ಇಂಡಿ ತಾಲೂಕು ಸಮಗ್ರ ನೀರಾವರಿಗೆ ಆಗ್ರಹ- ಹೊರ್ತಿಯಲ್ಲಿ ಜೆಡಿಎಸ್ ಕಾರ್ಯಕರ್ತರಿಂದ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ

ವಿಜಯಪುರ: ವಿಜಯಪುರ ಜಿಲ್ಲೆಯ ಇಂಡಿ ತಾಲೂಕನ್ನು ಸಮಗ್ರ ನೀರಾವರಿಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಜೆಡಿಎಸ್ ಇಂಡಿಯಲ್ಲಿ ನಡೆಸುತ್ತಿರುವ ಧರಣಿ ಸತ್ಯಾಗ್ರಹ 12ನೇ ದಿನಕ್ಕೆ ಕಾಲಿಟ್ಟಿದ್ದು, ಈ ಹೋರಾಟದ ಅಂಗವಾಗಿ ಹೊರ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದ್ದಾರೆ.

ಹೂರ್ತಿ ಗ್ರಾಮದ ಶ್ರೀ ರೇವಣಸಿದ್ದೇಶ್ವರ ದೇವಾಲಯ ಪಕ್ಕದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 52ರಲ್ಲಿ ಕೆಲಕಾಲ ರಸ್ತೆ ತಡೆ ನಡೆಸಿದ ಜೆಡಿಎಸ್ ಕಾರ್ಯಕರ್ತರು, ಕೂಡಲೇ ಸರಕಾರ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಮುಖಂಡ ಬಿ. ಡಿ. ಪಾಟೀಲ, ಕಳೆದ 12 ದಿನಗಳಿಂದ ಹೋರಾಟ ಮಾಡುತ್ತಿದ್ದರೂ ಸರಕಾರ ಸ್ಪಂದಿಸುತ್ತಿಲ್ಲ. ಸರಕಾರದ ಪ್ರತಿನಿಧಿಗಳು ಬಂದು ಹೋರಾಟಗಾರರ ಬೇಡಿಕೆಗಳು ಆಲಿಸಿಲ. ಮುಂಬರುವ ದಿನಗಳಲ್ಲಿ 10 ಸಾವಿರ ರೈತರು ರಕ್ತದಿಂದ ಪತ್ರ ಬರೆದು ಸರಕಾರಕ್ಕೆ ಕಳುಹಿಲಿದ್ದಾರೆ. ಅಲ್ಲದೇ, ಇಂಡಿ ನಗರದ ವ್ಯಾಪಾರಸ್ಥರು ಹಾಗೂ ನಾಗರೀಕರ ಸಹಕಾರದೊಂದಿಗೆ ಇಂಡಿ ನಗರವನ್ನು ಬಂದ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಮಂಜುನಾಥ ಕಾಮಗೋಂಡ, ಶ್ರೀಶೈಲಗೌಡ ಪಾಟೀಲ, ಮರೇಪ್ಪ ಗಿರಣಿವಡ್ಡರ ಮತ್ತು ರೈತ ಮುಖಂಡ ಗುರುನಾಥ ಬಗಲಿ ಮಾತನಾಡಿದರು.

ಈ ಹೋರಾಟದ ಅಂಗವಾಗಿ ಈಗ ಮಹಾರಾಷ್ಟ್ರದ ಸೋಲಾಪುರ ಮತ್ತು ಕರ್ನಾಟಕದ ವಿಜಯಪುರ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 52 ರಲ್ಲಿ ಇಂಡಿ ತಾಲೂಕಿನ ಹೊರ್ತಿ ಬಳಿ ರಸ್ತೆ ತಡೆ ನಡೆಸಲಾಯಿತು. ರೈತರ ಪ್ರತಿಭಟನೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 52 ರಲ್ಲಿ ವಾಹನ ಸಂಚಾರ ಕೆಲಕಾಲ ಅಸ್ತವ್ಯಸ್ತವಾಗಿತ್ತು. ಪ್ರತಿಭಟನೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಂದೋಬಸ್ತ್ ಗೆ ಸೇರಿದ್ದ ಪೊಲೀಸರು ಪ್ರತಿಭಟನೆಯನ್ನು ಹಿಂಪಡೆಯುವಂತೆ ರೈತರಲ್ಲಿ ಮನವಿ ಮಾಡಿದರು. ಕೆಲಕಾಲ ರಸ್ತೆ ತಡೆ ನಡೆಸಿದ ರೈತರು, ಕೊನೆಗೂ ಇಂಡಿ ಡಿವೈಎಸ್ಪಿ ಶ್ರೀಧರ ದೊಡ್ಡಿ ನೇತೃತ್ವದಲ್ಲಿ ಪೊಲೀಸರು ಮಾಡಿದ ಮನವಿಗೆ ಸ್ಪಂದಿಸಿ ಪ್ರತಿಭಟನೆಯನ್ನು ಹಿಂಪಡೆದರು.

ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ್ದ ಇಂಡಿ ತಹಸೀಲ್ದಾರ ಚಿದಂಬರ ಕುಲಕರ್ಣಿ ಅವರ ಮೂಲಕ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

ಈ ಹೋರಾಟದಲ್ಲಿ ಜೆಡಿಎಸ್ ಮುಖಂಡರಾದ ಸಿದ್ದು ಡಂಗಾ, ಶ್ರೀಮಂತ ಪೂಜಾರಿ, ಶರಣಗೌಡ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

 

Leave a Reply

ಹೊಸ ಪೋಸ್ಟ್‌