ಇದು ಹೊಸ ಸ್ಪರ್ಧೆ- ಜಗ್ಗಾಟವಾದರೂ ಹಗ್ಗ ಜಗ್ಗಾಟವಲ್ಲ- ಮತ್ತೇನು?

ವಿಜಯಪುರ: ಉತ್ತರ ಕರ್ನಾಟಕದಲ್ಲಿ ಜಾತ್ರೆಗಳು ಬಂತೆಂದರೆ ಸಾಕು ತರಹೇವಾರಿ ಗ್ರಾಮೀಣ ಸಾಹಸ ಪ್ರದರ್ಶನಕ್ಕೆ ಸಾಕ್ಷಿಯಾಗುತ್ತವೆ. ಅದರಲ್ಲೂ ಶ್ರಾವಣ ಮಾಸದ ಸಂದರ್ಭದಲ್ಲಿ ಈ ಜಾತ್ರೆಗಳು ಯುವಜನತೆಯಲ್ಲಿರುವ ಚಾಕಚಕ್ಯತೆಗೆ ಸಾಕ್ಷಿಯಾಗುತ್ತೆ.

ಇಂಥದ್ದೆ ಒಂದು ಜಾತ್ರೆ ಮತ್ತು ಅದರ ಅಂಗವಾಗಿ ನಡೆದ ಈ ಸ್ಪರ್ಧೆಯೊಂದು ನೆರೆದ ಜನ ಸೋಜಿಗದಿಂದ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದೆ. ಅಂದಹಾಗೆ, ಈ ಜಾತ್ರೆ ನಡೆದಿದ್ದು ಬಸವ ನಾಡು ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಬೆಳ್ಳುಬ್ಬಿ ಗ್ರಾಮದಲ್ಲಿ.

ಸಾಮಾನ್ಯವಾಗಿ ಇಂದು ವಿಷಯ ಅಥವಾ ಕೆಲಸದಲ್ಲಿ ಚರ್ಚೆ, ವಿಮರ್ಶೆ ಬಹಳ ನಡೆದರೆ ಹಗ್ಗ ಜಗ್ಗಾಟ ನಡೆದಿದೆ ಎನ್ನುತ್ತಾರೆ. ಆದರೆ, ಇಲ್ಲಿ ನಡೆದದ್ದು ಜಗ್ಗಾಟವಾದರೂ, ಹಗ್ಹ ಜಗ್ಗಾಟವಲ್ಲ. ಬೇರೆಯದೇ ಜಗ್ಗಾಟ.

ಹಗ್ಗ ಜಗ್ಗಾಟದಲ್ಲಿ ಬಹಳಷ್ಟು ಜನರಿದ್ದರೆ ಇಲ್ಲಿ ಮಾತ್ರ ಇಬ್ಬರು ಚಾಲಕರು ಮತ್ತು ಎರಡು ವಾಹನಗಳು ಮಾತ್ರ ಪಾಲ್ಗೊಂಡಿದ್ದರು. ಅದೂ ಕೂಡ ಕಿಕ್ಕಿರಿದು ಸೇರಿದ್ದ ಜನರ ಮಧ್ಯೆ ನಡೆದ ಸ್ಪರ್ಧೆ.

 

ಜಾತ್ರೆ ಎಂದರೆ ಸಾಕು ಅಲ್ಲಿ ವಾದ್ಯಗಳ ಸದ್ದು, ಪಲ್ಲಕ್ಕಿಗಳ ಮೆರವಣಿಗೆ, ಧಾರ್ಮಿಕ ಸಂಸ್ಕಾರಗಳು ಮಾಮೂಲು. ಆದರೆ, ಬೆಳ್ಳುಬ್ಬಿಯಲ್ಲಿ ನಡೆದ ಈ ಜಾತ್ರೆ ಮಾತ್ರ ಅದೆಲ್ಲಕ್ಕಿಂತಲೂ ವಿಶೇಷವಾಗಿತ್ತು. ಇಲ್ಲಿ ನಾನೇನು ಯಾರಿಗೂ ಕಡಿಮೆ ಇಲ್ಲವೆಂದು ಶಕ್ತಿ ಪ್ರದರ್ಶನ ನಡೆದಿತ್ತು. ಅಲ್ಲಿ ಸೇರಿದ್ದ ಜನರೂ ಕೂಡ ಸ್ಪರ್ಧಾಳುಗಳನ್ನು ಹುರುದುಂಬಿಸುತ್ತಿದ್ದರು.

