ಅಂತಾರಾಜ್ಯ ಕಳ್ಳರ ಹೆಡೆಮುರಿ ಕಟ್ಟಿದ ಬಸವ ನಾಡಿನ ಪೊಲೀಸರು

ವಿಜಯಪುರ: ಅವರದೇ ಆದ ಗ್ಯಾಂಗ್ ನ್ನು ಕಟ್ಟಿಕೊಂಡು ರಾಜ್ಯದ ನಾನಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳ್ಳತನ ನಡೆಸಿ ತಲೆ ಮರೆಸಿಕೊಂಡಿದ್ದ ಐನಾತಿ ಕಳ್ಳರ ಗುಂಪೊಂದನ್ನು ಬಸವ ನಾಡಿನ ಪೊಲೀಸುರ ಹೆಡೆಮುರಿ ಕಟ್ಟಿದ್ದಾರೆ.

ವಿಜಯಪುರದಲ್ಲಿ ಈ ವಿಷಯ ತಿಳಿಸಿದ ಎಸ್ಪಿ ಎಚ್. ಡಿ. ಆನಂದ ಕುಮಾರ, ವಿಜಯಪುರ ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಹಲವು ಮನೆಗಳ ಕಳ್ಳತನ ಪ್ರಕರಣಗಳು ವರದಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಕಳ್ಳರ ಕಾಟ ತಡೆಯಲು ಅವರ ಹೆಡೆಮುರಿ ಕಟ್ಟಲು ಪ್ರತ್ಯೇಕವಾದ ತಂಡವನ್ನು ರಚಿಸಲಾಗಿತ್ತು. ಈ ತಂಡ ಈಗ ಏಳು ಜನ ಅಂತಾರಾಜ್ಯ ಕಳ್ಳರನ್ನು ಕದ್ದ ವಸ್ತುಗಳ ಸಮೇತ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಮಹಾರಾಷ್ಟ್ರದ ಸೋಲಾಪುರ, ಕೊಲ್ಹಾಪುರ, ಸಾಂಗಲಿ, ಮೀರಜ, ಬಾಗಲಕೋಟೆ, ಯಾದಗಿರಿ, ಕಲಬುರಗಿ ಜಿಲ್ಲೆಗಳಲ್ಲಿ ತನಿಖೆ ನಡೆಸಿದ ವಿಜಯಪುರ ಪೊಲೀಸ್ ಅಧಿಕಾರಿಗಳ ತಂಡ ಏಳು ಜನ ಅಂತಾರಾಜ್ಯ ಕುಖ್ಯಾತ ಮನೆಗಳ್ಳತನ, ಎಟಿಎಂ ಹಾಗೂ ಬಂಗಾರದ ಅಂಗಡಿ ಕಳ್ಳತನದಲ್ಲಿ ತೊಡಗಿದ್ದ ಆರೋಪಿಗಳನ್ನು ಬಂಧಿಸಿದೆ. ಬಂಧಿತ ಆರೋಪಿಗಳನ್ನು ಮಹಾರಾಷ್ಟ್ರದ ರಮೇಶ ಕಾಳೆ(56), ಗಂಗಾರಾಮ ಚವ್ಹಾಣ(25), ವಿಜಯಪುರ ಮೂಲದ ಪರಶುರಾಮ ಕಾಳೆ(22), ಕಿರಣ ಬೇಡೆಕರ(28), ದೇವದಾಸ ಚವ್ಹಾಣ(40), ತನ್ವೀರ್ ಹೊನ್ನುಟಗಿ(24), ದಶರಥ ಹೊಸಮನಿ(34) ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿಗಳಿಂದ 356 ಗ್ರಾಂ ಚಿನ್ನಾಭರಣ, 200 ಗ್ರಾಂ ಬೆಳ್ಳಿಯ ಆಭರಣಗಳು, ಒಂದು ಮೊಬೈಲ್, ಒಂದು ಬುಲೆರೋ ವಾಹನ ಸೇರಿ ಒಟ್ಟು ರೂ. 21 ಲಕ್ಷ 20 ಸಾವಿರ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ರಾಜ್ಯದ 10 ನಾನಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ 11 ನಾನಾ ಅಪರಾಧ ಪ್ರಕರಣಗಳಲ್ಲಿ ಇವರು ಭಾಗಿಯಾಗಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ.

