ಸರ್ ಎಂ ವಿಶ್ವೇಶ್ವರಯ್ಯ ನಾಡು ಕಟ್ಟುವ ಶ್ರಮಿಕ ವರ್ಗದವರ ಪ್ರತಿನಿಧಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ದೇಶದ ಆರ್ಥಿಕತೆಯನ್ನು ಬಲಪಡಿಸುವ ರೈತರು, ಶ್ರಮಿಕ ವರ್ಗದವರೇ ನಿಜವಾಗಿ ನಾಡು ಕಟ್ಟುವವರು. ಈ ವರ್ಗದವರನ್ನು ಸರ್. ಎಂ. ವಿಶ್ವೇಶ್ವರಯ್ಯ ಪ್ರತಿನಿಧಿಸುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಎಂಜಿನಿಯರುಗಳ ದಿನಾಚರಣೆಯ ಅಂಗವಾಗಿ ಕೆ. ಆರ್. ವೃತ್ತದಲ್ಲಿ ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನಗಳನ್ನು ಸಲ್ಲಿಸಿದ ಅವರು ಬಿಬಿಎಂಪಿ ವತಿಯಿಂದ ನಿರ್ಮಿಸಿರುವ 160 ಅಡಿ ಕಾರಂಜಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಪಿರಮಿಡ್ ನ ಅತ್ಯಂತ ಕೆಳಸ್ತರದಲ್ಲಿ ದುಡಿಯುವ ವರ್ಗದವರು ನಮ್ಮ ಆರ್ಥಿಕತೆಯನ್ನು ಬೆಳೆಸುವ ಮೂಲ ಪುರುಷರು ಹಾಗೂ ತಾಯಂದಿರು. ವಿಶ್ವೇಶ್ವರಯ್ಯ ಅವರು ಈ ವರ್ಗದವರನ್ನು ಪ್ರತಿನಿಧಿಸುತ್ತಾರೆ. ವಿಶ್ವೇಶ್ವರಯ್ಯ ಅವರ ಸಾಧನೆ ಅಪಾರ. ಕೆ. ಆರ್. ಎಸ್ ಅಣೆಕಟ್ಟಿನಿಂದ ಹಿಡಿದು ಪಾಲಿಟೆಕ್ನಿಕ್, ಎಂಜಿನಿಯರಿಂಗ್ ಕಾಲೇಜುಗಳ ನಿರ್ಮಾಣ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಹಲವಾರು ಕಾರ್ಖಾನೆಗಳು, ಮಹಿಳೆಯರಿಗೆ ಮೀಸಲಾತಿ, ಮುಂತಾದ ಕ್ರಮಗಳ ಮೂಲಕ ಅತ್ಯಂತ ಪ್ರಗತಿಪರ ಚಿಂತನೆಗಳಿಂದ ಅವರು ನಾಡು ಕಟ್ಟಿದ್ದಾರೆ. ಅಂಥ ವ್ಯಕ್ತಿಗೆ ನಮನ ಸಲ್ಲಿಸುವ ದಿನವಿದು. ನಾವೂ ಸಹ ಅವರ ಹಾದಿಯಲ್ಲಿ ನಡೆದು, ಅವರಂತೆ ನಾಡು ಕಟ್ಟಲು ಸಣ್ಣ ಪ್ರಯತ್ನ ಮಾಡಲು ಸಂಕಲ್ಪ ಮಾಡುವ ದಿನವೆಂದು ನಾನು ಭಾವಿಸಿದ್ದೇನೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಕೆ. ಆರ್. ವೃತ್ತದಲ್ಲಿ ವಿಶ್ವೇಶ್ವರಯ್ಯ ಪ್ಲಾಜಾ ಕಟ್ಟಲಾಗಿದೆ. ಇಲ್ಲಿ ಮಿನಿ ಗ್ರಂಥಾಲಯ ಇದೆ. ಸಾರ್ವಜನಿಕರು ಇಲ್ಲಿ ಕುಳಿತುಕೊಂಡು ಓದಬಹುದು. ಇದೇ ರೀತಿ 30 ಜಂಕ್ಷನ್ ಗಳನ್ನು ಬೆಂಗಳೂರಿನಲ್ಲಿ ಅಭಿವೃದ್ಧಿ ಪಡಿಸಲು ಬಿಬಿಎಂಪಿ ತೀರ್ಮಾನಿಸಿದೆ. ಬೆಂಗಳೂರನ್ನು ಅಂದವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು.


ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ 160 ಅಡಿ ನೀರಿನ ಕಾರಂಜಿಯನ್ನು ಉದ್ಘಾಟಿಸಿದರು.

ವಿಶ್ವೇಶ್ವರಯ್ಯ ಅವರ ವಿದ್ಯುತ್ ಉತ್ಪಾದನೆ, ಶಿಕ್ಷಣ ಕ್ಷೇತ್ರಗಳಿಗೆ ನೀಡಿರುವ ಕೊಡುಗೆಗಳನ್ನು ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಸ್ಮರಿಸಿದರು.

ಈ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವ ಸಿ. ಸಿ. ಪಾಟೀn, ಜಲ‌ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಶಾಸಕ ರಿಜ್ವಾನ್ ಅರ್ಷದ್ ಉಪಸ್ಥಿತರಿದ್ದರು.

ಬಳಿಕ ಕರ್ನಾಟಕ ಎಂಜಿನಿಯರಿಂಗ್ ಸೇವಾ ಸಂಘದ ವತಿಯಿಂದ ನಿರ್ಮಿಸಿರುವ ಎಂಜಿನಿಯರ್ ಭವನ, ಎಂದಿನಿಯರ್ ಗಳ ತರಬೇತಿ ಕೇಂದ್ರವನ್ನು ಲೋಕಾರ್ಪಣೆ ಮಾಡಿ ಶತಮಾನೋತ್ಸವ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಸಿ. ಸಿ. ಪಾಟೀಲ, ಶಾಸಕ ರಿಜ್ವಾನ್ ಆರ್ಷದ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತಾ, ಸಂಸ್ಥೆಯ ಅಧ್ಯಕ್ಷ ಪೀತಾಂಬರಸ್ವಾಮಿ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