ಬೆಳ್ಳುಬ್ಬಿ ಗ್ರಾಮದಲ್ಲಿ ಎತ್ತ ನೋಡಿದರೂ ಸಂಭ್ರಮವೋ ಸಂಭ್ರಮ ಮನೆ ಮಾಡಿತ್ತು. ಗ್ರಾಮದಲ್ಲಿರುವ ಐತಿಹಾಸಿಕ ಮಳೆಸ್ವಾಮಿ ದೇವಸ್ಥಾನದಲ್ಲಿ ನಡೆದ ಶ್ರಾವಣ ಮಾಸದ ಭಜನಾ ಮುಕ್ತಾಯ ಕಾರ್ಯಕ್ರಮದ ಅಂಗವಾಗಿ ನಡೆದ ಈ ಸ್ಪರ್ಧೆಯನ್ನು ನೋಡಿದರೆ ಇಂಥದ್ದೂ ಸ್ಪರ್ಧೆ ಮಾಡಬಹುದಾ ಎಂದು ಎಲ್ಲರೂ ಅಚ್ಚರಿ ಪಡುವಂತಿತ್ತು. ಅಲ್ಲಿ ನಡೆದಿದ್ದು ಟ್ರ್ಯಾಕ್ಟರ್ ಗಳ ಜಗ್ಗಾಟ ಸ್ಪರ್ಧೆ. ಎರಡು ಟ್ರ್ಯಾಕ್ಟರ್ ಗಳಿಗೆ ಹಿಂಬದಿಯಿಂದ ಕಬ್ಬಿಣ ಬೃಹದಾಕಾರದ ಗಟ್ಟಿಮುಟ್ಟಾದ ರಾಡ್ ವೊಂದನ್ನು ಬಿಗಿಯಲಾಗಿತ್ತು. ಎರಡು ಟ್ರ್ಯಾಕ್ಟರ್ ಗಳು ಒಂದನ್ನೊಂದು ಎಳೆದು ತಮ್ಮ ಶಕ್ತಿ ಪ್ರದರ್ಶಿಸಿ ಗೆಲ್ಲಬೇಕು. ಇದು ಸ್ಪರ್ಧೆಯ ನಿಯಮವಾಗಿತ್ತು.

ಈ ಸ್ಪರ್ಧೆಯಲ್ಲಿ ಕೊಲ್ಹಾರ ತಾಲೂಕಿನ ಸೊನ್ನ, ಮಸೂತಿ, ಕೊರ್ತಿ, ಹಂಗರಗಿ ಸೇರಿದಂತೆ ನಾನಾ ಗ್ರಾಮಗಳಿಂದ ಸಾವಿರಾರು ಜನ ಟ್ರ್ಯಾಕ್ಟರ್ ಜಗ್ಗಾಟ ಕಾರ್ಯಕ್ರಮ ವೀಕ್ಷಣೆ ಮಾಡಲು ಬಂದಿದ್ದರು. ಒಟ್ಟು 12 ಟ್ರ್ಯಾಕ್ಟರ್ ಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಟ್ರ್ಯಾಕ್ಟರ್ ನಲ್ಲಿ ಕುಳಿತಿದ್ದ ಚಾಲಕರಂತೂ ಜಿದ್ದಿಗೆ ಬಿದ್ದು ಗೆಲುವು ಸಾಧಿಸಲು ಶತಪ್ರಯತ್ನ ಮಾಡಿದರು.

ಜಿಟಿಜಿಟಿ ಮಳೆಯ ನಡುವೆ ಟ್ರ್ಯಾಕ್ಟರ್ ಗಳು ಜೋರಾಗಿ ಸದ್ದು ಮಾಡುತ್ತ ಮುನ್ನುಗ್ಗುತ್ತಿದ್ದರೆ, ಅದೇ ಟ್ರ್ಯಾಕ್ಟರನ್ನು ಮತ್ತೋಂದು ಟ್ರ್ಯಾಕ್ಟರ್ ಹಿಂಬದಿಯಿಂದ ತನ್ನೆಡೆಗೆ ಎಳೆಯುತ್ತಿತ್ತು. ಅಲ್ಲಿ ಸೇರಿದ್ದ ಗ್ರಾಮಸ್ಥರು ಕೆಕೆ ಹಾಕುತ್ತ ಶಿಳ್ಳೆ ಹೊಡೆಯುತ್ತ ಚಾಲಕರನ್ನು ಹುರುದುಂಬಿಸುತ್ತಿದ್ದರು.

