ಪಿಓಪಿ, ಮಣ್ಣಿನ ಗಣೇಶ ಮೂರ್ತಿಗಳ ಕಡೆಗಣನೆ- ಸರಕಾರಿ ನಿಯಮಗಳ ಪಾಲನೆ- ಮಹಾಮಂಡಳದಿಂದ ಗಣೇಶೋತ್ಸವದ ವಿಶೇಷ

ವಿಜಯಪುರ: ಸಾರ್ವಜನಿಕ ಗಣೇಶೋತ್ಸವಗಳಿಗೆ ಅನುಮತಿ ವಿಚಾರದಲ್ಲಿ ಸರಕಾರದ ಮಟ್ಟದಲ್ಲಿ ನಡೆದ ವಿದ್ಯಮಾನಗಳು ಎಲ್ಲರಿಗೂ ಗೊತ್ತಿರುವ ವಿಚಾರ. ಇದರ ಜೊತೆ ಪಿಓಪಿ ಗಣೇಶ ನಿಷೇಧ ಬೃಹದಾಕಾರದ ಮೂರ್ತಿಗಳ ಪ್ರತಿಷ್ಠಾಪನೆಯ ಯುವಕರ ಕನಸಿಗೆ ತಣ್ಣೀರೆರಚಿತ್ತು. ಆದರೆ, ಸರಕಾರದ ಮಾರ್ಗಸೂಚಿ ಪಾಲಿಸುವುದರ ಜೊತೆಗೆ ಬಸವ ನಾಡಿನ ಶ್ರೀ ಗಜಾನನ ಮಹಾಮಂಡಳ ಯುವಕರು ಪಿಓಪಿ ಬೃಹತ್ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಬದಲಿಗೆ ಪರ್ಯಾಯ ಮಾರ್ಗ ಕಂಡುಕೊಂಡು ಹೊಸ ಟ್ರೆಂಡ್ ಹುಟ್ಟು ಹಾಕಿದ್ದಾರೆ.

ಸರಕಾರ ಪಿಓಪಿ ಗಣೇಶ ಮೂರ್ತಿ ಬ್ಯಾನ್ ಮಾಡಿದ್ರನೂ ಕೂಡಾ ಜನರ ಪಿಓಪಿ ಮೂರ್ತಿಗಳ ಮೇಲಿನ ವ್ಯಾಮೋಹ ಕಡಿಮಯಾಗಿಲ್ಲ. ಆದರೆ ಈ ಜಟಾಪಟಿ ನಡುವೆಯೂ ವಿಜಯಪುರದ ಶ್ರೀ ಗಜಾನನ ಮಹಾಮಂಡಳ ಇಲ್ಲೊಂದು ಗಣೇಶ ಮಂಡಳಿ ಪರಿಹಾರ ಕಂಡುಕೊಂಡಿದೆ. ಈ ಮಹಾಮಂಡಳದ ಉಪಾಯ ಇತರ ಉತ್ಸವ ಸಮಿತಿಗಳಿಗೂ ಅನುಕರಣೀಯವಾಗಿದೆ. ಐತಿಹಾಸಿಕ ನಗರದ ಈ ಯೋಚನೆ ರಾಜ್ಯದಲ್ಲಿಯೇ ಹೊಸ ಟ್ರೆಂಡ್ ಸೃಷ್ಠಿಸಿದರೂ ಅಚ್ಚರಿಯಿಲ್ಲ.

