ಬಸವ ಜನ್ಮಸ್ಥಳದಲ್ಲಿ ಪಂಚಮಸಾಲಿ ಸಮಾಜದ ವತಿಯಿಂದ ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ

ವಿಜಯಪುರ: ಪಂಚಮಸಾಲಿ ಸಮಾಜವನ್ನು 2A ಮೀಸಲಾತಿ ಪಟ್ಟಿಗೆ ಸೇರಿಸುವಂತೆ ಆಗ್ರಹಿಸಿ ಅಖಲ ಭಾರತ ಲಿಂಗಾಯಿತ ಪಂಚಮಸಾಲಿ ಮಹಾಸಭೆ ರಾಷ್ಟ್ರೀಯ ಯುವ ಘಟಕದ ವತಿಯಿಂದ ಬಸವಣ್ಣನವರ ಜನ್ಮಸ್ಥಳ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಬಸವೇಶ್ವರ ಚೌಕಿನಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಪಟ್ಟಣದ ಮಿನಿ ವಿಧಾನಸೌಧದ ವರೆಗೆ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅಖಿಲ ಭಾರತ ಲಿಂಗಾಯಿತ ಪಂಚಮಸಾಲಿ ಮಹಾಸಭೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಂಕರಗೌಡ ಬಿರಾದಾರ, ಅ. 1 ರೊಳಗೆ ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ-2ಎ ಮೀಸಲಾತಿ ಪಟ್ಟಿಯಲ್ಲಿ ಸೇರಿಸಬೇಕು ಎಂದು ಆಗ್ರಹಿಸಿದರು.

ಲಿಂಗಾಯಿತ ಪಂಚಮಸಾಲಿ ಸಮುದಾಯವನ್ನು 2A ಮೀಸಲಾತಿ ಪಟ್ಟಿಗೆ ಸೇರಿಸುವಂತೆ ಆಗ್ರಹಿಸಿ ಈಗಾಗಲೇ ಹಲವಾರು ಬಾರಿ ಹೋರಾಟವನ್ನು ಮಾಡಿದ್ದೇವೆ. ನ್ಯಾಯಯುತ ಬೇಡಿಕೆ ಈಡೇರಿಸುವಂತೆ ಮಹಾಸಭೆ ರಾಜ್ಯ ಸರಕಾರಕ್ಕೆ ಆರು ತಿಂಗಳ ಗಡುವು ನೀಡಿತ್ತು. ಈಗ ಆ ಗಡುವು ಮುಗಿದಿದೆ. ಆದರೆ, ಬೇಡಿಕೆ ಮಾತ್ರ ಇನ್ನೂ ಈಡೇರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ಲಿಂಗಾಯಿತ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವುದರಿಂದ ಈ ಸಮುದಾಯದ ಜನರಿಗೆ ಅನುಕೂಲವಾಗಲಿದೆ. ಈ ಬಗ್ಗೆ ನಾನಾ ರೀತಿಯಲ್ಲಿ ಹೋರಾಟವನ್ನು ಮಾಡಿದ್ದೇವೆ. ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮದ ಲಿಂಗಾಯಿತ ಪಂಚಮಸಾಲಿ ಜಗದ್ಗುರುಗಳಾದ ಶ್ರೀ ಬಸವ ಜಯ ಮೃತ್ಯುಂಜಯ ಮಹಾಸ್ವಾಮೀಜಿ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಈಗಾಗಲೇ ಸಮುದಾಯದ ಜನರೊಂದಿಗೆ ಬೃಹತ್ ಪಾದಯಾತ್ರೆ ಮತ್ತು ಮಹಾ ಜಾಥಾ ಹಾಗೂ ಧರಣಿ ಸತ್ಯಾಗ್ರಹ ನಡೆಸಿದ್ದಾರೆ. ಇದು ರಾಜ್ಯ ಸರಕಾರದ ಗಮನಕ್ಕೂ ಇದೆ. ಆದರೂ, ಸರಕಾರ ಮಾತ್ರ ನಮ್ಮ ಸಮುದಾಯದ ಬೇಡಿಕೆಗೆ ಈವರೆಗೆ ಸ್ಪಂದಿಸದಿರುವುದು ಸಮಾಜದ ಜನರಲ್ಲಿ ನೋವುಂಟು ಮಾಡಿದೆ ಎಂದು ಅವರು ಹೇಳಿದರು.

