ವಿಜಯಪುರ: ವಿಜಯಪುರ ನಗರದ ಪೌರ ಕಾರ್ಮಿಕರಿಗೆ ಸರಕಾರದಿಂದ ಮತ್ತು ಮಹಾನಗರ ಪಾಲಿಕೆಯಿಂದ ಸಿಗಬಹುದಾದ ಎಲ್ಲ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ್ ಅವರು ತಿಳಿಸಿದ್ದಾರೆ.
ವಿಜಯಪುರ ನಗರದ ಎಲ್ ಐ ಸಿ(ಭಾರತೀಯ ಜೀವ ವಿಮೆ ನಿಗಮ) ಆವರಣದಲ್ಲಿ ಡಿ. ಆರ್. ಮಮದಾಪುರ ಪರಿವಾರದ ವತಿಯಿಂದ ವಿಜಯಪುರ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ಜನರು ಆರೋಗ್ಯಕರವಾಗಿರಲು ಪೌರ ಕಾರ್ಮಿಕರ ಕೊಡುಗೆ ಅಪಾರವಾಗಿದೆ. ಇಂಥ ಪೌರ ಕಾರ್ಮಿಕರಿಗೆ ಸನ್ಮಾನಿಸಿ ಒಡಿತರ ಕೀಟ್ ಗಳನ್ನು ವಿತರಿಸುತ್ತಿರುವ ಮಮದಾಪುರ ಕುಟುಂಬದವ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ, ಪೌರಕಾರ್ಮಿಕರಿಗೆ ಸರಕಾರದಿಂದ ಸಿಗುವ ಯೋಜನೆಗಳು ಹಾಗೂ ಸೌಲಭ್ಯಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ಡಿ. ಆರ್. ಮಮದಾಪುರ ಮಾತನಾಡಿ, 12 ನೇ ಶತಮಾನದಲ್ಲಿ ಬಸವಾದಿ ಶರಣರು ಹೇಳಿದ ಕಾಯಕವೇ ಕೈಲಾಸ ಎಂಬ ನಾಣ್ಣುಡಿಯಂತೆ ನಗರವನ್ನು ಸ್ವಚ್ಛವಾಗಿರಿಸುವ ಕಾಯಕದ ಮೂಲಕ ಪೌರ ಕಾರಗಮಿಕರು ಆ ನುಡಿಯನ್ನು ಸಾರ್ಥಕಗೊಳಿಸುತ್ತಿದ್ದಾರೆ. ಅವರು ಪ್ರತಿನಿತ್ಯ ಎಲ್ಲರ ಮನೆ ಬಾಗಿಲಿಗೆ ಹೋಗಿ, ಕಸ ಸಂಗ್ರಹಿಸಿ ನಗರವನ್ನು ಸ್ವಚ್ಛವಾಗಿರಿಸುತ್ತ ಯಾರೂ ಮಾಡದ ಕೆಲಸ ಮಾಡುತ್ತಿದ್ದಾರೆ. ಆರೋಗ್ಯಕರ ಸಮಾಜ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಜಿತ ದಾಮೋದರ ವಾರಕರಿ, ಬಸವರಾಜ ಆಲೂರು, ಜ್ಯೋತಿ ಮಮದಾಪುರ, ಡಾ. ಪ್ರಭು ಮಮದಾಪುರ ಮುಂತಾದವರು ಉಪಸ್ಥಿತರಿದ್ದರು.