ಬಸವ ನಾಡಿನಲ್ಲಿ 7 ದಿನಗಳ ಕಾಲ ಗಣೇಶೋತ್ಸವಕ್ಕೆ ಅವಕಾಶ- ಡಿಸಿ ಪಿ. ಸುನೀಲ ಕುಮಾರ

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಶ್ರೀ ಗಣೇಶೋತ್ಸವವನ್ನು ಗರಿಷ್ಠ ಏಳು ದಿನಗಳವರೆಗೆ ಕೋವಿಡ್ ಮಾರ್ಗಸೂಚಿಗಳೊಂದಿಗೆ ಆಚರಿಸಲು ಅವಕಾಶ ನೀಡಲಾಗಿದೆ ಎಂದು ಜಿಲ್ಲಾದಿಕಾರಿ ಪಿ. ಸುನೀಲ ಕುಮಾರ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಈ ಹಿಂದೆ ಗಣೇಶ ಹಬ್ಬದ ಆಚರಣೆಯನ್ನು ಗರಿಷ್ಠ ಐದು ದಿನಗಳ ವರೆಗೆ ಆಚರಿಸಲು ಆದೇಶ ಹೊರಡಿಸಲಾಗಿತ್ತು. ಈ ಮಧ್ಯೆ, ಗಣೇಶೋತ್ಸವ ಆಚರಣೆ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಗಣೇಶ ಹಬ್ಬದ ಆಚರಣೆಯನ್ನು ಐದು ದಿನಗಳ ಬದಲಾಗಿ ಏಳು ದಿನ ಆಚರಿಸಲು ಅನುಮತಿ ನೀಡುವಂತೆ ಕೆಲವು ಸಂಘ ಸಂಸ್ಥೆಗಳು ಕೋರಿಕೆ ಸಲ್ಲಿಸಿದ್ದವು. ಅಲ್ಲದೇ, ಸರಕಾರ 13.09.2021 ರಂದು ಹೊರಡಿಸಿರುವ ಆದೇಶದಂತೆ ಗಣೇಶೋತ್ಸವ ಆಚರಣೆಗೆ ಎಷ್ಟು ಎತ್ತರದ ಗಣೇಶ ಮೂರ್ತಿಯನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಟಾಪಿಸಬೇಕು. ಅಲ್ಲದೇ, ಎಷ್ಟು ದಿನ ಗಣೇಶ ಹಬ್ಬ ಆಚರಿಸಬೇಕು ಎಂಬ ಬಗ್ಗೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿನ ಕೋವಿಡ್-19 ದೈನಂದಿನ ಧನಾತ್ಮಕ ಪ್ರಕರಣಗಳ ದರ ಮತ್ತು ಸ್ಥಳೀಯ ಕೋವಿಡ್-19 ಪರಿಸ್ಥಿತಿಯನ್ನು ಪರಿಗಣಿಸಿ ಜಿಲ್ಲಾಸಿಕಾರಿಗಳ ಹಂತದಲ್ಲಿಯೆ ನಿರ್ಧರಿಸಲು ಸೂಚಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಈಗ ವಿಜಯಪುರ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಮತ್ತು ಜಿಲ್ಲೆಯ ಧನಾತ್ಮಕ ಪ್ರಕರಣಗಳ ದರವು(Positivity Rate) ಕಡಿಮೆ ಇರುವುದರಿಂದ ವಿಜಯಪುರ ಜಿಲ್ಲೆಯಲ್ಲಿ ಗಣೇಶೋತ್ಸವ ಆಚರಣೆಯನ್ನು ಐದು ದಿನಗಳ ಬದಲಾಗಿ ಗರಿಷ್ಠ ಏಳಿ ದಿನಗಳ ವರೆಗೆ ಕೋವಿಡ್-19 ರ ಎಲ್ಲ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರೊಂದಿಗೆ ಆಚರಿಸಲು ಅನುಮತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಈ ಬಾರಿಯೂ ಪಿ.ಓ.ಪಿ ಗಣೇಶ್ ಮೂರ್ತಿ ಪ್ರತಿಷ್ಠಾಪನೆಗೆ ನಿಬಂಧವಿದ್ದು, ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆ ಸ್ಥಳಗಳಲ್ಲಿ ಅನಗತ್ಯ ಜನಸಂದಣಿ ಆಗದಂತೆ ಗಣೇಶ ಹಬ್ಬವನ್ನು ಸರಳ ರೀತಿಯಲ್ಲಿ ಪ್ರತಿಷ್ಠಾಪನೆ ಸ್ಥಳದಲ್ಲಿ ಯಾವುದೇ ರೀತಿ ಸಾಂಸ್ಕೃತಿಕ. ಸಂಗೀತ, ನೃತ್ಯ ಹಾಗೂ ಮುಖ್ಯವಾಗಿ ಡಿಜೆ ಮೂಲಕ ಹಾಗೂ ಇನ್ನಿತರೆ ಯಾವುದೇ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಬಾರದು. ಸರಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಕೇಂದ್ರ ಮತ್ತು ರಾಜ್ಯ ಸರಕಾರದ ಆದೇಶ, ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ಹಾಗೂ ಭಾರತೀಯ ದಂಡ ಸಂಹಿತೆ ಸೆಕ್ಷನ್ 188ರ ಅಡಿಯಲ್ಲಿ ಶಿಸ್ತಿನ ಕಾನೂನು ಕ್ರಮ ಮತ್ತು ಅನ್ವಯವಾಗಬಹುದಾದ ಇತರೆ ಕಾನೂನು ಉಪಬಂಧಗಳ ಮೇರೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಎಚ್ಚರಿಕೆ ನೀಡಿದ್ದಾರೆ‌.

Leave a Reply

ಹೊಸ ಪೋಸ್ಟ್‌