ಪ್ರತಿಭಟನೆಯಲ್ಲಿ ಪಾಲ್ಗೋಂಡ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ಲಿಂಗಾಯಿತ ಪಂಚಮಸಾಲಿ ಸಮಾಜ ಕೃಷಿಯನ್ನು ಅವಲಂಬಿಸಿರುವ ಸಮುದಾಯವಾಗಿದೆ. ಸಮಾಜದ ಶೇ. 80 ರಷ್ಟು ಜನ ಬೇಸಾಯವನ್ನೇ ನಂಬಿದ್ದಾರೆ. ಈ ಹಿನ್ನೆಲೆಯಲ್ಲಿ ಲಿಂಗಾಯಿತ ಪಂಚಮಸಾಲಿ ಸಮುದಾಯಕ್ಕೆ ಈಗ 2A ಮೀಸಲಾತಿ ಅಗತ್ಯವಾಗಿದೆ. ಸಮುದಾಯದ ಬಡ ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ನ್ಯಾಯಯುತವಾದ ಮೀಸಲಾತಿ ನಮಗೆ ಕೊಡಲೇಬೇಕು ಎಂದು ಹೇಳಿದರು.

ಸರಕಾರ ಅ. 1 ರೊಳಗೆ ಸರಕಾರ ಲಿಂಗಾಯಿತ ಪಂಚಮಸಾಲಿ ಸಮುದಾಯವನ್ನು 2A ಪಟ್ಟಿಗೆ ಸೇರಿಸಿ ಸಮುದಾಯದ ಬೇಡಿಕೆಯನ್ನು ಈಡೇರಿಸಬೇಕು. ಇಲ್ಲದಿದ್ದರೆ ಲಿಂಗಾಯಿತ ಪಂಚಮಸಾಲಿ ಸಮುದಾಯ ಮುಂಬರುವ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ವಿಶ್ರಾಂತ ಪ್ರಾಚಾರ್ಯ ಸುರೇಶಗೌಡ ಪಾಟೀಲ, ಜಗದೀಶ್ ಕೊಟ್ರಶೆಟ್ಟಿ, ಪಂಚಮಸಾಲಿ ಸಮಾಜದ ತಾಲೂಕ ಅಧ್ಯಕ್ಷರಾದ ಬಸವರಾಜ್ ಗೊಳಸಂಗಿ ಈ ಸಂದರ್ಭದಲ್ಲಿ ಮಾತನಾಡಿದರು.

ಈ ಪ್ರತಿಭಟನಾ ಮೆರವಣಿಗೆಯಲ್ಲಿ ತಾಲೂಕ ಯುವ ಘಟಕದ ಅಧ್ಯಕ್ಷ ಸಂಜುಗೌಡ ಬಿರಾದಾರ, ಪಂಚಸೇನೆ ಮುಖಂಡರಾದ ಸುನಿಲಗೌಡ ಚಿಕ್ಕೊಂಡ, ಸಮಾಜದ ಮುಖಂಡರಾದ ರಾಮನಗೌಡ ಪಾಟೀಲ(ಹೆಬ್ಬಾಳ), ಬಸವರಾಜ್ ಸೋಂಪುರ(ಮನಗೂಳಿ), ಬಸವರಾಜ ಹಾರಿವಾಳ, ಶೇಖರಗೌಡ ಪಾಟೀಲ, ವಿನೂತ ಕಲ್ಲೂರ, ಅಶೋಕ ಹಾರಿವಾಳ, ಎಂ. ಜಿ. ಆದಿಗೊಂಡ, ಸಿದ್ದು ಉಕ್ಕಲಿ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.

 

Leave a Reply

ಹೊಸ ಪೋಸ್ಟ್‌