ವಿಜಯಪುರ ನಗರದ ಶಿವಾಜಿ ವೃತ್ತದಲ್ಲಿ ಶ್ರೀ ಗಜಾನನ ಉತ್ಸವ ಮಂಡಳಿಗಳ ಮಹಾಮಂಡಳವು ಕಳೆದ ಮೂರು ವರ್ಷಗಳಿಂದ ಪಿಓಪಿ ಹಾಗೂ ಮಣ್ಣಿನ ಗಣಪತಿ ಬದಲಾಗಿ ಅತ್ಯಾಧುನಿಕ ತಂತ್ರಜ್ಞಾನದ ಪೈಬರ್ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ. ಈ ಮೂಲಕ ಪರಿಸರ ಸ್ನೇಹಿ ಮತ್ತು ಮರು ಪೂಜೆಗೆ ಬಳಸಬಹುದಾದ ಎಂಟು ಅಡಿ ಎತ್ತರವಿರುವ ಈ ಗಣೇಶ ಸುಮಾರು ಈಗ ಗಮನ ಸೆಳೆಯುತ್ತಿದೆ. ಕನಿಷ್ಠ 15 ವರ್ಷಗಳ ಕಾಲ ಈ ಮೂರ್ತಿಯನ್ನು ಮರುಬಳಕೆ ಮಾಡಬಹುದಾಗಿದೆ. ಗಣೇಶ ಚತುರ್ಥಿ ಸಂದರ್ಭದಲ್ಲಿ ಮಾತ್ರವಲ್ಲ ಪ್ರತಿದಿನವೂ ಪೂಜಿಸಬಹುದಾಗಿದೆ. ಇಂಥ ಗಣೇಶ ಮೂರ್ತಿಯನ್ನು ಮೂರು ವರ್ಷಗಳ ಹಿಂದೆ ನೆರೆ ರಾಜ್ಯ ಮಹಾರಾಷ್ಟ್ರದ ಪುಣೆಯಿಂದ ತರಲಾಗಿದೆ‌. ನೋಡಲು ಆಕರ್ಷಕವಾಗಿರುವ ಈ ಮೂರ್ತಿಯ ಇನ್ನೊಂದು ವಿಶೇಷವೆಂದರೆ ಈ ಗಣೇಶ ಮೂರ್ತಿಯ ಬಣ್ಣ ಮಾಸುವುದಿಲ್ಲ. ನೋಡಲು ಅಂದವಾಗಿದ್ದು, ಗಣೇಶ ಭಕ್ತರ ಕಣ್ಮನ ಸೆಳೆಯುತ್ತಿದೆ. ಈ ಗಣೇಶ ಮೂರ್ತಿಗೆ ಪ್ರತಿ ಸಂಕಷ್ಟಿಯಂದು ವಿಶೇಷ ಪೂಜೆ ಸಲ್ಲಿಸಲಾಗುತ್ತೆ.

ವಿಜಯಪುರ ನಗರದ ಶಿವಾಜಿ ವೃತ್ತದಲ್ಲಿ ಪ್ರತಿ ಗಣೇಶೋತ್ಸವದಲ್ಲಿ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಶ್ರೀ ಗಜಾನನ ಮಂಡಳಿಗಳ ಮಹಾ ಮಂಡಳವು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಇವರ ನೇತೃತ್ವದಲ್ಲಿ ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸಲಾಗುತ್ತಿದೆ ಮೂಲಕ ಕೇವಲ ಪರಿಸರ ಸ್ನೇಹಿ ಮೂರ್ತಿ ಪ್ರತಿಷ್ಠಾಪಿಸಿದ್ದು ಮಾತ್ರವಲ್ಲ, ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮನ್ನೂ ಆಯೋಜಿಸುವ ಮೂಲಕ ಗಮನ ಸೆಳೆಯುತ್ತಿದೆ.

