ಆಲಮಟ್ಟಿ ಲಾಲ ಬಹದ್ದೂರ ಶಾಸ್ತ್ರಿ ಸಾಗರದ ಎತ್ತರ ಹೆಚ್ಚಳಕ್ಕೆ ಕ್ರಮ- ನೀರಾವರಿ ಸಚಿವ ಗೋವಿಂದ ಕಾರಜೋಳ

ಬೆಂಗಳೂರು: ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿರುವ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರದ ಎತ್ತರ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ನೀರಾವರಿ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ವಿಧಾನ ಸಭೆ ಅಧಿವೇಶನದಲ್ಲಿ ಮಾತನಾಡಿದ ಅವರು, ಕೃಷ್ಣಾ ನ್ಯಾಯಾಧೀಕರಣ ಅಂತಿಮ ಐತೀರ್ಪು ಗೆಜೆಟ್ ಅಧಿಸೂಚನೆ ಪ್ರಕಟಣೆಯಾದ ನಂತರ ಯೋಜನೆಯ ವಿವರವಾದ ಯೋಜನಾ ವರದಿಗೆ ಸಕ್ಷಮ ಪ್ರಾಧಿಕಾರಗಳ ತಿರುವಳಿಯೊಂದಿಗೆ ಆಲಮಟ್ಟಿ ಆಣೆಕಟ್ಟಿನ ಎತ್ತರವನ್ನು 519.60 ಮೀ. ದಿಂದ 524.256 ಮೀ. ಗೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ಆ. 25 ರಂದು ನವದೆಹಲಿಗೆ ತೆರಳಿ ಕೇಂದ್ರ ಜಲ ಶಕ್ತಿ ಸಚಿವಾಲಯದ ಕೇಂದ್ರ ಜಲ ಸಂಪನ್ಮೂಲ ಸಚಿವರನ್ನು ಬೇಟಿ ಮಾಡಿ ಕೃಷ್ಣಾ ನ್ಯಾಯಾಧೀಕರಣದ ತೀರ್ಪುನ್ನು ಆದ್ಯತೆ ಮೇರೆಗೆ ಗೆಜೆಟ್ ಪ್ರಕಟಣೆ ಮಾಡುವಂತೆ ಕೋರಲಾಗಿದೆ. ಅಲ್ಲದೇ, ಕೇಂದ್ರ ಸರಕಾರದಿಂದ ಗೆಜೆಟ್ ಅಧಿಸೂಚನೆ ಬಾಕಿ ಇರಿಸಿ ರಾಜ್ಯವು ಸಲ್ಲಿಸಿರುವ ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದ ವಿವರವಾದ ಯೋಜನಾ ವರದಿಯ ಅಪ್ರೈಸಲ್ ಕಾರ್ಯವನ್ನು ಕೈಗೆತ್ತಿಕೊಳ್ಳುವಂತೆ ಕೇಂದ್ರ ಜಲ ಆಯೋಗಕ್ಕೆ ನಿರ್ದೇಶನ ನೀಡಲು ಈ ಸಂದರ್ಭದಲ್ಲಿ ಮನವಿ ಮಾಡಲಾಗಿದೆ ಎಂದು ಬಸವನ ಬಾಗೇವಾಡಿ ಕಾಂಗ್ರೆಸ್ ಶಾಸಕ ಶಿವಾನಂದ ಎಸ್. ಪಾಟೀಲ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದ್ದಾರೆ.

2013 ರಿಂದ 2019ರ ವರೆಗೆ ಕಾಂಗ್ರೆಸ್ ಸರಕಾರ ಮತ್ತು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಅಧಿಕಾರದಲ್ಲಿ ಇದ್ದಾಗ ಏನು ಮಾಡಲಿಲ್ಲ. ಮಹಾರಾಷ್ಟ್ರದೊಂದಿಗೆ ಮಾತನಾಡಿ ಕೃಷ್ಣಾ ಜಲ ವಿವಾದದ ವಿಷಯದಲ್ಲಿ ಸರ್ವೋಚ್ಛ ನ್ಯಾಯಾಲಯದಲ್ಲಿ ಜಂಟಿಯಾಗಿ ಪ್ರಮಾಣ ವಚನ ಸಲ್ಲಿಸಿದ್ದೆವೆ. ನೀವು ಏನು ಮಾಡಲಿಲ್ಲ ಎಂದು ಅವರು ಹೇಳಿದರು.

ಸುಪ್ರೀಂ ಕೋರ್ಟ್ 2011ರ ಸೆ. 16 ರಂದು ನೀಡಿರುವ ತೀರ್ಪಿನಂತೆ ಕೃಷ್ಣಾ ನ್ಯಾಯಾಧೀಕರಣ-2ರ ಅಂತಿಮ ತೀರ್ಪನ್ನು ಗೆಜೆಟ್ ಪ್ರಕಟಣೆ ಮಾಡದಂತೆ ಕೇಂದ್ರ ಸರಕಾರಕ್ಕೆ ಆದೇಶಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಕೃಷ್ಣಾ ನ್ಯಾಯಾಧೀಕರಣ-2ರ ತೀರ್ಪಿನ ಕುರಿತಾಗಿ ಕರ್ನಾಟಕ, ತೆಲಂಗಾಣ ಮತ್ತು ಆಂಧ್ರ ಪ್ರದೇಶದ ರಾಜ್ಯಗಳು
ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಸಿರುವ ವಿಶೇಷ ಅನುಮತಿ ಅರ್ಜಿಗಳು ಇತ್ಯರ್ಥವಾಗಬೇಕಿದೆ ಮತ್ತು ಸುಪ್ರೀಂ ಕೋರ್ಟ್ ತೀರ್ಪನ್ನು ಮಾರ್ಪಡಿಸುವಂತೆ ಮತ್ತು ನ್ಯಾಯಾಧೀಕರಣ ತೀರ್ಪನ್ನು ಗೆಜೆಟ್ ಪ್ರಕಟಣೆ ಮಾಡಲು ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡುವಂತೆ 2019ರ ಫೆ. 18 ರಂದು ಸುಪ್ರೀಂ ಕೋರ್ಟಿಗೆ ರಾಜ್ಯ ಸರಕಾರ ಮಧ್ಯಕಾಲಿನ ಅರ್ಜಿಯನ್ನು ಸಲ್ಲಿಸಿದೆ. ಈ ಅರ್ಜಿಯಲ್ಲಿ ಕೇಂದ್ರ ಸರಕಾರವನ್ನು ಸೇರಿಸುವಂತೆ ಅನುಮತಿ ಕೋರಿ ಈ ವರ್ಷದ ಜ. 23 ರಂದು ಸುಪ್ರೀಂ ಕೋರ್ಟಿಗೆ ಅರ್ಜಿಯನ್ನು ಸಲ್ಲಿಸಲಾಗಿದೆ ಎಂದು ನೀರಾವರಿ ಸಚಿವ ಗೋವಿಂದ ಕಾರಜೋಳ ವಿವರವಾದ ಮಾಹಿತಿ ನೀಡಿದರು.

Leave a Reply

ಹೊಸ ಪೋಸ್ಟ್‌