ವಿಜಯಪುರ ಎಎಸ್ಪಿ ಡಾ. ರಾಮ ಲಕ್ಷ್ಮಣ ಅರಸಿದ್ಧಿ ಮಾರ್ಗದರ್ಶನದಲ್ಲಿ ವಿಜಯಪುರ ಡಿವೈಎಸ್ಪಿ ಲಕ್ಷ್ಮಿನಾರಾಯಣ, ಗಾಂಧಿಚೌಕ್ ಸಿಪಿಐ ರವೀಂದ್ರ ನಾಯ್ಕೋಡಿ, ಗೋಳಗುಮ್ಮಟ ಪೊಲೀಸ್ ಠಾಣೆಯ ಸಿಪಿಐ ರಮೇಶ ಅವಜಿ, ಜಲನಗರ ಪಿಎಸ್ಐ ಎಸ್. ಎಂ. ಶಿರಗುಪ್ಪಿ, ಎಪಿಎಂಸಿ ಪಿಎಸ್ಐ ಸೋಮೇಶ ಗೆಜ್ಜಿ, ಸಿಬ್ಬಂದಿಯಾದ ಎಂ. ಪವಾರ, ಎಸ್. ಬಿ. ಚನ್ನಶೆಟ್ಟಿ, ಪ್ರಭು ಹಿಪ್ಪರಗಿ, ಬಾಬು ಗುಡಿಮನಿ, ಐ. ಎಂ. ಬೀಳಗಿ, ಎಂ. ಬಿ. ಡವಳಗಿ, ವೈ. ಆರ್. ಮಂಕಣಿ, ನಬಿ ಮುಲ್ಲಾ, ಶಿವ ಅಳ್ಳಿಗಿಡದ, ರಾಮನಗೌಡ ಬಿರಾದಾರ, ಆನಂದ ಯಳ್ಳೂರ, ಕರೆಪ್ಪ ನಾಲತವಾಡ, ಪುಂಡಲಿಕ ಬಿರಾದಾರ, ಸಿದ್ದು ಬಿರಾದಾರ, ಮಹಾದೇವ ಅಡಿಹುಡಿ, ನಿಂಗಪ್ಪ ವಠಾರ ಅವರನ್ನೊಳಗೊಂಡ ತಂಡ ಈ ಕಳ್ಳರನ್ನು ಬಂಧಿಸಿದ ಎಂದು ಎಸ್ಪಿ ತಿಳಿಸಿದರು.

ಸಾರ್ವಜನಿಕರಿಗೆ ತಲೆ ನೋವಾಗಿದ್ದ ಈ ಕಳ್ಳತನ ಪ್ರಕರಣಗಳನ್ನು ಕಡಿಮೆ ಸಮಯದಲ್ಲಿ ಭೇದಿಸಿ ಕಳ್ಳರನ್ನು ಹೆಡೆಮುರಿ ಕಟ್ಟಿದ್ದ ಪೋಲಿಸರ ತಂಡಕ್ಕೆ ಎಸ್ಪಿ ಎಚ್. ಡಿ. ಆನಂದ ಕುಮಾರ ನಗದು ಬಹುಮಾನ ಘೋಷಣೆ ಮಾಡಿ ಪ್ರಶಂಸೆ ಪತ್ರ ನೀಡುವ ಮೂಲಕ ಅಭಿನಂದಿಸಿದ್ದಾರೆ.

Leave a Reply

ಹೊಸ ಪೋಸ್ಟ್‌