ಜಾತ್ರೆಯ ಅಂಗವಾಗಿ ಪ್ರತಿವರ್ಷ ನಾನಾ ಕಾರ್ಯಕ್ರಮಗಳನ್ನು ಮಾಡುತ್ತಿದ್ದ ಇಲ್ಲಿನ ಮಳೆ ಸ್ವಾಮಿ ದೇವಸ್ಥಾನದ ಭಕ್ತರು, ಈ ಬಾರಿ ಟ್ರ್ಯಾಕ್ಟರ್ ಜಗ್ಗಾಟ ಸ್ಪರ್ಧೆ ಆಯೋಜನೆ ಮಾಡಿದ್ದರು. ಗ್ರಾಮಸ್ಥರೂ ಕೂಡ ಸಂತಸದಿಂದ ಇದರಲ್ಲಿ ಪಾಲ್ಗೊಂಡಿದ್ದರು. ಮೊದಲ ಸ್ಥಾನ ಪಡೆದ ಟ್ರ್ಯಾಕ್ಟರ್ ಮಾಲೀಕರಿಗೆ ರೂ. 10 ಸಾವಿರ ನಗದು ಬಹುಮಾನ ನೀಡಲಾಯಿತು.

ನೋಡಲು ಬಲು ರೋಚಕವಾಗಿದ್ದ ಈ ಟ್ರ್ಯಾಕ್ಟರ್ ಜಗ್ಗಾಟ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯಕ್ಕೆ ಆಹ್ವಾನ ನೀಡುತ್ತಿತ್ತು.

ಈ ರೀತಿ ಹೊಸ ಆಲೋಚನೆ ಮಾಡಿ ಗ್ರಾಮೀಣ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ತಮ್ಮ ಉದ್ದೇಶವಾಗಿದೆ ಎಂದು ಸ್ಪರ್ಧೆಯ ಆಯೋಜಕರಾದ ಅಜಯ ಹಿರೇಮಠ ಹೇಳಿದ್ದು ಅರ್ಥಪೂರ್ಣವಾಗಿತ್ತು.

ಶ್ರಾವಣ ಮಾಸದ ಮುಕ್ತಾಯದ ಅಂಗವಾಗ ನಾನಾ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆದವು. ಡೊಳ್ಳು ಕುಣಿತ, ನಂದಿಕೋಲುಗಳ ಮೆರವಣಿಗೆ, ಪಲಕ್ಕಿ ಸೇವೆ, ಕುಂಭ ಹೊತ್ತು ಮಹಿಳೆಯರ ಮೆರವಣಿಗೆ ಸೇರಿದಂತೆ ನಾನಾ ಆಚರಣೆಗಳು ನಡೆದವು. ಗ್ರಾಮದಲ್ಲಿರುವ ಮಳೆ ಸ್ವಾಮಿ ದೇವಸ್ಥಾನದಿಂದ ಸಮೀಪದ ಕೃಷ್ಣಾ ನದಿ ವರೆಗೆ ದೇವರ ಪಲಕ್ಕಿ ಹಾಗೂ ನಂದಿಕೋಲುಗಳ ಮೆರವಣಿಗೆ ಮಾಡಲಾಯಿತು. ಬಳಿಕ ಕೃಷ್ಣಾ ನದಿ ನೀರಿನಲ್ಲಿ ದೇವರಿಗೆ ಅಭಿಷೇಕ ಮಾಡಿಸಿದರು. ಗ್ರಾಮದ ಮಹಿಳೆಯರು, ಮಕ್ಕಳು ಈ ಕಾರ್ಯದಲ್ಲಿ ಪಾಲ್ಗೋಂಡರು. ಈ ಮೂಲಕ ಒಂದು ತಿಂಗಳ ಕಾಲ ನಡೆದ ಶ್ರಾವಣ ಭಜನಾ ಕಾರ್ಯಕ್ರಮ ಮುಕ್ತಾಯ ಮಾಡಿದರು.

ಕೃಷ್ಣಾ ನದಿ ತೀರದಲ್ಲಿರುವ ಬೆಳ್ಳುಬ್ಬಿ ಗ್ರಾಮದಲ್ಲಿ ನಡೆದ ಮಳೆ ಸ್ವಾಮಿ ಜಾತ್ರೆ ವಿಶಿಷ್ಟವಾಗಿತ್ತು. ಧಾರ್ಮಿಕ ಕಾರ್ಯಕ್ರಮದ ಜೊತೆಗೆ ವಿಶಿಷ್ಠವಾದ ಕ್ರೀಡೆಗಳು ನಡೆದಿದ್ದು ಕೂಡ ಗ್ರಾಮಸ್ಥರ ಸಂತಸವನ್ನು ಇಮ್ಮಡಿಗೊಳಿಸಿತ್ತು.

Leave a Reply

ಹೊಸ ಪೋಸ್ಟ್‌