ವಿಜಯಪುರ ನಗರದಲ್ಲಿ ಶೀಘ್ರದಲ್ಲಿ ಈಜುಕೋಳ ಪ್ರಾರಂಭ- ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ

ವಿಜಯಪುರ: ವಿಜಯಪುರ ನಗರದಲ್ಲಿ ಈಜುಕೊಳವನ್ನು ಪ್ರಾರಂಭಿಸಿ ಸಾರ್ವಜನಿಕರಿಗೆ ಮತ್ತು ಕ್ರೀಡಾಪಟುಗಳಿಗೆ ಅನುಕೂಲ ಮಾಡಿಕೊಡಿ ಎಂದು ಜಿಲ್ಲಾಧಿಕಾರಿ ಪಿ. ಸುನಿಲ ಕುಮಾರ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್, ಈಜುಕೊಳ, ವಾಕಿಂಗ್ ಟ್ರ್ಯಾಕ್, ಹೊರಾಂಗಣ ಜಿಮ್ ಅಳವಡಿಕೆ, ಒಳಾಂಗಣ ಕ್ರೀಡಾಂಗಣ ನಿರ್ಮಾಣದ ಹಾಗೂ ಸೈಕ್ಲಿಂಗ್ ವೆಲೊಡ್ರೋಮ್ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿದ ಅವರು, ಕನಕದಾಸ ಬಡಾವಣೆಯ ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನದಲ್ಲಿ ಒಳಾಂಗಣ ಈಜುಕೊಳವು ಪೂರ್ಣಗೊಂಡಿದೆ. ಅವಶ್ಯವಿರುವ ಸಿಬ್ಬಂದಿಗಳನ್ನು ಮತ್ತು ತರಬೇತುದಾರರನ್ನು ಆಯ್ಕೆ ಮಾಡಿ ಮುಂದಿನ ದಿನಗಳಲ್ಲಿ ಈಜುಕೊಳವನ್ನು ಪ್ರಾರಂಭಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ವಿಜಯಪುರ ನಗರದ ಭೂತನಾಳ ಹತ್ತಿರ ನಿರ್ಮಾಣದ ಹಂತದಲ್ಲಿರುವ ಸೈಕ್ಲಿಂಗ್ ವೆಲೊಡ್ರೋಮ್ ಕಾಮಗಾರಿ ಪ್ರಾರಂಭವಾಗಿದ್ದು, ಶೀಘ್ರವೇ ಕಾಮಗಾರಿಯನ್ನು ಪೂರ್ಣಗೊಳಿಸಿ ಕ್ರೀಡಾಪಟುಗಳಿಗೆ ಅನುಕೂಲ ಮಾಡಿ ಕೊಡಲಾಗುವುದು. ಜಿಲ್ಲಾ ಕ್ರೀಡಾಂಗಣ ಸಂಕಿರಣದ ಆವರಣದಲ್ಲಿರುವ ಮಳಿಗೆಗಳ ಬಾಡಿಗೆಯನ್ನು ನೀಡದವರ ವಿರುದ್ಧ ನೋಟೀಸು ನೀಡುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಕ್ರೀಡಾಂಗಣದ ಕಾಮಗಾರಿಗಳು ಶೀಘ್ರವಾಗಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಹಾಗೂ ಕ್ರೀಡಾಪಟುಗಳಿಗೆ ಅನುಕೂಲ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ತಿಳಿಸಿದರು.

ಈ ಸಂದರ್ಭದಲ್ಲಿ ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಎಸ್. ಜಿ. ಲೋಣಿ, ಲೋಕೋಪಯೋಗಿ ಇಲಾಖೆ ಎಕ್ಸಿಕ್ಯೂಟಿವ್ ಎಂಜಿನಿಯರ್ ಹಿರೇಗೌಡರ, ರಾಜ್ಯ ಸೈಕ್ಲಿಂಗ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ರಾಜು ಬಿರಾದಾರ, ವ್ಹಾಲಿಬಾಲ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಭೀಮಸೇನ ಎಂ. ಕೊಕರೆ, ಬಸವರಾಜ ಗೊಳಸಂಗಿ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