ವಿಜಯಪುರ: ಇದು ಗ್ರಾಮಸ್ಥರು ಅಕ್ಷರಶಃ ಕಳ್ಳರು ಜೀವದ ಹಂಗು ತೊರೆದೆ ಪಲಾಯನ ಮಾಡಲು ಕಾರಣವಾದ ಸ್ಟೋರಿ. ಗ್ರಾಮಸ್ಥರಿಂದ ಒದೆ ತಿನ್ನುವ ಭಯದಲ್ಲಿ ಕಳ್ಳರು ಸಂಚರಿಸುತ್ತಿದ್ದ ಕಾರು ಪಲ್ಟಿಯಾದ ತಕ್ಷಣ ಅದರಲ್ಲಿದ್ದ ವಸ್ತುಗಳು ಮತ್ತು ಕಾರನ್ನು ಅಲ್ಲಿಯೇ ಬಿಟ್ಟು ಪರಾರಿಯಾದ ಘಟನೆ ಬಸವನಾಡು ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.
ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಮುಕರ್ತಿಹಾಳ ಬಳಿ ಕಳ್ಳರು ಕುರಿಗಳನ್ನು ಕದಿಯಲು ಬಂದಿದ್ದರು. ಕಾರಿನಲ್ಲಿ ಬಂದಿದ್ದ ಈ ಕಳ್ಳರನ್ನು ನೋಡಿದ ಕುರಿಗಳನ್ನು ಕದಿಯಲು ಮುಂದಾಗಿದ್ದಾರೆ. ಆಗ ಕುರಿಗಾಹಿ ಚಟ್ಟನೇ ಚೀರಿದ್ದಾನೆ. ಇದರಿಂದ ಗಾಬರಿಯಾದ ಕುರಿಗಳ್ಳರು ತಕ್ಷಣ ಕಾರಿನಲ್ಲಿ ಪರಾರಿಯಾಗಿದ್ದಾರೆ.
ಮುಕರ್ತಿಹಾಳದಿಂದ ತಾಳಿಕೋಟೆಯತ್ತ ಆಗಮಿಸಿದ ಕಳ್ಳರು ಅಲ್ಲಿ ಡೋಣಿ ನದಿ ಸೇತುವೆ ಜಲಾವೃತವಾಗಿರುವುದರಿಂದ ಮರಳಿ ಮುಕರ್ತಿಹಾಳ ಗ್ರಾಮದತ್ತ ಕಾರಿನಲ್ಲಿ ತೆರಳಿದ್ದಾರೆ. ಅಷ್ಟರೊಳಗಾಗಲೇ ಕುರಿಗಳ್ಳರು ಬಂದಿದ್ದ ಸುದ್ದಿ ತಿಳಿದಿದ್ದ ಗ್ರಾಮಸ್ಥರು ಬಡಿಗೆ ಹಿಡಿದು ಜಮಾಯಿಸಿದ್ದರು. ಈ ವೇಳೆ ಜನರನ್ನು ಗಮನಿಸಿದ ಕಳ್ಳರು ಭಯಗೊಂಡು ಅಲ್ಲಿಂದ ಪರಾರಿಯಾಗುವಾಗ ಅವರು ಸಂಚರಿಸುತ್ತಿದ್ದ ಕಾರು ಪಲ್ಟಿಯಾಗಿದೆ. ಆಗ ಎದ್ದಿನೋ ಬಿದ್ದಿನೋ ಎಂದು ಜೀವ ಭಯದಲ್ಲಿ ಪಲ್ಟಿಯಾದ ಕಾರು ಮತ್ತು ಅದರಲ್ಲಿದ್ದ ಕುರಿಗಳನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. KA-03/AE-2627 ನಂಬರಿನ ಕಾರು ಇದಾಗಿದ್ದು, ಕಾರನ್ನೂ ಕೂಡ ಕಳ್ಳತನ ಮಾಡಿಕೊಂಡು ಬಂದಿರುವ ಶಂಕೆ ವ್ಯಕ್ತವಾಗಿದೆ.
ಘಟನಾ ಸ್ಥಳಕ್ಕೆ ತಾಳಿಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗ್ರಾಮಸ್ಥರಿಂದ ಸಮಗ್ರ ಮಾಹಿತಿ ಸಂಗ್ರಹಿಸಿದ್ದಾರೆ. ಅಲ್ಲದೇ, ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ್ದಾರೆ.
ವಿಜಯಪುರ ಜಿಲ್ಲೆಯ ತಾಳಿಕೋಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.