ಈ ಪರಿಸರ ಸ್ನೇಹಿ ಗಣೇಶನನ್ನು ವೀಕ್ಷಿಸಿದ ಗುಮ್ಮಟ ನಗರಿಯ ನಾನಾ ಗಣೇಶ ಮಂಡಳಿಗಳೂ ಕೂಡ ಈಗ ಪೈಬರ್ ಗಣೇಶ ಮೂರ್ತಿಯನ್ನೇ ಮಾದರಿಯಾಗಿ ಅನುಸರಿಸುವ ಮೂಲಕ ಪರಿಸರ ಕಾಳಜಿ ತೋರುತ್ತಿವೆ. ಈ ಸಲ ಮೂರು ಬೇರೆ ಬೇರೆ ಶ್ರೀ ಗಣೇಶೋತ್ಸವ ಮಂಡಳಿಗಳು ಪೈಬರ್ ಗಣೇಶನನ್ನೆ ಪ್ರತಿಷ್ಠಾಪಿಸಿ ಪರಿಸರ ಪ್ರೇಮ ಮೆರೆದಿವೆ. ಉತ್ಸವ ಮೂರ್ತಿಯನ್ನಾಗಿ ಪೈಬರ್ ಗಣೇಶನನ್ನು ಪ್ರತಿಷ್ಠಾಪಿಸಿ ಅದರ ಪಕ್ಕ ಮಣ್ಣಿನ ಗಣಪತಿಯನ್ನು ಸಾಂಪ್ರದಾಯಿಕವಾಗಿ ಇಟ್ಟು ಪೂಜೆ ಸಲ್ಲಿಸಿ ನಂತರ ಸಣ್ಣ ಮಣ್ಣಿನ ಮೂರ್ತಿಯನಗಮು ವಿಸರ್ಜಿಸುವ ಮೂಲಕ ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸುತ್ತಿವೆ.

 

ವಿಜಯಪುರಕ್ಕೆ ಪೈಬರ್ ಗಣೇಶ ಮೂರ್ತಿ ಪರಿಕಲ್ಪನೆಯನ್ನು ಶ್ರೀ ಗಜಾನನ ಮಹಾಮಂಡಳ ಮೂಡಿಸಿದರೆ, ಇದರ ಹಾದಿಯಲ್ಲಿ ಇತರೆ ಮಂಡಳಿಗಳು ಸಾಗುತ್ತಿವೆ.  ವಿಜಯಪುರ ನಗರದ ಶಿವಾಜಿ ಪೇಠ, ದರಬಾರ ಗಲ್ಲಿ ಹಾಗೂ ಉಪ್ಪಲಿ ಬುರುಜ ಹತ್ತಿರದ ಮಂಡಳಿಗಳೂ ಕೂಡ ಪೈಬರ್ ಗಣೇಶನ ಮೊರೆ ಹೋಗಿವೆ. ಇನ್ನೂ ಹಲವಾರು ಮಂಡಳಿಗಳು ಈಗಾಗಲೇ ಪೈಬರ್ ಗಣೇಶ ನ ಬುಕ್ ಮಾಡಿವೆ ಎನ್ನುತ್ತಾರೆ ಶ್ರೀ ಗಜಾನನ ಮಹಾಮಂಡಳದ ಅಧ್ಯಕ್ಷ ಸತೀಶ ಪಾಟೀಲ.

ಅಷ್ಟೇ ಅಲ್ಲ, ಶ್ರೀ ಗಜಾನನ ಮಹಾಮಂಡಳದ ಆವರಣದಲ್ಲಿ ಸರಕಾರದ ಮಾರ್ಗಸೂಚಿಯಂತೆ ಕೊರೊನಾ ಲಸಿಕೆ ಅಭಿಯಾನ ನಡೆಸುವ ಮೂಲಕವೂ ಜನರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿದೆ. ಒಟ್ಟಾರೆ ಬಸವ ನಾಡಿನ ಗುಮ್ಮಟ ನಗರಿಯ ಜನತೆ ಈಗ ಪರಿಸರ ಸ್ನೇಹಿ ಗಣೇಶೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿರುವುದು ಮತ್ತು ಇತರರಿಗೆ ಮಾದರಿಯಾಗುತ್ತಿರುವುದು ಗಮನಾರ್ಹವಾಗಿದೆ.

Leave a Reply

ಹೊಸ ಪೋಸ್ಟ್‌