ಮತ್ತು ಆಯುಷ್ ಸಚಿವ ಸರ್ಬಾನಂದ ಸೋನೋವಾಲ ಅವರನ್ನು ಭೇಟಿಯಾಗಿ ರಾಜ್ಯಕ್ಕೆ ಸಂಬಂಧಿಸಿದ ನಾನಾ ಅಭಿವದ್ಧಿ ಯೋಜನೆಗಳ ವಿಷಯಗಳ ಕುರಿತು ಚರ್ಚಿಸಿದರು.

ಕರ್ನಾಟಕ ಭವನ ನೂತನ ಕಟ್ಟಡ ಕಾಮಗಾರಿ ಪರಿಶೀಲಿಸಿದ ಮುಖ್ಸಮಂತ್ರಿ ಬಸವರಾಜ ಬೊಮ್ಮಾಯಿ.
ಕರ್ನಾಟಕ ಭವನ ನೂತನ ಕಟ್ಟಡ ಕಾಮಗಾರಿ ಪರಿಶೀಲಿಸಿದ ಸಿಎಂ

ಇದೇ ವೇಳೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನವದೆಹಲಿಯಲ್ಲಿ ನಿರ್ಮಾಣವಾಗುತ್ತಿರುವ ಕರ್ನಾಟಕ ಭವನದ ನೂತನ ಕಟ್ಟಡದ ಕಾಮಗಾರಿ ಪ್ರಗತಿಯನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವ ಸಿ. ಸಿ. ಪಾಟೀಲ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ ುಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